ಬೆಂಗಳೂರು: ಮಗನ ಜೀವನದಲ್ಲಿ ಬಂದಿದ್ದಕ್ಕೆ ದೋಷ ಉಂಟಾಗಿದ್ದು, ಅದನ್ನು ತೊಡದು ಹಾಕಲು ಪೂಜೆ ಮಾಡಿಸಬೇಕು ಎಂದು ಮಹಿಳೆಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ 4 ಲಕ್ಷ ರೂ. ನಗದು ಪಡೆದು ತಾಯಿ - ಮಗ ವಂಚಿಸಿರುವ ಪ್ರಕರಣ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.
ವಂಚನೆಗೊಳಗಾದ ಮಹಿಳೆ ನೀಡಿದ ದೂರು ಆಧರಿಸಿ ಮಹೇಶ್, ಈತನ ತಾಯಿ ಲತಾ ಎಂಬುವರ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಬನಶಂಕರಿ ಎರಡನೇ ಹಂತದಲ್ಲಿ ವಾಸವಾಗಿರುವ ವಿವಾಹಿತ ಮಹಿಳೆಯು 2022ರಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸುವಾಗ ಆರೋಪಿ ಮಹೇಶ್ ಎಂಬಾತ ಕರೆ ಮಾಡಿ, ತಮ್ಮ ಕಂಪನಿಯಲ್ಲಿ ಕೆಲಸವಿದ್ದು, ಬಿಟಿಎಂ ಲೇಔಟ್ನಲ್ಲಿರುವ ಕಚೇರಿಗೆ ಬಂದು ಸಂದರ್ಶನ ಎದುರಿಸಿ ಎಂದು ತಿಳಿಸಿದ್ದನಂತೆ.
ಅದರಂತೆ ಮಹಿಳೆ ಸಂದರ್ಶನಕ್ಕಾಗಿ ಕಚೇರಿಯೊಳಗೆ ಹೋದಾಗ ಬಾಡಿ ಮಸಾಜ್ ಮಾಡುತ್ತಿರುವುದನ್ನು ಕಂಡು ತನಗೆ ಸ್ಪಾದಲ್ಲಿ ಕೆಲಸ ಮಾಡಲು ಇಷ್ಟವಿಲ್ಲ ಎಂದು ಹಿಂದೆ ಸರಿದಿದ್ದರು. ಇದಾದ ಬಳಿಕ 2023ರಲ್ಲಿ ಸೆಪ್ಟೆಂಬರ್ನಲ್ಲಿ ಮತ್ತೆ ಮಹೇಶ್ ಕರೆ ಮಾಡಿ, ಆರು ತಿಂಗಳ ಹಿಂದೆ ಸ್ಪಾ ಕೆಲಸಕ್ಕಾಗಿ ನನ್ನ ಬಳಿ ಬಂದಿರುವ ಬಗ್ಗೆ ಮಾಹಿತಿಯಿದೆ. ಮನೆಯಲ್ಲಿ ಈ ವಿಷಯ ಯಾರಿಗೂ ಹೇಳಬಾರದು ಅಂದರೆ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿಕೊಳ್ಳಬೇಕು ಎಂದು ಬೇಡಿಕೆಯಿಟ್ಟಿದ್ದಾನೆ ಎಂದು ದೂರಲಾಗಿದೆ.
ಈ ನಡುವೆ ಆರೋಪಿಯ ತಾಯಿಯು ಮಹಿಳೆಗೆ ಕರೆ ಮಾಡಿ, ನನ್ನ ಮಗನ ಜೀವನದಲ್ಲಿ ಬಂದಿದ್ದೀಯಾ, ನಿನ್ನಿಂದ ಆತ ದೂರವಾಗಬೇಕು ಎಂದು ಪೂಜೆ ಮಾಡಿಸಬೇಕಿದೆ. ಇದಕ್ಕೆ ನೀನೇ ಹಣ ನೀಡಬೇಕು, ಅಲ್ಲದೇ ಕುತ್ತಿಗೆಯಲ್ಲಿರುವ ಬಂಗಾರದ ಮಾಂಗಲ್ಯ ಸರ ಕೊಡಬೇಕು. ಇವೆಲ್ಲ ಇಟ್ಟು ಪೂಜೆ ಮಾಡಿದರೆ ನನ್ನ ಮಗನ ದೋಷ ಪರಿಹಾರವಾಗಲಿದೆ. ಹೇಳಿದ ಮಾತು ಕೇಳದಿದ್ದರೆ ನಿಮ್ಮ ಮನೆಯವರಿಗೆ ನಿನ್ನ ವಿಚಾರದ ಬಗ್ಗೆ ಹೇಳುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಜೊತೆಗೆ ನಿರಂತರ ಕರೆ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಮಹಿಳೆ ವಿವರಿಸಿದ್ದಾರೆ.
ಪೂಜೆ ಮುಗಿದರೂ ಚಿನ್ನಾಭರಣ ವಾಪಸ್ ನೀಡಿಲ್ಲ: ಪೂಜೆ ಮಾಡಿಸಲು ಮಹಿಳೆಯ ಚಿನ್ನಾಭರಣಕ್ಕಾಗಿ ಪದೇ ಪದೆ ಒತ್ತಾಯ ಹೆಚ್ಚಾಗಿತ್ತು. ಒಡವೆ ನೀಡದಿದ್ದರೆ ನನ್ನ ಮನೆಗೆ ಬರುವುದಾಗಿ ಬೆದರಿಸಿದ್ದರು. ಮಾರ್ಯಾದೆಗೆ ಅಂಜಿ ಒಪ್ಪಿಕೊಂಡು 4 ಲಕ್ಷ ರೂ.ನಗದು, 25 ಗ್ರಾಂ ಚಿನ್ನದ ತಾಳಿ, 2 ಗ್ರಾಂ ಉಂಗುರವನ್ನು ಆರೋಪಿ ಮಹೇಶನಿಗೆ ನೀಡಿದ್ದೆ. ಪೂಜೆ ಮಾಡಿಸಿದ ಬಳಿಕ ಹಿಂತಿರುಗಿಸುವೆ ಎಂದು ಭರವಸೆ ನೀಡಿದ್ದ. ಆದರೆ, ಆಭರಣ ನೀಡಿ, ಹಲವು ತಿಂಗಳಾದರೂ ಚಿನ್ನಾಭರಣ ಕೇಳಿದರೆ, ತಮ್ಮ ಮಗನ ದೋಷ ಮುಕ್ತವಾಗಿಲ್ಲ. ದೋಷ ಕಳೆಯಲು ಇನ್ನೊಂದು ಪೂಜೆ ಮಾಡಿಸಬೇಕು. ಇದಕ್ಕೆ ಹಣ ನೀಡಬೇಕು ಎಂದು ಮತ್ತೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.
ಘಟನೆ ಸಂಬಂಧ ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿತರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಲಾಗಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸತೊಡಕಿಗೆ ಮಟನ್ ಚೀಟಿ ಹೆಸರಿನಲ್ಲಿ ವಂಚನೆ: ಆರೋಪಿ ಪೊಲೀಸ್ ವಶಕ್ಕೆ