ಮಂಡ್ಯ: ರೈತರ ಜೀವನಾಡಿ ಕೆಆರ್ಎಸ್ ಜಲಾಶಯದಿಂದ ವಿಶ್ವೇಶ್ವರಯ್ಯ ನಾಲೆಗೆ ಆರು ತಿಂಗಳ ಬಳಿಕ ಕಾವೇರಿ ನೀರು ಹರಿಸಲಾಗಿದೆ. ನಾಲೆಯಲ್ಲಿ ನೀರು ಕಂಡು ರೈತರಲ್ಲಿ ಸಂತಸ ಮೂಡಿದೆ. ಕಳೆದ ಆರು ತಿಂಗಳಿಂದ ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾಮಗಾರಿಯನ್ನು 300 ಕೋಟಿ ರೂ. ಅನುದಾನದಲ್ಲಿ ನಡೆಸಲಾಗಿತ್ತು. ಕಾಮಗಾರಿ ಇನ್ನೂ ಬಾಕಿ ಉಳಿದಿದೆ. ವಿಶ್ವೇಶ್ವರಯ್ಯ ನಾಲೆ ವ್ಯಾಪ್ತಿಗೆ ಸೇರಿದ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಹಾಗೂ ಈ ಭಾಗದ ಜಮೀನುಗಳಿಗೆ ನೀರು ಒದಗಿಸುವ ಉದ್ದೇಶದಿಂದ ಸರ್ಕಾರದ ಸೂಚನೆ ಮೇರೆಗೆ ನಾಲೆಗೆ ನೀರು ಬಿಡಲಾಗಿದೆ.
ಕೆಆರ್ಎಸ್ ಜಲಾಶಯದಿಂದ 1,600 ಕ್ಯೂಸೆಕ್ ನೀರು ಬಿಡಲಾಗುತ್ತದೆ. ಸುಮಾರು 15 ದಿನಗಳ ಕಾಲ ನಾಲೆಗೆ ನೀರು ಹರಿಸಲಾಗುತ್ತಿದೆ. ಬೆಳಿಗ್ಗೆ ಕೆಆರ್ಎಸ್ ಜಲಾಶಯದಿಂದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ನಿನ್ನೆ (ಗುರುವಾರ) ಮಧ್ಯಾಹ್ನದಿಂದ ತಾಲೂಕಿನ ಕಟ್ಟೇರಿ ಗ್ರಾಮದ ಸಮೀಪ ವಿಸಿ ನಾಲೆಗೆ ನೀರು ಹರಿದಿತ್ತು. ನಂತರ ಎಲೆಕೆರೆ ಹ್ಯಾಂಡ್ ಪೋಸ್ಟ್, ಪಾಂಡವಪುರ ಟೌನ್ಗೆ ಸಂಜೆ ವೇಳೆಗೆ ನಾಲೆ ನೀರು ತಲುಪಿತ್ತು. ಕಳೆದ ಆರು ತಿಂಗಳ ಹಿಂದೆ ಜನವರಿ ಕೊನೆ ವಾರದಲ್ಲಿ ವಿಸಿ ನಾಲೆ ಆಧುನೀಕರಣ ಕಾಮಗಾರಿ ಪ್ರಾರಂಭಿಸಲಾಗಿತ್ತು. ನಾಲಾ ಕಾಮಗಾರಿ ಭಾಗಶಃ ಮುಗಿಸಲಾಗಿದೆ.
ಇನ್ನೂ ಅನೇಕ ಭಾಗದಲ್ಲಿ ನಾಲಾ ಕಾಮಗಾರಿ ಅಪೂರ್ಣವಾಗಿದೆ. ಆದರೂ ನಾಲೆಗೆ ನೀರು ಹರಿಸಲಾಗಿದೆ. ವಿಸಿ ನಾಲೆಯಲ್ಲಿ ಕಳೆದ ಆರು ತಿಂಗಳು ನೀರಿಲ್ಲದೆ ರೈತರಿಗೆ ತೊಂದರೆ ಉಂಟಾಗಿತ್ತು. ಕನ್ನಂಬಾಡಿ ಕಟ್ಟೆನಲ್ಲೂ ನೀರಿಲ್ಲದೆ ತೀವ್ರ ಬರಗಾಲ ಉಂಟಾಗಿತ್ತು. ಬರಗಾಲ ಹಾಗೂ ನೀರಿಲ್ಲದೆ ರೈತರು ವ್ಯವಸಾಯ ಮಾಡುವುದನ್ನೇ ಬಿಟ್ಟಿದ್ದರು. ಆದರೆ, ಕೆಆರ್ಎಸ್ ಜಲಾಶಯದಲ್ಲಿ ನೂರರ ಗಡಿ ಪ್ರದೇಶ ನೀರು ತಲುಪಿದ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ನಾಲಾ ಕಾಮಗಾರಿ ಆಗಿರುವುದರಿಂದ ಕೆಆರ್ಎಸ್ ಜಲಾಶಯದಿಂದ ಬುಧವಾರ ನಾಲೆಗೆ ನೀರು ಹರಿಸಲಾಗಿದೆ. ನಾಲೆಯಲ್ಲಿ ಕಾವೇರಿ ನೀರು ಹರಿಯುತ್ತಿದ್ದನ್ನು ರೈತರು ವೀಕ್ಷಿಸಿ, ಖುಷಿಪಟ್ಟಿದ್ದಾರೆ.
