ಚಿಕ್ಕಮಗಳೂರು: ಹನುಮ ಧ್ವಜ ಹಾರಿಸಲು ಪಂಚಾಯಿತಿಯ ಅನುಮತಿ ಕೇಳಿದ್ದಾರೆ. ಆಗಸ್ಟ್ 15, ಜನವರಿ 26 ರಾಷ್ಟ್ರ ಧ್ವಜ, ನವೆಂಬರ್ 1 ಕನ್ನಡ ಧ್ವಜ, ಉಳಿದಂತೆ ಧರ್ಮಧ್ವಜ ಹಾರಿಸುವುದಾಗಿ ಪಂಚಾಯಿತಿಯ ಅನುಮತಿ ಕೇಳಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಪಂಚಾಯಿತಿಯ ಅನುಮತಿ ಮೇರೆಗೆ ಶಾಶ್ವತ ಧ್ವಜಸ್ತಂಭ ನಿರ್ಮಾಣವಾಗಿದೆ. ಈಗ ಜಿಲ್ಲಾಡಳಿತ ಏಕಾಏಕಿ ಹನುಮ ಧ್ವಜ ತೆರವು ಮಾಡಿದ್ದಕ್ಕೆ ಕಾರಣವೇನು?, ಇದರ ಹಿಂದೆ ಯಾವ ಪಿತೂರಿ ಕೆಲಸ ಮಾಡಿದೆ?, ಹನುಮ ಧ್ವಜ ನಿಷೇಧಿತ ಧ್ವಜವೇ?, ಆ ಜಾಗ ಏನಾದರೂ ವಿವಾದಿತ ಸ್ಥಳವಾ? ಎಂದರು.
ಸನಾತನ ಧರ್ಮದ ಮೇಲಿನ ಇವರ ಭಾವನೆ ವ್ಯಕ್ತವಾಗಿದೆ. 30 ವರ್ಷದ ಹಿಂದಿನ ಕೇಸ್ ತೆರೆದಿರುವುದು, ಇಲ್ಲಿ ಹನುಮ ಧ್ವಜ ತೆರವು ಕಾಕತಾಳೀಯ ಅಲ್ಲ. ಇದರಲ್ಲಿ ಹಿಂದೂ ದ್ವೇಷ ಎದ್ದು ಕಾಣುತ್ತಿದೆ. ರಾಮ ಮಂದಿರ ವೇಳೆಯೂ ಒಬ್ಬೊಬ್ಬ ಕಾಂಗ್ರೆಸ್ಸಿಗರು ಒಂದೊಂದು ಹೇಳಿಕೆ ಕೊಟ್ಟರು. ಇದರ ಹಿಂದೆ ಹಿಂದೂ ದ್ವೇಷ ಎದ್ದು ಕಾಣುತ್ತಿದೆ. ನಿಮಗೆ ಮತ್ತೊಂದು ಧ್ವಜಕಂಬ ಹಾಕಿ ಇನ್ನೂ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸುವ ಯೋಗ್ಯತೆ ಇಲ್ಲವಾ? ನಮಗೆ ರಾಷ್ಟ್ರಧ್ವಜದ ಮೇಲೆ ಗೌರವವಿದೆ. ಆದರೆ ಹನುಮ ಧ್ವಜ ತೆಗೆದೇ ಹಾರಿಸಬೇಕಾ?.
ಇದನ್ನು ನಾವು ಸವಾಲಾಗಿ ಸ್ವೀಕಾರ ಮಾಡಿದ್ದೇವೆ. ನಾವು ರಾಷ್ಟ್ರ ಧ್ವಜವನ್ನೂ ಎಲ್ಲಕ್ಕಿಂತ ಎತ್ತರದಲ್ಲಿ ಹಾರಿಸುತ್ತೇವೆ. ಹನುಮ ಧ್ವಜವನ್ನೂ ಹಾರಿಸುತ್ತೇವೆ. ಜಿಲ್ಲಾಡಳಿತ ಯಾರ ಕೈಗೊಂಬೆೆಯೂ ಅಲ್ಲ. ಹನುಮಧ್ವಜ ತೆಗೆಯುವ ಅಧಿಕಾರವನ್ನು ಯಾರೂ ಕೊಟ್ಟಿಲ್ಲ. ಯಾವ ಆದೇಶದ ಮೇರೆಗೆ ತೆಗೆದಿದ್ದೀರಿ?. ಮರ್ಯಾದೆಯಿಂದ ನೀವೇ ಧ್ವಜ ಹಾರಿಸಬೇಕು. ಯಾರ ಓಲೈಕೆಗೆ ಹನುಮಧ್ವಜ ತೆರವು ಮಾಡಿದ್ದೀರಿ?. ಶಾಲಾ ಕಾಲೇಜಿನಲ್ಲಿ ಹಿಜಾಬ್ ತರುತ್ತೇವೆ ಎನ್ನುತ್ತೀರಾ. ಇಲ್ಲಿ ಹನುಮಧ್ವಜ ಕಿತ್ತು ಹಾಕುತ್ತೀರಾ?. ನಿಮ್ಮ ಸೆಕ್ಯೂಲರ್ ಸೋಗಲಾಡಿತನ ಇದೇ ಅಲ್ವಾ? ಎಂದು ಸಿ.ಟಿ.ರವಿ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಜಾಗದಲ್ಲಿ ಬೇರೆ ಧ್ವಜ ಹಾರಿಸಲು ಅವಕಾಶವಿಲ್ಲ: ಸಚಿವ ಚಲುವರಾಯಸ್ವಾಮಿ