ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳ ಪೈಕಿ ರವಿ ಎಂಬಾತ ಪೊಲೀಸರಿಗೆ ಶರಣಾಗಿದ್ದಾನೆ. ಚಿತ್ರದುರ್ಗದ ನಿವಾಸಿಯಾದ ಈತ ಕ್ಯಾಬ್ ಚಾಲಕನಾಗಿದ್ದು, ಪ್ರಕರಣದ 8ನೇ ಆರೋಪಿ. ಈ ಮೂಲಕ ಪ್ರಕರಣದಲ್ಲಿ ಒಟ್ಟು 14 ಮಂದಿ ಸೆರೆಸಿಕ್ಕಂತಾಗಿದೆ.
ಅಪಹರಣ ನಡೆದಿದ್ದು ಹೇಗೆ?: ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ನೀಡಿದ ಸೂಚನೆ ಮೇರೆಗೆ ತಲೆಮರೆಸಿಕೊಂಡಿರುವ ಜಗದೀಶ್, ಅನು ಎಂಬವರು ರೇಣುಕಾಸ್ವಾಮಿಯನ್ನು ರವಿಯ ಇಟಿಯೊಸ್ ಕಾರಿನಲ್ಲಿ ಅಪಹರಿಸಿದ್ದರು. ಇದಕ್ಕೂ ಮುನ್ನ ಜಗದೀಶ್, ರವಿಗೆ ಕರೆ ಮಾಡಿ ಬೆಂಗಳೂರಿಗೆ ಬಾಡಿಗೆಗೆ ಮಾತನಾಡಿ ಕರೆಯಿಸಿಕೊಂಡಿದ್ದ. ಇದರಂತೆ ಚಿತ್ರದುರ್ಗದ ಕುಂಚಿಗನಾಳ್ ಪೆಟ್ರೋಲ್ ಬಂಕ್ ಬಳಿ ಆಟೊದಲ್ಲಿ ಬಂದಿದ್ದ ರೇಣುಕಸ್ವಾಮಿಯನ್ನು ರಾಘವೇಂದ್ರ ಹಾಗೂ ಸಹಚರರು ಅಪಹರಿಸಿ ಕಾರಿನಲ್ಲಿ ಪಟ್ಟಣಗೆರೆಯ ಶೆಡ್ಗೆ ಕರೆತಂದಿರುವುದಾಗಿ ರವಿ ಹೇಳಿರುವುದಾಗಿ ಸ್ನೇಹಿತ ಮೋಹನ್ ತಿಳಿಸಿದ್ದಾನೆ.
ರಾಘವೇಂದ್ರ ಆ್ಯಂಡ್ ಟೀಂ ರವಿಯ ಕಾರಿನಲ್ಲಿ ಶೆಡ್ಗೆ ಬಂದಿಳಿಯುತ್ತಿದ್ದಂತೆ ಸುಮಾರು 30 ಮಂದಿ ಸ್ಥಳದಲ್ಲಿದ್ದರು. ರೇಣುಕಾಸ್ವಾಮಿಯನ್ನು ನೋಡುತ್ತಿದ್ದಂತೆ ಈತನನ್ನು ಹೊಡೆಯಲು ಇಷ್ಟೊಂದು ಮಂದಿ ಬೇಕಾ ಎಂದು ಹೇಳಿ, 15 ಮಂದಿ ಸ್ಥಳದಿಂದ ನಿರ್ಗಮಿಸಿದ್ದರು. ರೇಣುಕಾಸ್ವಾಮಿಯನ್ನು ರಾಘವೇಂದ್ರ ಶೆಡ್ನೊಳಗೆ ಕರೆದುಕೊಂಡು ಹೋಗುತ್ತಿದ್ದಂತೆ ಅಲ್ಲೇ ಇದ್ದ ಆರೋಪಿಗಳು ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಮೋಹನ್ ವಿವರಿಸಿದ್ದಾನೆ.
ಕೊಲೆ ಕೃತ್ಯ ಒಪ್ಪಿಕೊಳ್ಳುವಂತೆ ಸೂಚಿಸಿದ್ದರು: ಬಾಡಿಗೆಗೆ ಎಂದು ಹೋಗಿದ್ದ ಆರೋಪಿ ರವಿಯನ್ನು ಮಧ್ಯರಾತ್ರಿ ಎರಡು ಗಂಟೆಯವರೆಗೂ ಉಳಿಸಿಕೊಂಡಿದ್ದರು. ರಾಘವೇಂದ್ರ ಸೇರಿದಂತೆ ಕೆಲವರು ಬಂದು ಕೊಲೆ ಕೃತ್ಯವನ್ನು ಒಪ್ಪಿಕೊಳ್ಳುವಂತೆ ಹೇಳಿದ್ದರಂತೆ. ನನಗೇನೂ ಗೊತ್ತಿಲ್ಲ, ಬಾಡಿಗೆ ಹಣ ನೀಡಿ ಎಂದು ಊರಿಗೆ ಹೋಗುವುದಾಗಿ ತಿಳಿಸಿದ್ದರಿಂದ 4 ಸಾವಿರ ಹಣ ನೀಡಿದ್ದರು. ಇದರಂತೆ ರವಿ, ಜಗದೀಶ್ ಹಾಗೂ ಅನು ಅಲ್ಲಿಂದ ಬಂದೆವು ಎಂದು ರವಿ ಸ್ನೇಹಿತ ಮೋಹನ್ ಮಾಹಿತಿ ನೀಡಿದ್ದಾನೆ.