ರೈತರ ಪ್ರತಿಕ್ರಿಯೆ: ''ವಿಶ್ವೇಶ್ವರಯ್ಯ ನಾಲೆಯಲ್ಲಿ ನೀರು ಹರಿಸುತ್ತಿರುವ ಸಂತೋಷ ಒಂದೆಡೆಯಾದರೆ, ಕಳಪೆ ಕಾಮಗಾರಿ ಹಾಗೂ ಅರ್ಧಂಬರ್ಧ ಕಾಮಗಾರಿಯಿಂದ ನಾಲಾ ವ್ಯವಸ್ಥೆ ಹದಗೆಟ್ಟಿದೆ. ನಾಲೆ ಕಾಮಗಾರಿ ಗುಣಮಟ್ಟ ಕಾಪಾಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾಲೆಗೆ ನೀರು ಹರಿಸಿದ್ದಾರೆ. ಕಾಮಗಾರಿ ಹೆಸರಿನಲ್ಲಿ ಉಪ ನಾಲೆಗಳನ್ನು ಹಾಳು ಮಾಡಲಾಗಿದೆ. ಇಂತಹ ಕೆಲಸ ಏಕೆ ಮಾಡಬೇಕಿತ್ತು. ಕೆಲವೆಡೆ ಕಾಂಕ್ರಿಟ್ ಹಾಕಲಾಗಿದೆ. ಇನ್ನೂ ಕೆಲವೆಡೆ ಮಣ್ಣಿನಿಂದ ಕೂಡಿದೆ. ನಾಲೆ ನೀರು ಬಿಟ್ಟಿದ್ದಾರೆ. ನಾಲೆ ಕಾಮಗಾರಿಯ ಗುಣಮಟ್ಟ ಗೊತ್ತಾಗಲಿದೆ" ಎಂದು ಕಟ್ಟೇರಿ ಗ್ರಾಮದ ರೈತ ಕಾಳೇಗೌಡ ಹಾಗು ಹನುಮಂತೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ವಿಸಿ ನಾಲೆಯಲ್ಲಿ ಕಾವೇರಿ ನೀರು ಹರಿಯುತ್ತಿರುವುದನ್ನು ನೋಡಿದ ರೈತರು ಆಯಾಯ ಗ್ರಾಮದಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ನಮಸ್ಕರಿಸಿ, ಯಾವಾಗಲೂ ನಾಲೆಯಲ್ಲಿ ನೀರು ಹರಿಯುವಂತೆ ಮಳೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಕನ್ನಂಬಾಡಿ ಕಟ್ಟೆಯಿಂದ ವಿಸಿ ನಾಲೆಗೆ ನೀರು ಹರಿಸಿದ್ದ ಹಿನ್ನೆಲೆ ಕಾವೇರಿ ನೀರಾವರಿ ನಿಗಮದ ಎಸ್.ಇ.ರಘುರಾಮ್, ಇ.ಇ.ಜಯಂತ್ ಹಾಗೂ ಪಾಂಡವಪುರ ಕಚೇರಿಯ ಎಇಇ ಜಯರಾಮ್ ಒಗ್ಗೂಡಿ, ನಾಲೆ ಏರಿ ಮೇಲೆ ಪ್ರಯಾಣಿಸಿದರು. ನಾಲೆಯಲ್ಲಿ ನೀರು ಹರಿಯುತ್ತಿದ್ದನ್ನು ಪರಿಶೀಲಿಸಿದರು.
ಇದನ್ನೂ ಓದಿ: ತಮಿಳುನಾಡಿಗೆ 20 ಟಿಎಂಸಿ ಕಾವೇರಿ ನೀರು ಬಿಡುವ ಒತ್ತಡದಲ್ಲಿ ಕರ್ನಾಟಕ: ಇಂದು ತುರ್ತು ಸಭೆ - Cauvery Emergency Meeting