ಬೆಂಗಳೂರು: ರಾಜ್ಯದಿಂದ ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ನಾಲ್ವರು ಬಿಜೆಪಿ ನಾಯಕರಿಗೂ ಎರಡೆರಡು ಖಾತೆಗಳ ಜವಾಬ್ದಾರಿ ನೀಡಿದ್ದು, ಸಿಕ್ಕ ಖಾತೆಗಳಿಗೆ ಎಲ್ಲ ಸಚಿವರು ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಜವಾಬ್ದಾರಿಯನ್ನು ನಾವು ಶಿರಸಾವಹಿಸಿ ನಿರ್ವಹಿಸಿ, ವಿಕಸಿತ ಭಾರತದ ಕನಸಿಗೆ ಸದಾ ದುಡಿಯುತ್ತೇವೆ ಎಂದು ಭರವಸೆ ನೀಡಿದ್ದಾರೆ.
ನಿರ್ಮಲಾ ಸೀತಾರಾಮನ್: ಮೋದಿ 3.0 ಸರ್ಕಾರದಲ್ಲಿ ಹಣಕಾಸು ಸಚಿವ ಸ್ಥಾನ ಮರಳಿ ನಿರ್ಮಲಾ ಸೀತಾರಾಮನ್ ಅವರಿಗೆ ಸಿಕ್ಕಿದ್ದು, ಮೋದಿ ನಾಯಕತ್ವದಲ್ಲಿ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ ಎಲ್ಲರಿಗೂ ಕೃತಜ್ಞತೆಗಳು. ಮೋದಿ ಮಾರ್ಗದರ್ಶನದೊಂದಿಗೆ ನಾವು ವಿಕಸಿತ ಭಾರತದ ದೃಷ್ಟಿಕೋನವನ್ನು ಪೂರೈಸುತ್ತೇವೆ ಎನ್ನುವ ಆಶ್ವಾಸನೆ ನೀಡಿದ್ದಾರೆ.
ಪ್ರಹ್ಲಾದ್ ಜೋಶಿ: ಮತ್ತೋರ್ವ ಸಂಪುಟ ದರ್ಜೆ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರದಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆಗಳ ಸಚಿವನಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಎನ್‌ಡಿಎ ಮೈತ್ರಿಕೂಟದ ಎಲ್ಲ ನಾಯಕರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಶೋಭಾ ಕರಂದ್ಲಾಜೆ: ಮೋದಿ ಸಂಪುಟದಲ್ಲಿ ಎರಡನೇ ಬಾರಿಗೆ ರಾಜ್ಯ ಖಾತೆ ಸಚಿವೆಯಾದ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದು, ನನ್ನ ಮೇಲೆ ವಿಶ್ವಾಸವಿಟ್ಟು, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ರಾಜ್ಯ ಖಾತೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಖಾತೆಯನ್ನು ನೀಡಿರುವುದು ಬಹಳಷ್ಟು ಆನಂದ ತಂದಿದೆ. ಒಬ್ಬ ಸಚಿವೆಯಾಗಿ ಹಾಗೂ ಸಂಸದೆಯಾಗಿ ಈ ಎರಡು ಖಾತೆಗಳು ನನಗೆ ದೇಶದ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುವ ಅವಕಾಶ ನೀಡಿವೆ ಹಾಗೂ ಆಡಳಿತ ಜವಾಬ್ದಾರಿಯನ್ನು ಹೆಚ್ಚಿಸಿವೆ ಎಂದಿದ್ದಾರೆ.
ನನ್ನ ಮೇಲೆ ವಿಶ್ವಾಸವಿಟ್ಟು ಈ ಉನ್ನತ ಜವಾಬ್ದಾರಿಯನ್ನು ನನಗೆ ವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಹಾಗೆಯೇ ನನ್ನೊಂದಿಗೆ ಸಚಿವರಾಗಿ ಆಯ್ಕೆಯಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ಹೆಚ್.ಡಿ.ಕುಮಾರಸ್ವಾಮಿ ಹಾಗೂ ವಿ.ಸೋಮಣ್ಣ ಅವರಿಗೂ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಜವಾಬ್ದಾರಿಯನ್ನು ನಾನು ಶಿರಸಾವಹಿಸಿ ನಿರ್ವಹಿಸಿ, ವಿಕಸಿತ ಭಾರತದ ಕನಸಿಗೆ ಸದಾ ದುಡಿಯುತ್ತೇನೆ ಎನ್ನುವ ಭರವಸೆಯನ್ನು ಈ ಮೂಲಕ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ವಿ.ಸೋಮಣ್ಣ: ಮೊದಲ ಬಾರಿ ಸಂಸದರಾಗಿ ಮೋದಿ ಸಂಪುಟ ಸೇರಿರುವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದು, ನನ್ನ ರಾಜಕೀಯ ಬದುಕಿನ ಹೊಸ ಅಧ್ಯಾಯವನ್ನು ತೆರೆದಂತೆ, ನನಗೆ ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾಗಿ, ಉಭಯ ಖಾತೆಗಳ ಜವಾಬ್ದಾರಿಯನ್ನು ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ವಹಿಸಿದಂತಹ ಈ ಜವಾಬ್ದಾರಿಗಳನ್ನು ಅತ್ಯಂತ ನಿಷ್ಠೆಯಿಂದ ದೇಶದ ಪ್ರಗತಿಯ ಕನಸಿಗೆ ಪೂರಕವಾಗುವಂತೆಯೇ ನಿರಂತರ ದುಡಿಯುತ್ತೇನೆ. ನನ್ನೊಂದಿಗೆ ಸಚಿವ ಸಂಪುಟದಲ್ಲಿ ಖಾತೆಗಳನ್ನು ಪಡೆದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ಹೆಚ್.ಡಿ.ಕುಮಾರಸ್ವಾಮಿ ಮತ್ತು ಶೋಭಾ ಕರಂದ್ಲಾಜೆಯವರು ಹಾಗೂ ನೂತನ ಸಚಿವ ಸಂಪುಟದ ಎಲ್ಲಾ ಸಹಮಿತ್ರರಿಗೂ ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿ 3.0 ಕ್ಯಾಬಿನೆಟ್: ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಪಟ್ಟಿ - Allocation of Portfolios