ಬೆಂಗಳೂರು: ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ ಸೇರಿದಂತೆ ಹಲವು ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗೆ ನಿರ್ಣಾಯಕವಾದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಇಂದು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸುಸೂತ್ರವಾಗಿ ನಡೆಯಿತು. ಮೊದಲ ದಿನ ಜೀವಶಾಸ್ತ್ರ ಮತ್ತು ಗಣಿತ ಪರೀಕ್ಷೆ ನಡೆಯಿತು.
ಬೆಳಗ್ಗೆ 10.30ಕ್ಕೆ ಜೀವಶಾಸ್ತ್ರ ವಿಷಯದ ಪರೀಕ್ಷೆ ಆರಂಭವಾಗಿತ್ತು. 60 ಅಂಕಗಳ ಪರೀಕ್ಷೆಗೆ 80 ನಿಮಿಷಗಳ ಸಮಯ ನಿಗದಿ ಮಾಡಲಾಗಿತ್ತು. ಮಧ್ಯಾಹ್ನ 2.30ಕ್ಕೆ ಗಣಿತ ಪರೀಕ್ಷೆ ಜರುಗಿತು.
ಬೆಂಗಳೂರಿನ ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಪಿಯು ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಭೇಟಿ ನೀಡಿ ಪರಿಶೀಲಿಸಿದರು. ಪರೀಕ್ಷಾ ಅಕ್ರಮದ ಮೇಲೆ ನಿಗಾ, ಪರೀಕ್ಷಾ ಕೇಂದ್ರಗಳಲ್ಲಿನ ವ್ಯವಸ್ಥೆ ಸೇರಿದಂತೆ ಪರೀಕ್ಷಾ ಚಟುವಟಿಕೆಯ ಅವಲೋಕನ ಮಾಡಿದರು.
ನಾಳಿನ ಪರೀಕ್ಷೆ: ನಾಳೆ (ಶುಕ್ರವಾರ) ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಬೆಳಗ್ಗೆ 10.30ಕ್ಕೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ 2.30ಕ್ಕೆ ರಸಾಯನಶಾಸ್ತ್ರ ವಿಷಯದ ಪರೀಕ್ಷೆ ನಿಗದಿಯಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಟ್ಟು 737 ಕೇಂದ್ರಗಳಲ್ಲಿ ಸಿಇಟಿ ನಡೆಯುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 167 ಪರೀಕ್ಷಾ ಕೇಂದ್ರಗಳಿವೆ. ಈ ಬಾರಿ 3,49,637 ವಿದ್ಯಾರ್ಥಿಗಳು ಸಿಇಟಿ ಬರೆಯುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಒಂದು ಲಕ್ಷದಷ್ಟು ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಗತ್ಯ ರೀತಿಯ ಹೆಚ್ಚುವರಿ ವ್ಯವಸ್ಥೆ ಮತ್ತು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿಇಟಿ ಕರ್ತವ್ಯಕ್ಕೆ ಒಟ್ಟಾರೆ 20,300 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಬೇಸಿಗೆಯ ಝಳ ಇರುವುದರಿಂದ ಪರೀಕ್ಷಾ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತೆಯರು, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಕೆಡೆಟ್‌ಗಳನ್ನು ನಿಯೋಜನೆ ಮಾಡಲಾಗಿದೆ. ಪರೀಕ್ಷಾರ್ಥಿಗಳಿಗೆ ಉಷ್ಣ ಹವೆಯಿಂದ ಆರೋಗ್ಯದಲ್ಲಿ ವ್ಯತ್ಯಾಸವಾದಲ್ಲಿ ಪ್ರಥಮ ಚಿಕಿತ್ಸೆ, ಓಆರ್ಎಸ್ ನೀರು, ಗ್ಲೂಕೋಸ್ ನೀರು ಕೊಟ್ಟು ಉಪಚರಿಸಲು ವ್ಯವಸ್ಥೆ ಮಾಡಲಾಗಿದೆ.
ಏ.20ರಂದು ಹೊರನಾಡು ಕನ್ನಡಿಗರಿಗೆ ಪರೀಕ್ಷೆ: ಇದೇ 20ರಂದು ಬೆಳಗಾವಿ, ಮಂಗಳೂರು ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಹೊರನಾಡು ಮತ್ತು ಗಡಿನಾಡು ಕನ್ನಡ ಅಭ್ಯರ್ಥಿಗಳಿಗೆ ಬೆಳಗ್ಗೆ 11.30ರಿಂದ 12.30ರವರೆಗೆ ಕನ್ನಡ ಪರೀಕ್ಷೆ ನಡೆಯಲಿದೆ. ಈ ಸಲ ಒಟ್ಟು 1,545 ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಲಿದ್ದಾರೆ.
ಇದನ್ನೂ ಓದಿ: ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿಇಟಿ) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ - TET