ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹಾಗೂ ಎರಡನೇ ಅಭ್ಯರ್ಥಿ ಆಯ್ಕೆ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ನೀಡುವ ನಿರ್ಣಯವನ್ನು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಬಿಜೆಪಿ ಕೋರ್ ಕಮಿಟಿ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಮುಂಬರುವ ವಿಧಾನಪರಿಷತ್, ರಾಜ್ಯಸಭಾ ಚುನಾವಣೆ, ಲೋಕಸಭಾ ಚುನಾವಣೆ ಬಗ್ಗೆ ವಿವರವಾಗಿ ಚರ್ಚೆ ನಡೆಸಿದ್ದೇವೆ. ರಾಜ್ಯಸಭೆ, ವಿಧಾನಪರಿಷತ್ ಅಭ್ಯರ್ಥಿ ಕುರಿತು ರಾಷ್ಟ್ರೀಯ ಅಧ್ಯಕ್ಷರ ಜೊತೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ನೀಡುವ ನಿರ್ಧಾರವನ್ನು ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಕೈಗೊಳ್ಳಲಾಯಿತು ಎಂದರು.
ಬರ ಪರಿಹಾರದ ವಿಚಾರದಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ನಮ್ಮ ಶಾಸಕರು, ಪರಿಷತ್ ಸದಸ್ಯರು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಜನವರಿ 7 ರಂದು ಧರಣಿ ನಡೆಸಲು ನಿರ್ಧರಿಸಿದ್ದಾರೆ. ಅಧಿವೇಶನದಲ್ಲಿಯೂ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಸದನದ ಒಳಗೆ ಮತ್ತು ಹೊರಗೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ತಿಳಿಸಿದರು.
ರಾಜ್ಯಸಭೆ ಎರಡನೇ ಸ್ಥಾನಕ್ಕೆ ಅಭ್ಯರ್ಥಿ ಕಣಕ್ಕಿಳಿಸುವ ವಿಚಾರದಲ್ಲಿ ಚಿಂತನೆ ನಡೆದಿದೆ. ಎರಡು ಸ್ಥಾನ ಗೆಲ್ಲಲು 92 ಮತ ಬೇಕು ಆದರೆ ಬಿಜೆಪಿ ಜೆಡಿಎಸ್ ಸೇರಿ 86 ಮತ ಸಿಗಲಿವೆ 6 ಮತ ಕೊರತೆ ಇದೆ. ಹಾಗಾಗಿ ಕೇಂದ್ರದ ಜೊತೆ ಸಮಾಲೋಚಿಸಿ ಎರಡನೇ ಅಭ್ಯರ್ಥಿ ಹಾಕುವ ಕುರಿತು ರಾಜ್ಯಾಧ್ಯಕ್ಷರು ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಆ ಅಧಿಕಾರವನ್ನು ಇಂದು ಕೋರ್ ಕಮಿಟಿ ವಿಜಯೇಂದ್ರಗೆ ನೀಡಿದೆ ಎಂದು ಹೇಳಿದರು.
ಇವರು ಕುಂಕುಮ ಬೇಡ ಎನ್ನುವ ಹಿಂದೂವಾ?: ಹಿಂದೂಗಳು ವಿಭೂತಿ ಮತ್ತು ಕುಂಕಮ ಬೇಡ ಎನ್ನಲ್ಲ, ಆದರೆ ಸಿದ್ದರಾಮಯ್ಯ ನಾನು ಹಿಂದೂ, ನನ್ನ ಹಾಗೂ ನನ್ನ ತಂದೆ ಹೆಸರಲ್ಲಿ ರಾಮ ಇದೆ ಎನ್ನುತ್ತಾರೆ. ಹಾಗಾದರೆ ಸಿದ್ದರಾಮಯ್ಯ ಕುಂಕುಮ ಬೇಡ ಎನ್ನುವ ಹಿಂದೂನಾ? ಕುಂಕುಮ ಮಂಗಳ ಸೂಚಕ, ದೇವರಿಗೆ ಕುಂಕುಮ ಅರ್ಚನೆ ಮಾಡುತ್ತಾರೆ, ಮಂಗಳಕರ ಇವರಿಗೆ ಬೇಡವಾ? ಅಮಂಗಳ ಸ್ವೀಕಾರ ಮನಸ್ಥಿತಿ ಇದಕ್ಕೆ ಕಾರಣವಾ? ಎಂದು ಇಂದು ಕುಂಕುಮ ಹಚ್ಚಿಸಿಕೊಳ್ಳಲು ನಿರಾಕರಿಸಿದ ಸಿಎಂ ನಡೆಯನ್ನು ಸಿ.ಟಿ ರವಿ ಟೀಕಿಸಿದರು.
