ರಾಯಚೂರು: ರಾಜ್ಯದಿಂದ ತೆರಿಗೆ ರೂಪದಲ್ಲಿ 4 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಆದರೆ ಕಳೆದ ಆರು ತಿಂಗಳಿನಿಂದ ಕೇಂದ್ರವು ರಾಜ್ಯಕ್ಕೆ ಯಾವುದೇ ಅನುದಾನ ನೀಡಿಲ್ಲ ಎಂದು ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ದೂರಿದರು. ಇಂದು ರಾಯಚೂರು ನಗರದ ನಗರಸಭೆ ಕಚೇರಿ ಭೇಟಿ ನೀಡಿದ ಬಳಿಕ ಪುಷ್ ಕಾರ್ಟ್‌ಗಳ ಉದ್ಘಾಟನೆ, ಪೌರಕಾರ್ಮಿಕರಿಗೆ ಸುರಕ್ಷತಾ ಕಿಟ್‍ಗಳನ್ನು ವಿತರಿಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಕೇಂದ್ರ ಸರ್ಕಾರಕ್ಕೆ ಕಳೆದ 6 ತಿಂಗಳಿಂದ ರಾಜ್ಯದ ಸಚಿವರು, ಮುಖ್ಯಮಂತ್ರಿಗಳು ಬರಗಾಲದ ಕುರಿತು ನಿರಂತರ ಮನವರಿಕೆ ಮಾಡುತ್ತಿದ್ದಾರೆ. ಆದರೆ ಯಾವುದೇ ಅನುದಾನ ಬರುತ್ತಿಲ್ಲ. ಈಗಾಗಲೇ ಬರ ಅಧ್ಯಯನ ತಂಡ ಬಂದು ಪರಿಶೀಲಿಸಿ ವರದಿ ಸಲ್ಲಿಸಿದೆ. ಆದರೂ ಕೇಂದ್ರ ಸರ್ಕಾರ ಪರಿಹಾರ ನೀಡುವಲ್ಲಿ ವಿಳಂಬವಹಿಸುತ್ತಿದೆ ಎಂದರು.
ನವದೆಹಲಿಯಲ್ಲಿ ಪ್ರತಿಭಟನೆ: ತಾರತಮ್ಯ ನೀತಿ ಖಂಡಿಸಿ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಧರಣಿ ಹಮ್ಮಿಕೊಂಡಿದ್ದು, ನಾನೂ ಹೋಗುತ್ತಿದ್ದೇನೆ. ನಿಜವಾಗಿಯೂ ಹೋರಾಟದ ಅನಿವಾರ್ಯತೆ ಇದೆ. ನಮ್ಮ ರಾಜ್ಯದ ಹಣ ನಮಗೆ ನೀಡಲು ಅವರಿಗೇನು ತೊಂದರೆ ಇದೆ?. ಬರ ಪರಿಹಾರವಾಗಿ ಈವರೆಗೂ ಒಂದೂ ನಯಾಪೈಸೆಯನ್ನೂ ಕೇಂದ್ರ ಸರ್ಕಾರ ನೀಡಿಲ್ಲ. ಈ ನಿಟ್ಟಿನಲ್ಲಿ ಫೆ.7ರಂದು ದೆಹಲಿಯಲ್ಲಿ ಹೋರಾಟ ಮಾಡುವುದಾಗಿ ಅವರು ಮಾಹಿತಿ ನೀಡಿದರು.
ರಾಯಚೂರಿಗೆ ಮಹಾನಗರ ಪಾಲಿಕೆ ಶೀಘ್ರ: ರಾಯಚೂರು ನಗರಸಭೆ ಇಷ್ಟರಲ್ಲೇ ಮಹಾನಗರ ಪಾಲಿಕೆ ಆಗಲಿದೆ. ರಾಜ್ಯದ ರಾಯಚೂರು, ಬೀದರ್ ಹಾಗೂ ಹಾಸನ ಸೇರಿದಂತೆ ಮೂರು ನಗರಸಭೆಗಳು ಮಹಾನಗರ ಪಾಲಿಕೆ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಇದೆ. ಪೌರಾಡಳಿತ ಇಲಾಖೆಗೆ ಈ ಮೂರು ಜಿಲ್ಲೆಗಳಿಗೆ ಮಹಾನಗರ ಪಾಲಿಕೆ ನೀಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಸಚಿವ ಎನ್.ಎಸ್.ಬೋಸರಾಜು ಈ ಸಂದರ್ಭದಲ್ಲಿ ಸಚಿವರ ಜೊತೆಗಿದ್ದರು.
ಇದನ್ನೂ ಓದಿ: ರೈತರ ಬೇಡಿಕೆ, ಹಕ್ಕುಗಳ ಮೇಲೆ ರಾಜ್ಯ ಬಜೆಟ್ ಮಂಡಿಸಲಿ: ಸಚಿವ ಸತೀಶ್‌ಗೆ ರೈತ ಸಂಘ ಮನವಿ