ಬೆಂಗಳೂರು: ''ಕೇಂದ್ರ ಸರ್ಕಾರದಿಂದ ಉದ್ಯೋಗ ಸೃಷ್ಟಿಸಲು ಸಾಕಷ್ಟು ಯೋಜನೆಗಳನ್ನು ತರಲಾಗಿದೆ. ಅದರಲ್ಲಿ ರೋಜ್ಗಾರ್ ಮೇಳ ಪ್ರಮುಖವಾಗಿದೆ. ಅಲ್ಲಿ ನೇರವಾಗಿ ನೇಮಕಾತಿ ಆದೇಶವನ್ನು ನೀಡಲಾಗುತ್ತಿದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಾಕಷ್ಟು ಜನರಿಗೆ ಕೆಲಸವನ್ನು ನೀಡುತ್ತಿದೆ. ಸ್ವಸಹಾಯ ಸಂಘಗಳಿಗೂ ಸಹ ಸಾಕಷ್ಟು ಪ್ರೋತ್ಸಾಹವನ್ನು ನೀಡಿ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗಿದೆ'' ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕುಮಾರಕೃಪ ರಸ್ತೆಯಲ್ಲಿರುವ ಲಲಿತ್ ಅಶೋಕ್ ಹೋಟೆಲ್ನಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ''ಪಿಎಂ ಸ್ವನಿಧಿ ಬೀದಿ ಬದಿ ವ್ಯಾಪಾರಿಗಳ ಕೈಯನ್ನು ಬಲಪಡಿಸುತ್ತಿದೆ. ಮುದ್ರಾ ಯೋಜನೆ ಸಣ್ಣ ವ್ಯಾಪಾರಿಗಳಿಗೆ ನೀಡಲಾಗುತ್ತಿದ್ದು, ಅದರಿಂದ ಲಕ್ಷಾಂತರ ಜನರು ಪ್ರಯೋಜನವನ್ನು ಪಡೆದಿದ್ದಾರೆ. ಸಣ್ಣ ಕೈಗಾರಿಕೆಗಳಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಒದಗಿಸಿ ಅವುಗಳನ್ನು ಉನ್ನತೀಕರಿಸುವ ಕಾರ್ಯ ನಡೆಯುತ್ತಿದೆ. ಎಂಎಸ್‍ಎಂಇಗಳಿಗೆ ರಫ್ತು ಹಬ್ ತೆರೆಯಲಾಗುತ್ತಿದೆ. ಇದು ಜಾಗತಿಕ ಮಾರುಕಟ್ಟೆ ಹುಡುಕಾಟ ಮತ್ತು ರಫ್ತಿಗೆ ಸಣ್ಣ ಕೈಗಾರಿಕೆದಾರರ ನೆರವಿಗೆ ಬರಲಿದ್ದು, ಸಾಕಷ್ಟು ಉದ್ಯೋಗ ಸಹ ಸೃಷ್ಟಿಯಾಗಲಿದೆ'' ಎಂದು ಹೇಳಿದರು.
