ETV Bharat / state

ಅಲ್ಲಿಯೂ ಸೈ ಇಲ್ಲಿಯೂ ಸೈ: 'ಸೈನಿಕ'ನ ಪಕ್ಷಾಂತರ ಪಯಣ - C P YOGESHWAR DEFECTION

ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿಸಿರುವ ಯೋಗೇಶ್ವರ್, ಬಳಿಕ ಬಿಜೆಪಿ, ಆನಂತರ ಸಮಾಜವಾದಿ, ನಂತರ ಮತ್ತೊಮ್ಮೆ ಬಿಜೆಪಿಯಲ್ಲಿ ರಾಜಕಾರಣ ಮಾಡಿ, ಇದೀಗ ಮತ್ತೊಮ್ಮೆ ಕಾಂಗ್ರೆಸ್ ತೆಕ್ಕೆಗೆ ಸೇರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.

yogeshwar
ಸಿಎಂ ಸಿದ್ದರಾಮಯ್ಯ ಜೊತೆ ಸಿ.ಪಿ.ಯೋಗೇಶ್ವರ್​ (ANI)
author img

By ETV Bharat Karnataka Team

Published : Oct 24, 2024, 5:41 PM IST

ಬೆಂಗಳೂರು: ಐದು ಗೆಲುವು, ಮೂರು ಸೋಲು, ಮೂರು ಪಕ್ಷಗಳಿಂದ ಆಯ್ಕೆ, ಸ್ವತಂತ್ರವಾಗಿಯೂ ಗೆಲುವು ಕಂಡು ಎರಡು ಬಾರಿ ಸಚಿವರಾಗಿ ಅಧಿಕಾರ. ಇದು ನಟ, ನಿರ್ಮಾಪಕ, ರಾಜಕಾರಣಿ ಸಿ.ಪಿ.ಯೋಗೇಶ್ವರ್ ಟ್ರ್ಯಾಕ್ ರೆಕಾರ್ಡ್. ಸಿನಿ ರಂಗದಿಂದ ರಾಜಕಾರಣಕ್ಕೆ ಎಂಟ್ರಿಯಾಗಿ, ಅಲ್ಲಿಯೇ ನೆಲೆ ಕಂಡುಕೊಂಡಿರುವ ಯೋಗೇಶ್ವರ್ ಮರಳಿ ಗೂಡು ಸೇರಿದ್ದಾರೆ. ರಾಜಕೀಯ ಪ್ರವೇಶಿಸಿದ್ದ ಕಾಂಗ್ರೆಸ್​​ ಪಕ್ಷಕ್ಕೆ ಮರುಸೇರ್ಪಡೆಗೊಂಡ ಸೈನಿಕನ ಪಕ್ಷಾಂತರದ ಕುರಿತಾದ ಒಂದು ವರದಿ ಇಲ್ಲಿದೆ.

ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಹೊಸತೇನಲ್ಲ, ಹಿರಿಯ ರಾಜಕಾರಣಿಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ ಕೂಡ ಪಕ್ಷಾಂತರ ಮಾಡಿದವರೇ. ಆದರೆ, ಸಿ.ಪಿ.ಯೋಗೇಶ್ವರ್ ಪಕ್ಷಾಂತರದಲ್ಲಿ ದಾಖಲೆ ಮಾಡಿದ್ದಾರೆ. ರಾಜಕೀಯ ಜನ್ಮ ನೀಡಿದ ಪಕ್ಷವನ್ನೇ ಎರಡು ಬಾರಿ ತೊರೆದು, ಮೂರನೇ ಬಾರಿಗೆ ಘರ್ ವಾಪಸಿ ಮಾಡಿದ್ದಾರೆ.

ಬಂಡಾಯ ಅಭ್ಯರ್ಥಿಯಾಗಿ ಜಯ: 1999ರಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾಗಿದ್ದ ವೇಳೆ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಟಿಕೆಟ್​​​ಗೆ ಬೇಡಿಕೆ ಇಟ್ಟಿದ್ದರು. ಆದರೆ, ಅವರಿಗೆ ಕೈ ನಾಯಕರು ಟಿಕೆಟ್ ನಿರಾಕರಿಸಿದರು. ಇದರಿಂದ ಕುಪಿತರಾದ ಯೋಗೇಶ್ವರ್, ಮೊದಲ ಸಲ ಬಂಡಾಯ ಸಾರಿದರು. ಪಕ್ಷೇತರ ಅಭ್ಯರ್ಥಿಯಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರುವ ಮೂಲಕ ರಾಜಕಾರಣದಲ್ಲಿ ಭದ್ರವಾದ ನೆಲೆ ಕಂಡುಕೊಂಡರು.

