ಬೆಂಗಳೂರು: ''ವಾಲ್ಮೀಕಿ ನಿಗಮ ಹಗರಣ ಪ್ರಕರಣದ ತನಿಖೆಯನ್ನು ಹಸ್ತಾಂತರ ಮಾಡುವ ಕುರಿತಂತೆ ಸಿಬಿಐನಿಂದ ಈವರೆಗೂ ಅಧಿಕೃತ ಪತ್ರ ಬಂದಿಲ್ಲ. ಬಂದರೆ ಪರಿಶೀಲಿಸಿ ಕ್ರಮ ವಹಿಸಲಾಗುತ್ತದೆ'' ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವ ನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ವಾಲ್ಮೀಕಿ ನಿಗಮ ಹಣಕಾಸು ಅವ್ಯವಹಾರ ಪ್ರಕರಣದ ತನಿಖೆಯನ್ನು ಹಸ್ತಾಂತರ ಮಾಡುವಂತೆ ಈವರೆಗೂ ಸಿಬಿಐ ನಮಗೆ ಪತ್ರ ಬರೆದಿಲ್ಲ. ಆದರೆ, ಓರಲಿ ಕೇಳಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಅಧಿಕೃತವಾಗಿ ನಮಗೆ ಪತ್ರ ಬಂದಿಲ್ಲ ಎನ್ನುವ ಮಾಹಿತಿ ಇದೆ. ನಿನ್ನೆ ಮೊನ್ನೆ ಏನಾದರೂ ಬಂದಿದ್ದರೆ. ಅದರ ಪ್ರಕಾರ ತೀರ್ಮಾನ ಕೈಗೊಳ್ಳಲಾಗುತ್ತದೆ'' ಎಂದರು.
''ಇಷ್ಟು ದಿನ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿತ್ತು. ಎರಡು ತಿಂಗಳಿಗೂ ಹೆಚ್ಚು ಕಾಲ ಮಾದರಿ ನೀತಿ ಸಂಹಿತೆ ಇತ್ತು. ಸರ್ಕಾರದ ಮಟ್ಟದಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಆಗಿರಲಿಲ್ಲ. ಈಗ ಅದಕ್ಕೆಲ್ಲ ಚಾಲನೆ ಕೊಡಲಾಗುತ್ತದೆ. ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ'' ಎಂದರು.
''ಹಿರಿಯರ ಅಭಿಪ್ರಾಯ ಕೇಳುತ್ತಿಲ್ಲ ಎಂದು ಸಂದರ್ಭಾನುಸಾರ ನಾವು ಆ ಮಾತುಗಳನ್ನು ಹೇಳುತ್ತೇವೆ. ಅಷ್ಟು ಬಿಟ್ಟರೆ ನಮ್ಮಲ್ಲಿ ಯಾವುದೇ ಒಳ ಜಗಳಗಳಾಗಲಿ ಗೊಂದಲಗಳಾಗಲಿ ಇಲ್ಲ. ಎಲ್ಲಿ ಜಗಳವಾಗಿದೆ, ಎಲ್ಲಿ ಗೊಂದಲವಾಗಿದೆ ಎಲ್ಲಿ ನೋಡಿದ್ದರೋ ಗೊತ್ತಿಲ್ಲ, ಯಾವುದೋ ಒಂದು ವಿಚಾರದಲ್ಲಿ ಭಿನ್ನವಾದ ಅಭಿಪ್ರಾಯ ಬರುವುದು ಸಹಜ. ಒಬ್ಬರು ಹೇಳಿದ್ದನ್ನು ಇನ್ನೊಬ್ಬರು ಕೇಳಬೇಕು ಎನ್ನುವುದಿಲ್ಲ ಅಭಿಪ್ರಾಯ ಭೇದ ಇದ್ದೇ ಇರುತ್ತದೆ. ಇದನ್ನು ಹೊರತುಪಡಿಸಿದರೆ, ಯಾವುದೇ ಸಮಸ್ಯೆ ಇಲ್ಲ'' ಎಂದು ಹಿರಿಯರ ಅಭಿಪ್ರಾಯ ಕಡೆಗಣನೆ ಆರೋಪ ತಳ್ಳಿಹಾಕಿದರು.
''ಸಚಿವ ಸಂಪುಟದಲ್ಲಿ ನಾವು ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇವೆ. ಸರ್ಕಾರಕ್ಕೆ ಸಂಬಂಧಪಟ್ಟ ತೀರ್ಮಾನಗಳನ್ನು ಅಲ್ಲೇ ಚರ್ಚಿಸುತ್ತೇವೆ. ಪಕ್ಷಕ್ಕೆ ಸಂಬಂಧಪಟ್ಟ ತೀರ್ಮಾನಗಳನ್ನು ಕೋರ್ ಕಮಿಟಿ ಸಭೆ, ಪದಾಧಿಕಾರಿಗಳ ಸಭೆಯಲ್ಲಿ ಚರ್ಚಿಸಬಹುದು. ಅದಕ್ಕೆ ಅವಕಾಶಗಳನ್ನು ಅಧ್ಯಕ್ಷರು ಕೊಡಬೇಕಾಗಲಿದೆ ಅವರು ಅದನ್ನು ಮಾಡುತ್ತಾರೆ'' ಎಂದರು.