''ಯುವಜನರಿಗೆ ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು ಕೊಡಲಾಗಿದೆ. ಮೊದಲ ಬಾರಿಗೆ ಉದ್ಯೋಗ ಪಡೆಯುವವರಿಗೆ, ಈಗಾಗಲೇ ಉದ್ಯೋಗ ಹೊಂದಿದ್ದು, ಬೇರೆಡೆ ಉದ್ಯೋಗ ಪಡೆಯುವವರು, ಉದ್ಯೋಗದಾತರಿಗೆ ಕೊಡುಗೆಗಳನ್ನು ನೀಡಿದ್ದು, ಇವೆಲ್ಲವೂ ಭವಿಷ್ಯನಿಧಿ ಸಂಘಟನೆ (ಇಪಿಎಫ್‍ಒ) ಮೂಲಕ ಜಾರಿ ಆಗಲಿವೆ. ಆಧುನಿಕ ಕೌಶಲ್ಯ ವೃದ್ಧಿಗೆ ರಾಜ್ಯಗಳ ಸಹಯೋಗದಲ್ಲಿ ಐಟಿಐಗಳನ್ನು ಬಳಸಿಕೊಳ್ಳಲಿದ್ದೇವೆ. ದೇಶದ ಸರ್ವಶ್ರೇಷ್ಠ 500 ಕಂಪನಿಗಳಲ್ಲಿ ಇಂಟರ್ನ್‍ಶಿಪ್ ಅವಕಾಶವನ್ನೂ ಕಲ್ಪಿಸಲಾಗುತ್ತಿದೆ. ಉನ್ನತ ಶಿಕ್ಷಣಕ್ಕೆ 10 ಲಕ್ಷ ರೂ. ಸಾಲ ಕೊಡಲಿದ್ದು, ಇದರಿಂದ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಗಲಿದೆ'' ಎಂದು ಮಾಹಿತಿ ನೀಡಿದರು.
ನೆರೆದಿದ್ದ ಆರ್ಥಿಕ ತಜ್ಞರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮಹಿಳಾ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ಕೆಲಸ ಮಾಡುತ್ತಿರುವ ಮಹಿಳೆಯರಿಗಾಗಿ ಮಹಿಳಾ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ಎಂಎಸ್‍ಎಂಇಗಳು ದುಡಿಯುವ ಬಂಡವಾಳಕ್ಕೆ ವಾಣಿಜ್ಯ ಬ್ಯಾಂಕ್‍ಗಳಿಂದ ಸಾಲ ಪಡೆಯುತ್ತಿದ್ದವು. ಬ್ಯಾಂಕ್‍ಗಳು ಇನ್ನು ಮುಂದೆ ಯಂತ್ರೋಪಕರಣ, ಪೂರಕ ಉಪಕರಣ ಖರೀದಿಗೆ ಸಾಲ ಕೊಡಲಿವೆ. ಇದಕ್ಕೆ ಭದ್ರತೆಯ ಅವಶ್ಯಕತೆ ಇರುವುದಿಲ್ಲ'' ಎಂದು ಉತ್ತರಿಸಿದರು.
ಬೆಂಗಳೂರಿನ ಆರ್ಥಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿಯ ಕುರಿತ ಪ್ರಶ್ನೆಗೆ ಉತ್ತರಿಸಿ, ''ಇಸ್ರೋ ಬಾಹ್ಯಾಕಾಶ ಕೇಂದ್ರಕ್ಕೆ ಸಾಕಷ್ಟು ವೆಂಚರ್ ಕ್ಯಾಪಿಟಲ್ ನೀಡಲಾಗಿದ್ದು, ಅದರ ಸಂಬಂಧಿತ ಕೆಲಸಗಳು ಬೆಂಗಳೂರಿನಲ್ಲಿ ನಡೆಯಲಿದೆ. ಇದು ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ. ಏಂಜೆಲ್ ಟ್ಯಾಕ್ಸ್ ಅನ್ನು ಯುಪಿಎ ಸರ್ಕಾರ 2012 ರಲ್ಲಿ ಜಾರಿ ಮಾಡಿತ್ತು. ಇದೀಗ ಅದನ್ನು ರದ್ದು ಮಾಡಲಾಗಿದೆ. ಇದು ಗರಿಷ್ಠ ಸ್ಟಾರ್ಟ್ಅಪ್ಗಳನ್ನು ಹೊಂದಿದ ಬೆಂಗಳೂರಿಗೆ ನೆರವು ನೀಡಲಿದ್ದು, ಇದರಿಂದಲೂ ಅಪಾರ ಪ್ರಮಾಣದ ಉದ್ಯೋಗ ಸೃಷ್ಟಿಯಾಗಲಿದೆ'' ಎಂದು ಸಚಿವರು ತಿಳಿಸಿದರು.