ಮಂಡ್ಯ: ರಾಜ್ಯದಲ್ಲಿ ಮೈತ್ರಿ ಪಕ್ಷದ ಪರವಾಗಿ ಉತ್ತಮ ವಾತಾವರಣವಿದೆ. ಮೋದಿ ಮತ್ತು ದೇವೇಗೌಡರ ಜಂಟಿ ಪ್ರಚಾರದ ಬಳಿಕ ಬಿಜೆಪಿ-ಜೆಡಿಎಸ್‌ಗೆ ಮತಗಳು ಹೆಚ್ಚಳವಾಗಿವೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ಇದೇ ವೇಳೆ, ಕರ್ನಾಟಕದ ಜನರಿಗೆ ರಾಜ್ಯ ಸರ್ಕಾರದಿಂದ ಚಟ್ಟ ಭಾಗ್ಯ ಮಾತ್ರ ಸಿಗಲಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಅಪಪ್ರಚಾರವನ್ನು ಚುನಾವಣೆಯ ಅಸ್ತ್ರ ಮಾಡಿಕೊಂಡಿದೆ. ಬಿಜೆಪಿ ನೀತಿ ಆಧಾರದಲ್ಲಿ ಮತ ಕೇಳಿದ್ರೆ, ಕಾಂಗ್ರೆಸ್ ಜಾತಿ ಆಧಾರದಲ್ಲಿ ಮತ ಕೇಳುತ್ತಿದೆ. ಸುಳ್ಳು ಮತ್ತು ಅಪ್ರಚಾರ ಕಾಂಗ್ರೆಸ್‌ನವರ ವಿಷಯ. ದೇಶ ಮೊದಲು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಜಗತ್ತಿನಲ್ಲಿ ಭಾರತ ನಂ.1 ಸ್ಥಾನಕ್ಕೇರಿಸುವುದು, ಬಡವರಿಗೆ ಶಕ್ತಿ ತುಂಬಿ ಸ್ವಾಭಿಮಾನಿ, ಸ್ವಾವಲಂಬಿ ಮಾಡುವುದು, ಅಂಬೇಡ್ಕರ್ ಸಂವಿಧಾನಕ್ಕೆ ಶಕ್ತಿ ಕೊಟ್ಟು ಅದರ ಆಶಯವನ್ನು ಜನರಿಗೆ ತಲುಪಿಸುವುದು ನಮ್ಮ ನೀತಿ. ಆದರೆ, ಚುನಾವಣೆ ಗೆಲ್ಲುವ ಕುತಂತ್ರಕ್ಕಷ್ಟೇ ಕಾಂಗ್ರೆಸ್ ಸೀಮಿತ ಎಂದು ಟೀಕಿಸಿದರು.
ಕಾಂಗ್ರೆಸ್ ಓಲೈಕೆ ರಾಜನೀತಿಯ ಪರಿಣಾಮ ತಾಲಿಬಾನ್ ಮಾದರಿ ಆಡಳಿತ ನೆನಪಿಗೆ ಬರುತ್ತಿದೆ. ಮೋದಿ ಅಭಿವೃದ್ಧಿ ಟ್ರಯಲ್ ಮಾಡೆಲ್ ಮುಂದಿಟ್ಟು ಇದು ಟ್ರೇಲರ್ ಮಾತ್ರ ಎಂದಿದ್ದಾರೆ. ಕಾಂಗ್ರೆಸ್ ತಾಲಿಬಾನ್ ಆಡಳಿತದ ಟ್ರೇಲರ್ ಬಿಡುತ್ತಿದೆ. ಕಾಂಗ್ರೆಸ್‌ಗೆ ಜನರ ಹಿತ, ಕರ್ನಾಟಕದ ನೆಮ್ಮದಿಗಿಂತ ಓಟ್ ಬ್ಯಾಂಕ್ ಮುಖ್ಯ ಎಂದರು.
ಮುಂದುವರೆದು ಮಾತನಾಡಿದ ಅವರು, ರಾಜ್ಯದ ಶಾಂತಿ ನೆಮ್ಮದಿಗೆ ಕಾಂಗ್ರೆಸ್ ಓಲೈಕೆ ರಾಜಕಾರಣ ಕೊಳ್ಳಿ ಇಡುತ್ತಿದೆ. ಇದು ಮುಂದುವರಿದರೆ ಕರ್ನಾಟಕ ಜನರಿಗೆ ಚಟ್ಟದ ಭಾಗ್ಯ ಮಾತ್ರ ಸಿಗುತ್ತದೆ. ಕಾಂಗ್ರೆಸ್ ದುರಾಡಳಿತಕ್ಕೆ ರಾಜ್ಯದ ಜನರು ಮತದ ಮೂಲಕ ಉತ್ತರ ನೀಡಬೇಕು. ಪ್ರಧಾನಿ ಮೋದಿ ಬಡವರ ಬದುಕಿಗೆ ಗ್ಯಾರಂಟಿ ಕೊಟ್ಟಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜೀವ ಉಳಿಸಿ ಜೀವನ ಕಟ್ಟಿಕೊಟ್ಟಿದ್ದಾರೆ ಎಂದು ವಿವರಿಸಿದರು.
ತನ್ನ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಕೆಲವರನ್ನು ಬೆಳೆಸುತ್ತಿದೆ. ಹಾಗಾಗಿ, ಮಂಡ್ಯದಲ್ಲಿ ಕುಮಾರಸ್ವಾಮಿಯನ್ನು ಗೆಲ್ಲಿಸುವ ಮೂಲಕ ಕರ್ನಾಟಕದಲ್ಲಿ ಶಾಂತಿ ಉಳಿಸಲು ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಪಕ್ಷಕ್ಕೆ ಸೆಡ್ಡು ಹೊಡೆದು ಕಣದಲ್ಲುಳಿದ ಈಶ್ವರಪ್ಪ: ಶಿವಮೊಗ್ಗ ಗೆಲ್ಲಲು ಏನೆಲ್ಲಾ ಲೆಕ್ಕಾಚಾರ? - Eshwarappa