ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯು ನಾಳೆಯ ಕೇಂದ್ರೀಯ ಸಂಸದೀಯ ಮಂಡಳಿಯ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ನಾಳೆ ನಾನು ದೆಹಲಿಗೆ ಹೋಗುತ್ತಿದ್ದೇನೆ. ನಾಳೆ ಸಂಜೆ ದೆಹಲಿಯಲ್ಲಿ ನಡೆಯುವ ಕೇಂದ್ರೀಯ ಸಂಸದೀಯ ಮಂಡಳಿಯ ಸಭೆಯಲ್ಲಿ ಭಾಗಿಯಾಗಿಲು ತೆರಳುತ್ತಿದ್ದೇನೆ. ಪ್ರಧಾನಿ ಮೋದಿ ಅವರು ಸಹ ಚುನಾವಣಾ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮೊನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಜೊತೆ ಸಭೆ ನಡೆಸಲಾಯಿತು. ನಾಳೆಯ ಸಭೆಯಲ್ಲಿ ಒಂದು ಸ್ಪಷ್ಟವಾದ ಚುನಾವಣಾ ಚಿತ್ರಣ ಸಿಗಲಿದೆ" ಎಂದು ತಿಳಿಸಿದರು.
ಜೆಡಿಎಸ್ ಸೀಟು ಹಂಚಿಕೆ ನಾಳೆ ನಿರ್ಧಾರ: "ಜೆಡಿಎಸ್ ಜೊತೆ ಸೀಟು ಹಂಚಿಕೆ ಹಾಗೂ ಯಾವ ಯಾವ ಕ್ಷೇತ್ರ ಜೆಡಿಎಸ್ಗೆ ಬಿಡಬೇಕು ಎಂಬುದು ನಾಳೆಯ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದರು.
ಕನಿಷ್ಟ 25 ಸ್ಥಾನ ಗೆಲ್ಲುವ ನಿರೀಕ್ಷೆ: "ರಾಜ್ಯದಲ್ಲಿ ಲೋಕಸಭಾ ಚುನಾವಣಾ ವಾತಾವರಣ ಚೆನ್ನಾಗಿದೆ. ನಾವು ಕನಿಷ್ಟ 24-25 ಸೀಟುಗಳನ್ನು ಗೆಲ್ಲುತ್ತೆವೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇದೆ" ಎಂದು ತಿಳಿಸಿದರು.
ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ಸಂತೋಷ: ಕಾಂಗ್ರೆಸ್ನಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಅವರು, "ಗೀತಾ ಶಿವರಾಜ್ ಕುಮಾರ್ ಅವರು ಸ್ಪರ್ಧೆ ಮಾಡುತ್ತಿರುವುದು ಸಂತೋಷ. ಚುನಾವಣೆ ಅಂದ ಮೇಲೆ ಯಾರಾದರೂ ಒಬ್ಬರು ಸ್ಪರ್ಧೆ ಮಾಡಬೇಕಲ್ಲವೆ" ಎಂದು ಪ್ರತಿಕ್ರಿಯೆ ನೀಡಿದರು.
ಹಾಲಿ ಸಂಸದರಿಗೆ ಟಿಕೆಟ್ ನಿರಾಕರಣೆ ಕುರಿತು ಪ್ರತಿಕ್ರಿಯಿಸಿದ ಅವರು, "ಅದೆಲ್ಲಾ ನಾಳೆಯ ಸಭೆಯಲ್ಲಿ ತಿಳಿಯಲಿದೆ ಎಂದರು.
ಇದನ್ನೂ ಓದಿ: ನಾವು ತ್ಯಾಗ ಮಾಡಿ ಬಿಜೆಪಿಗೆ ಬಂದವರು, ನನಗೆ ಹಾವೇರಿ ಟಿಕೆಟ್ ಕೊಡಲೇಬೇಕು: ಬಿ.ಸಿ.ಪಾಟೀಲ್