ರಾಯಚೂರು: ನಮ್ಮ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನನಸು ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಅಯೋಧ್ಯೆ ರಾಮಮಂದಿರಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಸಲಾಗಿದೆ. 500 ವರ್ಷಗಳ ಇತಿಹಾಸವಿದೆ. ನಮ್ಮ ಕನಸನ್ನು ಇದೀಗ ಪ್ರಧಾನಿ ನರೇಂದ್ರ ಮೋದಿ ನನಸು ಮಾಡಿದ್ದಾರೆ ಎಂದರು.
ಕಾಂಗ್ರೆಸ್‌ನವರು ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿಯನ್ನು ಅರೆಸ್ಟ್ ಮಾಡಿದರು. ಹಿಂದೂಗಳ ವಿರುದ್ಧ ಅವರು ತಕ್ಷಣ ಕ್ರಮಕ್ಕೆ ಮುಂದಾಗುತ್ತಿದ್ದಾರೆ. ಅಷ್ಟೇ ಅಲ್ಲ, ಹಿಂದೂಗಳ ಭಾವನೆಗೆ ಧಕ್ಕೆ ತರುವುದಕ್ಕೆ ಕಿಂಚಿತ್ತೂ ಯೋಚಿಸುವುದಿಲ್ಲ ಎಂದು ಆರೋಪಿಸಿದರು.
ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ಗ್ರಾ.ಪಂ.ನಿಂದ ಹಾರಿಸಿದ ಧ್ವಜವನ್ನು ಪೊಲೀಸರ ಮೂಲಕ ತೆರವುಗೊಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸವನ್ನು ನೀವೇ ಮಾಡುತ್ತಿದ್ದೀರಿ ಎಂದರು.
ಬೆಂಗಳೂರಿನಲ್ಲಿ ಶನಿವಾರ ವಿಶೇಷ ಕಾರ್ಯಕಾರಣಿ ಸಭೆ ನಡೆದಿದ್ದು, ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಕಾರಾತ್ಮಕ ಚರ್ಚೆ ನಡೆಯಿತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು 8 ತಿಂಗಳಾಗಿದೆ. ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಸರ್ಕಾರ, ಗ್ಯಾರೆಂಟಿಗಳು ಈಡೇರಿವೆ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ. ಯೋಜನೆಗಳು ಮನೆ ಮನೆಗೆ ತಲುಪಿಲ್ಲ. ಅವುಗಳೆಲ್ಲವೂ ವಿಫಲವಾಗಿವೆ. ಜಾಹೀರಾತು ಕೊಟ್ಟು ಪ್ರಚಾರ ಮಾಡುತ್ತಿದ್ದಾರೆ. ಜನರಿಗೆ ದ್ರೋಹ ಮಾಡುತ್ತಿದ್ದಾರೆ. ಒಂದು ಹೊಸ ಯೋಜನೆಯನ್ನೇ ತರಲು ಆಗಿಲ್ಲ. 14 ಬಾರಿ ಬಜೆಟ್ ಮಂಡಿಸಿದ ಸಿಎಂ ಇದ್ದಾರೆ. ನಮ್ಮ ಜನರ ವಿಶ್ವಾಸ ಸುಳ್ಳಾಗಿವೆ ಎಂದು ಟೀಕಿಸಿದರು.
ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ ಕೊಡ್ತೀವಿ ಅಂದಿದ್ದರು. ಆದರೆ ಎಲ್ಲಿ ಕೊಡುತ್ತಿದ್ದಾರೆ?. 5 ಕೆ.ಜಿ ಕೇಂದ್ರದಿಂದ ಬರುತ್ತಿದೆ. ಅದಕ್ಕೂ ಕಲ್ಲು ಹಾಕುತ್ತಿದ್ದಾರೆ. ಒಂದು ಕೆ.ಜಿ ಅಕ್ಕಿಯನ್ನೂ ಕೊಡಲು ಇವರಿಗೆ ಸಾಧ್ಯವಾಗಿಲ್ಲ. ಉಚಿತ ವಿದ್ಯುತ್ ಎಲ್ಲಿದೆ?. ದಿನಕ್ಕೆ 7 ಗಂಟೆ ಕೊಡುವ ಬದಲು ರೈತರಿಗೆ ಬರೆ ಹಾಕಿದ್ದಾರೆ. ಎಸ್ಸಿ, ಎಸ್ಟಿಗೆ ಇಟ್ಟ ಹಣವನ್ನು ಬೇರೆಡೆ ಡೈವರ್ಟ್ ಮಾಡುತ್ತಿದ್ದಾರೆ. ಯುವನಿಧಿಗೆ ಕೇವಲ 65 ಸಾವಿರ ನೋಂದಣಿ ಆಗಿದೆ. ಪ್ರತಿ ಗ್ಯಾರಂಟಿ ಯೋಜನೆಯಲ್ಲೂ ಅನ್ಯಾಯ ಮಾಡಿದ್ದಾರೆ ಎಂದು ಟೀಕಿಸಿದರು.
ಕೇಂದ್ರದಿಂದ ಬರುವ ಅನುದಾನಕ್ಕೆ ಕಾಯದೇ ಈ ಹಿಂದೆ ಯಡಿಯೂರಪ್ಪ ಬರಪರಿಹಾರ ಕೊಟ್ಟಿದ್ದರು. ನೀವು ಯಾಕೆ ಕೇಂದ್ರದ ಕಡೆ ಬೆಟ್ಟು ಮಾಡಿ ತೋರಿಸುತ್ತಿದ್ದೀರಿ. ನೀವು ಕೊಡಬೇಕಾದ ಪರಿಹಾರ ಕೊಡಿ. ದೇಶದಲ್ಲಿ ಅನೇಕ ರಾಜ್ಯಗಳಿವೆ. ಕೇಂದ್ರ ಸರ್ಕಾರ ತೀರ್ಮಾನ ಮಾಡಿ ಕೊಡುತ್ತೆ. ರಾಜ್ಯ ಸರ್ಕಾರ ಯಾಕೆ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ. ಬರ ಅಧ್ಯಯನ ಮಾಡಿ ಸಭೆಯ ಪರಿಹಾರ ಕೊಡುವ ಕೆಲಸ ಮಾಡುತ್ತಿಲ್ಲ ಎಂದರು.
ಜನಾರ್ದನ ರೆಡ್ಡಿ ಬಿಜೆಪಿಯೊಂದಿಗೆ ಕೈ ಜೋಡಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದರ ಬಗ್ಗೆ ದೆಹಲಿ ನಾಯಕರೊಂದಿಗೆ ಚರ್ಚಿಸಿಲ್ಲ. ನಂತರ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಮಂಡ್ಯ ಟಿಕೆಟ್ ಅಂತಿಮವಾಗಿಲ್ಲ-ಯಡಿಯೂರಪ್ಪ