ಕಾಂಗ್ರೆಸ್​​ಗೆ ಮತ್ತೆ ವಾಪಸ್: 2004ರ ವೇಳೆಗೆ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣೆಗೆ ಮುಂದಾದಾಗ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್​​ಗೆ ವಾಪಸ್ ಆದರು. ಅವರಿಗೆ ಟಿಕೆಟ್ ನೀಡಲಾಯಿತು. ನಿರೀಕ್ಷೆಯಂತೆ 2004ರಲ್ಲಿ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಆದರೆ ಸರ್ಕಾರದ ಭಾಗವಾಗಲು ಅವಕಾಶ ಸಿಗಲಿಲ್ಲ.

ಬಿಜೆಪಿ ಸೇರ್ಪಡೆ: 2008ರಲ್ಲಿ ಮತ್ತೊಮ್ಮೆ ಕಾಂಗ್ರೆಸ್​​ನಿಂದ ಪುನರಾಯ್ಕೆಯಾದರು. ಆದರೆ, ಅಂದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರಿಂದ ಸಂಪುಟ ಸೇರುವ ಕನಸು ಈಡೇರಲಿಲ್ಲ. ಆದರೆ ಈ ಸಮಯಕ್ಕೆ ಬಿಜೆಪಿಯಿಂದ ಬಂದ ಆಫರ್ ಪರಿಗಣಿಸಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್​​ಗೂ ಗುಡ್ ಬೈ ಹೇಳಿ ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸೇರ್ಪಡೆಯಾದರು.

ಜೆಡಿಎಸ್ ವಿರುದ್ಧ ಸೋಲು: ಆದರೆ ತಮ್ಮ ರಾಜೀನಾಮೆಯಿಂದ ತೆರವಾಗಿದ್ದ ಕ್ಷೇತ್ರಕ್ಕೆ 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮರು ಆಯ್ಕೆಯಾಗದೆ, ಜೆಡಿಎಸ್ ಅಭ್ಯರ್ಥಿ ಎಂ.ಸಿ.ಅಶ್ವಥ್ ವಿರುದ್ಧ ಪರಾಭಗೊಂಡರು. ಅದು ಯೋಗೇಶ್ವರ್​ಗೆ ಮೊದಲ ಸೋಲು. ನಂತರ ಬದಲಾದ ರಾಜಕೀಯ ವಿದ್ಯಮಾನಗಳ ಹಿನ್ನಲೆಯಲ್ಲಿ ಎಂ.ಸಿ.ಅಶ್ವಥ್ 2010ರಲ್ಲಿ ತೆನೆ ಇಳಿಸಿ, ಬಿಜೆಪಿ ಸೇರಿದರು. ಇದರಿಂದಾಗಿ ಮತ್ತೆ 2011ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ವಿಧಾನಸಭೆಗೆ ಪ್ರವೇಶಿಸಿದರು. ಜೊತೆಗೆ ಸದಾನಂದಗೌಡರ ಸಂಪುಟದಲ್ಲಿ ಅರಣ್ಯ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು. ಇದು ಸೈನಿಕನಿಗೆ ಮೊದಲ ಕ್ಯಾಬಿನೆಟ್ ಸ್ಥಾನವಾಗಿತ್ತು.

ಸಮಾಜವಾದಿ ಪಕ್ಷದಿಂದ ಗೆಲುವು: 2013ರಲ್ಲಿ ಬಿಜೆಪಿ ಆಂತರಿಕ ಕಲಹದಿಂದ ಯಡಿಯೂರಪ್ಪ ಪಕ್ಷ ತೊರೆದು ಕೆಜೆಪಿ ಸ್ಥಾಪಿಸಿದರು. ಅಲ್ಲಿನ ರಾಜಕೀಯ ಅನಿಶ್ಚಿತತೆಯಿಂದ ಪಕ್ಷ ತೊರೆದು ಕಾಂಗ್ರೆಸ್ ಸೇರಲು ಯೋಗೇಶ್ವರ್ ಮುಂದಾದರು. ಆದರೆ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಕಾಂಗ್ರೆಸ್ ಯೋಗೇಶ್ವರ್​​ಗೆ ಟಿಕೆಟ್ ನೀಡಲು ನಿರಾಕರಿಸಿತು. ಇದರಿಂದಾಗಿ ಅನಿವಾರ್ಯವಾಗಿ ಪರ್ಯಾಯ ಆಯ್ಕೆಯತ್ತ ಚಿತ್ತ ಹರಿಸಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ 5ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

