ಬೆಂಗಳೂರು: ಅರಮನೆ ಮೈದಾನ ಭೂ ಸ್ವಾಧೀನ ಸಂಬಂಧ ಮೈಸೂರು ಮಹಾರಾಜರ ಉತ್ತರಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು ಸಚಿವ ಹೆಚ್. ಕೆ ಪಾಟೀಲ್, ಅರಮನೆ ಮೈದಾನ ಭೂಮಿ ಸ್ವಾಧೀನದ ಮೂಲ ವ್ಯಾಜ್ಯದ ಮೇಲಿನ 2001ರ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದ ಹಿನ್ನೆಲೆ ಮೈಸೂರು ಮಹಾರಾಜರ ಉತ್ತರಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಹಾಕಲು ತೀರ್ಮಾನಿಸಲಾಗಿದೆ. ಅರಮನೆ ಮೈದಾನ ಒಡೆತನ ಸಂಬಂಧ 1997ರಲ್ಲಿ ರಾಜ್ಯ ಸರ್ಕಾರ ಮೂಲ ವ್ಯಾಜ್ಯ ಹೂಡಿದೆ. ಆ ಮೂಲ ವ್ಯಾಜ್ಯ ಸಂಬಂಧ 2001ರಲ್ಲಿ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿತ್ತು. ಆದರೆ, ಸುಪ್ರೀಂ ಕೋರ್ಟ್ 2001ರ ಆದೇಶ ಉಲ್ಲಂಘಿಸಿ 2,00,000 ಚ.ಅಡಿ ಭೂಮಿಯಲ್ಲಿ ಖಾಯಂ ಕಟ್ಟಡ ನಿರ್ಮಿಸಿದ ಮಹಾರಾಜರ ಉತ್ತರಾಧಿಕಾರಿ ಮೇಲೆ ನ್ಯಾಯಾಂಗ ನಿಂದನೆ ಹೂಡಲು ತೀರ್ಮಾನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ಅರಮನೆಯನ್ನು ವಶಪಡಿಸಿಕೊಂಡಿರುವ 1997 ರ ಕಾಯ್ದೆಯ ಸಿಂಧುತ್ವವನ್ನು ಎತ್ತಿ ಹಿಡಿಯಲು ಸುಪ್ರೀಂ ಕೋರ್ಟ್ ಮುಂದೆ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು, ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಸಲ್ಲಿಸಲಾಗಿರುವ ಮಧ್ಯಂತರ ಅರ್ಜಿಯನ್ನು ಪರಿಗಣಿಸಬೇಕೆಂದು ಕೋರಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಈ ಹಿಂದೆ ಹೈಕೋರ್ಟ್ ಅನುಮೋದಿಸಿದ ಕರ್ನಾಟಕ ವಿಧಾನ ಮಂಡಲ ಅಂಗೀಕರಿಸಿದ ಅಧಿನಿಯಮವನ್ನು ಎತ್ತಿ ಹಿಡಿಯಲು 1997ರಲ್ಲಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಈಗಾಗಲೇ ಮಧ್ಯಂತರ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದರು.
15 ದಿನಗಳಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಬಗ್ಗೆ 9.01.2025 ರಂದು ಸರ್ಕಾರದ ವತಿಯಿಂದ ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ. ಇಂತಹ ಸ್ಥಳದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರದಿಂದ ಇನ್ನು ಮುಂದೆ ಅನುಮತಿ ನೀಡಲು ಸಚಿವ ಸಂಪುಟ ನಿರ್ಬಂಧ ವಿಧಿಸಿದೆ ಎಂದು ಇದೇ ವೇಳೆ ತಿಳಿಸಿದರು.
ಸುಪ್ರೀಂ ಕೋರ್ಟ್ 10.12.2024ರ ತೀರ್ಪಿನಂತೆ ಬೆಂಗಳೂರು ಅರಮನೆ ಮೈದಾನಕ್ಕೆ ಸೇರಿದ 15 ಎಕರೆ 17.5 ಗುಂಟೆ ಜಮೀನನ್ನು ಉಪಯೋಗಿಸಿಕೊಳ್ಳುವುದಕ್ಕೆ ನಿಗದಿಪಡಿಸಿದ ಟಿ.ಡಿ.ಆರ್ ದರದ ಬಗ್ಗೆ ಸಚಿವ ಸಂಪುಟದಲ್ಲಿ ಇಂದು ಚರ್ಚಿಸಲಾಯಿತು. ನ್ಯಾಯಾಂಗ ನಿಂದನೆ ಅರ್ಜಿಯ ವಿಷಯದಲ್ಲಿ ಕಾನೂನಿನ ಪ್ರಕಾರ ಅಗತ್ಯ ಕ್ರಮ ವಹಿಸಲು ಸಚಿವ ಸಂಪುಟ ಸಂಬಂಧಪಟ್ಟ ಇಲಾಖೆಗೆ ನಿರ್ದೇಶಿಸಿದೆ. ಸುಪ್ರೀಂ ಕೋರ್ಟ್ 21.12.2024ರ ಆದೇಶಾನುಸಾರ ಪ್ರತಿ ಚ.ಮೀಟರ್‌ಗೆ (ಬಳ್ಳಾರಿ ರಸ್ತೆ) 2,83,500 ರೂ ಮತ್ತು ಪ್ರತಿ ಚ.ಮೀಟರ್‌ಗೆ (ಜಯಮಹಲ್ ರಸ್ತೆ) 2,04,000 ರೂ ಮೌಲ್ಯದಂತೆ ಟಿ.ಡಿ.ಆರ್ ನೀಡಲು ಅಂದಾಜು 3,011 ಕೋಟಿ ರೂ ಆರ್ಥಿಕ ಹೊರೆ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ರಾಜ್ಯ ಸರ್ಕಾರದ ಅರ್ಜಿಯನ್ನು ಸುಪ್ರೀಂ ಮೋರ್ಟ್ ತಿರಸ್ಕರಿಸಿದೆ ಎಂದರು.
ಟಿಡಿಆರ್ ವಿಚಾರದಲ್ಲಿ ಹಿನ್ನಡೆಯಾದ ಕಾರಣ ರಾಜ್ಯ ಸರ್ಕಾರ ಇದೀಗ ಮೂಲ ವ್ಯಾಜ್ಯ ಇತ್ಯರ್ಥಗೊಳಿಸುವಂತೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಲು ತೀರ್ಮಾನಿಸಿದೆ. ಸರ್ಕಾರ 1997ರಲ್ಲಿ ಸಲ್ಲಿಸಿದ ಮೂಲ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶೀಘ್ರ ವಿಚಾರಣೆ ನಡೆಸುವಂತೆ ಮಧ್ಯಂತರ ಅರ್ಜಿ ಸಲ್ಲಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಹೆಚ್ಎಂಟಿ ವಶದಲ್ಲಿರುವ 14,300 ಕೋಟಿ ಬೆಲೆಯ ಅರಣ್ಯ ಭೂಮಿ ಹಿಂಪಡೆಯಲು ಕ್ರಮ: ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ - CABINET MEETING