ನನ್ನ ಬಗ್ಗೆ ನರೇಂದ್ರಸ್ವಾಮಿ ನೀಡಿದ ಹೇಳಿಕೆ ತಿರಸ್ಕರಿಸಿದ್ದೇನೆ. ಕಾಂಗ್ರೆಸ್ ಪಕ್ಷ ನರೇಂದ್ರಸ್ವಾಮಿ ಮೂಲಕ ವಿಷಯಾಂತರಕ್ಕೆ ಆ ರೀತಿ ಹೇಳಿಸಿದೆ. ನಾವೇನು ತಾಲಿಬಾನ್ ಧ್ವಜ ಹಾಕಿದ್ದೇವಾ ಎಂದಿದ್ದೇನೆ, ಇದರಲ್ಲಿ ರಾಷ್ಟ್ರಧ್ವಜಕ್ಕೆ ಎಲ್ಲಿ ಅಪಮಾನ ಮಾಡಿದ್ದೇನೆ. ಅವರ ಟೂಲ್ ಕಿಟ್ ಭಾಗವಾಗಿ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದರು. ನಂತರ ನರೇಂದ್ರ ಸ್ವಾಮಿ ಮಾತನಾಡಿದರು. ಇದೆಲ್ಲಾ ವಿಷಯಾಂತರಕ್ಕಾಗಿ ಅಷ್ಟೆ, ಈಗ ನಾನು ನರೇಂದ್ರಸ್ವಾಮಿ ಹೇಳಿಕೆ ಸ್ವೀಕಾರ ಮಾಡಿಲ್ಲ, ಅದನ್ನು ತಿರಸ್ಕರಿಸಿದ್ದೇನೆ. ಹಾಗಾಗಿ ಅದು ಅವರಿಗೆ ಸೇರಲಿದೆ ಎಂದು ತಿರುಗೇಟು ನೀಡಿದರು.
ಡಿಸಿಎಂ ಯಾವುದಕ್ಕಾಗಿ ದೆಹಲಿಯಲ್ಲಿ ಹೋರಾಟ ಮಾಡಲಿದ್ದಾರೆ. ರಾಜ್ಯಕ್ಕೆ ಅನುದಾನ ಘೋಷಣೆ ಮಾಡುವ ನೀತಿ ಇದೆಯಾ? ರಾಜ್ಯಗಳಿಗೆ ಇಷ್ಟು ಕೋಟಿ ಅಂತಾ ಇದೆಯಾ? ಮೋದಿ ಪ್ರಧಾನಿ ಆದ ನಂತರ 4,31,000 ಕೋಟಿ ತೆರಿಗೆ ಮತ್ತು ಅನುದಾನವನ್ನು ಕೇಂದ್ರ ರಾಜ್ಯಕ್ಕೆ ಕೊಟ್ಟರೆ, ಎರಡು ಅವಧಿಯ ಮನಮೋಹನ್ ಸಿಂಗ್ ಸರ್ಕಾರ 1,42,000 ಕೋಟಿ ಕೊಟ್ಟಿತ್ತು, ಇದರಲ್ಲಿ ಯಾವುದು ಹೆಚ್ಚು, ಸುಳ್ಳನ್ನೇ ಸತ್ಯ ಮಾಡುವ ಗೊಬೆಲ್ಸ್ ಹೇಳಿಕೆಯಂತೆ ಅವರ ಶಿಷ್ಯತ್ವವನ್ನು ಎಲ್ಲರೂ ಸ್ವೀಕಾರ ಮಾಡಿದ್ದಾರೆ. ಸಿಎಂ ಸೇರಿ ಕಾಂಗ್ರೆಸ್ನ ಎಲ್ಲರೂ ಗೊಬೆಲ್ಸ್ ನೇರ ಶಿಷ್ಯರು, ಗೊಬೆಲ್ಸ್ ತತ್ವವನ್ನು ನೇರವಾಗಿ ಅಳವಡಿಸಿಕೊಂಡಿದ್ದಾರೆ ಎಂದು ಸಿ.ಟಿ ರವಿ ಟೀಕಿಸಿದರು.
ತ್ರಿಭಾಷಾ ಸೂತ್ರ ತಂದಿದ್ದೇ ಕಾಂಗ್ರೆಸ್, ಆದರೆ ಬಿಜೆಪಿ ಮೇಲೆ ಆರೋಪ ಮಾಡಲಾಗುತ್ತಿದೆ. ನಾವು ತಂದ ಶಿಕ್ಷಣ ನೀತಿ ಪ್ರಕಾರ, ಎಲ್ಲಿ ಯಾವ ಭಾಷೆ ಬೇಕಾದರೂ ಕಲಿಯಲು ಅವಕಾಶ ನೀಡಲಾಗಿದೆ. ಅಧಿಕಾರಕ್ಕೆ ಬರಲು ದೇಶ ಒಡೆದರು, ಅಧಿಕಾರ ಉಳಿಸಿಕೊಳ್ಳಲು ಸಮಾಜ ಒಡೆದರು. ಇದೇ ಬ್ರಿಟಿಷ್ ನೀತಿಯನ್ನೇ ಕಾಂಗ್ರೆಸ್ ಅಳವಡಿಸಿಕೊಳ್ಳುತ್ತಿದೆ ಎಂದರು.
ಇದನ್ನೂ ಓದಿ: ದೇಶ ವಿಭಜನೆಯ ಬಗ್ಗೆ ಡಿಕೆಶಿ ಹೇಳಿಕೆ: ಮತದ ಆಸೆಗೆ ದೇಶ ಬೇರ್ಪಡಿಸುವ ಹೇಳಿಕೆ ನೀಡಿದ್ದಾರೆ: ಬೆಲ್ಲದ ಆರೋಪ