ಯಡಿಯೂರಪ್ಪ ತಂಡ ಮತ್ತೆ ಬಿಜೆಪಿಗೆ ವಾಪಸ್ಸಾಗಿ ಅವರ ನೇತೃತ್ವದಲ್ಲಿಯೇ 2018ರ ಚುನಾವಣೆಯನ್ನು ಬಿಜೆಪಿ ಎದುರಿಸಿದಾಗ, ಮೋದಿ ಅಲೆ ಕಾರಣಕ್ಕೆ ಯೋಗೇಶ್ವರ್​ ಮತ್ತೆ ಬಿಜೆಪಿ ಸೇರಿದರು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸೋಲಬೇಕಾಯಿತು. ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದರೂ, ಒಂದೇ ವರ್ಷಕ್ಕೆ ಪತನವಾಯಿತು.

ಬಿಎಸ್​ವೈ ಸಂಪುಟದಲ್ಲಿ ಯೋಗೇಶ್ವರ್: ಬಳಿಕ, ಬಿಜೆಪಿ ಸರ್ಕಾರ ರಚನೆಯಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಆಗ ಬಿಎಸ್​ವೈ ಸಂಪುಟದಲ್ಲಿ ಯೋಗೇಶ್ವರ್​ಗೆ ಅವಕಾಶ ಸಿಕ್ಕಿತು. ಪರಿಷತ್ ಸದಸ್ಯರನ್ನಾಗಿಸಿ, ಸಚಿವ ಸ್ಥಾನ ನೀಡಿ ಪ್ರವಾಸೋದ್ಯಮ, ಪರಿಸರ ಮತ್ತು ಜೀವವೈವಿಧ್ಯ ಖಾತೆ ನೀಡಲಾಯಿತು. ಆದರೆ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ, ಯೋಗೇಶ್ವರ್ ಕೂಡ ಅಧಿಕಾರ ಕಳೆದುಕೊಂಡರು. ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ.

2023ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತ ಯೋಗೇಶ್ವರ್, ಇದೀಗ ಕುಮಾರಸ್ವಾಮಿ ರಾಜೀನಾಮೆಯಿಂದ ನಡೆಯುತ್ತಿರುವ ಉಪ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಬಿಜೆಪಿ ಮೈತ್ರಿಧರ್ಮ ಪಾಲನೆ ಮಂತ್ರ ಜಪಿಸಿ ಟಿಕೆಟ್ ನಿರ್ಧಾರ ಜೆಡಿಎಸ್​​ಗೆ ಬಿಟ್ಟಿದ್ದರಿಂದ ಕೊನೆ ಕ್ಷಣದವರೆಗೂ ಕಾದು ನೋಡಿ, ನಂತರ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿ ಉಪ ಸಮರಕ್ಕೆ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿಸಿರುವ ಯೋಗೇಶ್ವರ್ ಇದೀಗ 6ನೇ ಬಾರಿಗೆ ಪಕ್ಷಾಂತರ ಮಾಡಿದ್ದಾರೆ. ಕಾಂಗ್ರೆಸ್​ನಲ್ಲಿ ಅವಕಾಶ ಸಿಗದೆ ಮೊದಲ ಬಂಡಾಯ ಸಾರಿ, ಮೊದಲು ಪಕ್ಷೇತರವಾಗಿ ಸಾಮರ್ಥ್ಯ ತೋರಿದವರು. ನಂತರ ಕಾಂಗ್ರೆಸ್, ಬಳಿಕ ಬಿಜೆಪಿ, ಆನಂತರ ಸಮಾಜವಾದಿ, ನಂತರ ಮತ್ತೊಮ್ಮೆ ಬಿಜೆಪಿಯಲ್ಲಿ ರಾಜಕಾರಣ ಮಾಡಿ, ಇದೀಗ ಮತ್ತೊಮ್ಮೆ ಕಾಂಗ್ರೆಸ್ ತೆಕ್ಕೆಗೆ ಸೇರಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಸಿಎಂ, ಡಿಸಿಎಂ ನೇತೃತ್ವದಲ್ಲಿ ಬೃಹತ್ ಮೆರವಣಿಗೆ: ಸಿ.ಪಿ. ಯೋಗೇಶ್ವರ್ ನಾಮಪತ್ರ ಸಲ್ಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.