ಬೆಂಗಳೂರು: ರೇವ್ ಪಾರ್ಟಿಯಲ್ಲಿ ಭಾಗಿಯಾದವರ ಮಹಜರ್ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಫಾರ್ಮ್ ಹೌಸ್ ಒಳಗೆ ಪ್ರಿಂಟರ್ ತೆಗೆದುಕೊಂಡು ಬಂದು ಮಹಜರ್ ಪ್ರತಿಗಳ ಪ್ರಿಂಟ್ ತೆಗೆಯಲು ಶುರುಮಾಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೋಲಿಸರು ವಶದಲ್ಲಿ ಇರುವವರ ಹೇಳಿಕೆ ದಾಖಲು ಮಾಡಿಕೊಳ್ಳುತ್ತಿರುವ ಪೊಲೀಸರು ಇಡೀ ಪ್ರಕರಣ ಎಲೆಕ್ಟ್ರಾನಿಕ್ ಸಿಟಿ ಠಾಣೆಯಿಂದ ಹೆಬ್ಬಗೋಡಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ ಮಾಡಿದ ಸಮಯದಲ್ಲಿ ಮುಖಕ್ಕೆ ಮಾಸ್ಕ್ ಧರಿಸಿ ಹೊರಬಂದ ಸುಮಾರು 50ಕ್ಕೂ ಜನರು ಫಾರ್ಮ್ ಹೌಸ್ನಿಂದ ಹೊರಗೆ ಹೋಗಲು ಯತ್ನಿಸಿದ್ದಾರೆ. ಹಿಂಬದಿ ಫಾರ್ಮ್ ಹೌಸ್ನ ಹಿಂಭಾಗದ ಗೇಟ್ನಿಂದ ಹೊರ ಬರಲು ಪ್ರಯತ್ನಿಸಿದ್ದಾರೆ. ಮಾಧ್ಯಮದವರನ್ನು ಕಂಡು ರೇವ್ ಪಾರ್ಟಿಯಲ್ಲಿ ಭಾಗಿಯಾದವರು ವಾಪಸ್ ಹೋಗಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಜಾಮೀನು ಮೇಲೆ ಹೊರಗೆ ಬಂದಿದ್ದಾರೆ.
ಡಸ್ಟ್‌ಬಿನ್ ಕವರ್ನಿಂದ ಮುಖ ಮುಚ್ಚಿಕೊಂಡು ಹೋದ ಸೆಲೆಬ್ರಿಟಿಗಳು: ಬೆಂಗಳೂರಿನ ಹೊರವಲಯ ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್. ಫಾರ್ಮ್‌ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಗೆ ರಾಜರಂತೆ ದೊಡ್ಡ ಕಾರುಗಳಲ್ಲಿ ಬಂದಿದ್ದ ಗಣ್ಯರು, ಸಿಸಿಬಿ ಪೊಲೀಸರಿಗೆ ತಪ್ಪೊಪ್ಪಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ. ಬೆಂಗಳೂರು ಸಿಸಿಬಿ ಪೊಲೀಸರು ಎಲ್ಲಾ ಪ್ರಕ್ರಿಯೆ ಮುಗಿಸಿದ ನಂತರ ಜನರನ್ನು ರಿಲೀಸ್ ಮಾಡಿ ಕಳುಹಿಸಿದ್ದಾರೆ. ಬಳಿಕ ಸೆಲೆಬ್ರಿಟಿಗಳು ಡಸ್ಟ್‌ಬಿನ್ ಕವರ್‌ಗಳಿಂದ ಮುಖ ಮುಚ್ಚಿಕೊಂಡು ಫಾರ್ಮ್ ಹೌಸ್ನಿಂದ ಹೊರಗೆ ಹೋದರು.