ಬೆಂಗಳೂರು: ಕೇಂದ್ರ ಸರ್ಕಾರದಿಂದ ನಿಷೇಧಿಸಲ್ಪಟ್ಟಿರುವ ಎಲೆಕ್ಟ್ರಾನಿಕ್ ಸಿಗರೇಟುಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಶೋಯೆಬ್ ಬಂಧಿತ ಆರೋಪಿ. ಈತನಿಂದ 3 ಕೋಟಿ ರೂ. ಮೌಲ್ಯದ ಇ-ಸಿಗರೇಟುಗಳನ್ನ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಶೋಯೆಬ್ ಕೆಲಕಾಲ ದುಬೈನಲ್ಲಿದ್ದು, ಬಳಿಕ ಭಾರತಕ್ಕೆ ಮರಳಿದ್ದ. ನಂತರ ಬೆಂಗಳೂರಿಗೆ ಬಂದು ಸುದ್ದಗುಂಟೆಪಾಳ್ಯದ ಸಹೋದರನ ಮನೆಯಲ್ಲಿ ವಾಸವಿದ್ದ. ದುಬೈಯಿಂದ ದೆಹಲಿ, ದೆಹಲಿಯಿಂದ ಬೆಂಗಳೂರಿಗೆ ಕೋರಿಯರ್ ಮೂಲಕ ಇ-ಸಿಗರೇಟ್ ತರಿಸಿಕೊಳ್ಳುತ್ತಿದ್ದ ಆರೋಪಿ ಮನೆಯಲ್ಲಿಯೇ ಅವುಗಳನ್ನ ಸಂಗ್ರಹಿಸಿಟ್ಟುಕೊಂಡು ಗಿರಾಕಿಗಳಿಗೆ ಸರಬರಾಜು ಮಾಡುತ್ತಿದ್ದ. ಆರೋಪಿಯ ಕುರಿತು ಖಚಿತವಾದ ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಸಿಸಿಬಿಯ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ಬಂಧಿತನಿಂದ ಬರೋಬ್ಬರಿ 3 ಕೋಟಿ ಮೌಲ್ಯದ 6 ಸಾವಿರ ಇ-ಸಿಗರೇಟುಗಳನ್ನ ವಶಕ್ಕೆ ಪಡೆಯಲಾಗಿದ್ದು, ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಬಿ ದಯಾನಂದ್ ಮಾತನಾಡಿ, "ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಇ-ಸಿಗರೇಟ್ಗಳು ನಗರಕ್ಕೆ ಬರುತ್ತಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ 3 ಕೋಟಿ ರೂಪಾಯಿ ಮೌಲ್ಯದ ಇ- ಸಿಗರೇಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 6 ಸಾವಿರ ಇ ಸಿಗರೇಟ್ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಕೇರಳ ಮೂಲದವನಾಗಿದ್ದಾನೆ. ಈತ ಮುಂಚೆ ದುಬೈನಲ್ಲಿದ್ದು ನಂತರ ಬೆಂಗಳೂರಿಗೆ ಬಂದು ತನ್ನ ತಮ್ಮನ ಮನೆಯಲ್ಲಿ ವಾಸವಾಗಿದ್ದ, ಮನೆಯಲ್ಲಿ ಇ- ಸಿಗರೇಟ್ಗಳನ್ನು ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ರೌಡಿ ಶೀಟರ್ ಹತ್ಯೆ ಪ್ರಕರಣ: ಐವರು ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು
ಅಕ್ರಮ ಜೂಜು ಅಡ್ಡೆ ಮೇಲೆ ಸಿಸಿಬಿ ದಾಳಿ (ಬೆಂಗಳೂರು): ಇತ್ತೀಚಿಗೆ, ಚಿನ್ನದ ವ್ಯಾಪಾರಿಯ ಫ್ಲ್ಯಾಟ್ನಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ್ದ ಸಿಸಿಬಿಯ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಆರು ಜನ ಆರೋಪಿಗಳನ್ನು ಬಂಧಿಸಿದ್ದರು. ಜಿನೇಂದ್ರ, ಮನೀಶ್, ಮುಕೇಶ್, ಲಲಿತ್, ರೋಹಿತ್ ಹಾಗೂ ಸಂಜಯ್ ಬಂಧಿತ ಆರೋಪಿಗಳು. ಜೂಜಾಟದ ಸ್ಥಳದಲ್ಲಿದ್ದ ದಾಖಲೆ ಇಲ್ಲದ ಎರಡು ಹಣದ ಬ್ಯಾಗ್ಗಳು ಪತ್ತೆಯಾಗಿದ್ದು, ಒಟ್ಟು 85 ಲಕ್ಷ ರೂ. ಹಣವನ್ನು ಜಪ್ತಿ ಮಾಡಲಾಗಿತ್ತು.
ಜನವರಿ 7ರಂದು ಜೆ.ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿರ್ಸಿ ಸರ್ಕಲ್ ಬಳಿಯಿರುವ ಪಾರ್ಕ್ ವೆಸ್ಟ್ ಅಪಾರ್ಟ್‌ಮೆಂಟಿನಲ್ಲಿರುವ ರಾಜ್ ಜೈನ್ ಎಂಬಾತನ ಫ್ಲ್ಯಾಟಿನಲ್ಲಿ ಜೂಜು ಆಟ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳ ತಂಡ ಆಟದ ಟೇಬಲ್ ಮೇಲಿದ್ದ 1.48 ಲಕ್ಷ ಹಣ ಜಪ್ತಿ ಮಾಡಿದ್ದರು. ಅದೇ ಫ್ಲ್ಯಾಟ್ನಲ್ಲಿ ಶೋಧ ನಡೆಸಿದಾಗ 85.39 ಲಕ್ಷ ರೂ. ಪತ್ತೆಯಾಗಿತ್ತು.