''ನನ್ನ ಜಿಲ್ಲೆಯು ಸೇರಿ ನಾವು ಅನೇಕ ಕಡೆ ಸೋತಿದ್ದೇವೆ, 17 ಜನ ಸಚಿವರು ಅವರ ಜಿಲ್ಲೆಗಳಲ್ಲಿ ಸೋತಿದ್ದೇವೆ. ಅದಕ್ಕೆ ಪರಿಶೀಲನೆ ಮಾಡುವುದು ಆತ್ಮಾವಲೋಕನ ಮಾಡುವುದು ಅಗತ್ಯ ಇದೆ. ನಾವೆಲ್ಲರೂ ಇದನ್ನ ಒಪ್ಪುತ್ತೇವೆ, ಪಕ್ಷದ ಸೂಚನೆಯನ್ನು ಪಾಲಿಸುವ ಪದ್ಧತಿ ನಮ್ಮಲ್ಲಿ ಇದೆ, ಅದನ್ನ ಮಾಡುತ್ತೇವೆ'' ಎಂದು ಹೇಳಿದರು.
''ನಾಗೇಂದ್ರ ರಾಜೀನಾಮೆ ನಂತರವೂ ಬಿಜೆಪಿಯವರು ಸಿಎಂ ಸಿದ್ದರಾಮಯ್ಯ, ಬಸನಗೌಡ ದದ್ದಲ್ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಆದರೆ, ತನಿಖೆ ಪ್ರಾರಂಭವಾಗಿದೆ. ಜೊತೆಗೆ ಸಿಬಿಐಗೆ ಬ್ಯಾಂಕ್ ಪತ್ರ ಬರೆದ ಹಿನ್ನೆಲೆಯಲ್ಲಿ ಸಿಬಿಐ ಕೂಡ ಪ್ರವೇಶ ಮಾಡಿದೆ. ತನಿಖೆ ಆಗಲಿ ಏನು ಸತ್ಯ ಬರಲಿದೆ ಎಂದು ಗೊತ್ತಾಗಲಿದೆ. ವಿಶೇಷ ತನಿಖಾ ದಳಕ್ಕೆ ಆದಷ್ಟು ಶೀಘ್ರ ತನಿಖೆ ಮಾಡಿ ಎಂದು ಹೇಳಿದ್ದೇವೆ. ಇಷ್ಟೇ ದಿನದಲ್ಲಿ ತನಿಖೆ ಮಾಡಿ ಎಂದು ಹೇಳಲು ಸಾಧ್ಯವಿಲ್ಲ ಹೇಳಿದರೂ ಅದು ಅಸಾಧ್ಯ ಅವರಿಗೆ ಕಾಲಮಿತಿಯ ಅಗತ್ಯವಿರಲಿದೆ'' ಎಂದು ಡೆಡ್ ಲೈನ್ ಬೇಡಿಕೆ ತಳ್ಳಿಹಾಕಿದರು.
''ಪ್ರಕರಣ ಸಂಬಂಧ ಹೇಳಿಕೆಗಳು, ಆರೋಪಿಗಳ ಹೇಳಿಕೆಗಳು, ಬಂಧಿತರ ಹೇಳಿಕೆ ಎಲ್ಲವನ್ನು ಪರಿಶೀಲಿಸಬೇಕಾಗಲಿದೆ. ಸಾಕ್ಷಿನಾಶ ಸಂಬಂಧ ಶರಣಪ್ರಕಾಶ್ ಪಾಟೀಲ್ ಕಚೇರಿಯಲ್ಲಿ ಸಭೆ ನಡೆದಿದೆ ಎಂದರೆ ಅದನ್ನು ಪರಿಶೀಲನೆ ಮಾಡಲಿ. ಸಿಸಿಟಿವಿ ಫೋಟೋ ಎಲ್ಲವೂ ಸಿಗಲಿದೆ. ಎಸ್ಐಟಿಗೆ ಅಗತ್ಯವೆನಿಸಿದರೆ ಪರಿಶೀಲನೆ ಮಾಡಬಹುದು'' ಎಂದು ತಿಳಿಸಿದರು.
ಇದನ್ನೂ ಓದಿ: ನರೇಂದ್ರ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಗಡಿ ಜಿಲ್ಲೆಯ ಮಹಿಳೆಗೆ ಆಹ್ವಾನ - Modi Oath Taking Ceremony