ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೆಪಿಎಸ್ಸಿ ಪರೀಕ್ಷೆಯ ಗೊಂದಲಗಳು ಕೊನೆಗೊಳ್ಳುವಂತೆ ಕಾಣುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, 'ಇತ್ತೀಚೆಗಷ್ಟೇ ಪ್ರಶ್ನೆ ಪತ್ರಿಕೆಯ ನ್ಯೂನ್ಯತೆ ಬಯಲಾದ ಬೆನ್ನಲ್ಲೇ ಮತ್ತೆ ಮರು ಪರೀಕ್ಷೆಗೆ ಆದೇಶ ಹೊರಡಿಸಿ ಸಾವಿರಾರು ಪರೀಕ್ಷಾರ್ಥಿಗಳ ಶಾಪಕ್ಕೆ ಸರ್ಕಾರ ಗುರಿಯಾಗಿತ್ತು. ಈ ಹಿಂದೆ ನಡೆದ ಪರೀಕ್ಷೆ ರದ್ದು ಪಡಿಸಿರುವ ಕುರಿತು ಯಾವುದೇ ಆದೇಶ ಹೊರಡಿಸದೆ, ಮರುಪರೀಕ್ಷೆ ನಿಗದಿಪಡಿಸಿ ಮತ್ತೊಂದು ಪ್ರಮಾದ ಎಸಗಲು ಮುಂದಾಗಿರುವುದು ದುರ್ದೈವದ ಸಂಗತಿ' ಎಂದು ಸರ್ಕಾರದ ವಿರುದ್ಧ ಬರೆದಿದ್ದಾರೆ.
'ಉದ್ಯೋಗವನ್ನು ಅರಸಿ ಪರೀಕ್ಷೆಗಳನ್ನು ಬರೆಯುವ ಉದ್ಯೋಗಾಕಾಂಕ್ಷಿಗಳನ್ನು ಪದೇ ಪದೇ ಸಂಕಷ್ಟಕ್ಕೆ ತಳ್ಳುತ್ತಿರುವುದು ಖಂಡನೀಯ. ನಾಡಿನ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ತಾಳ್ಮೆ ಹಾಗೂ ಸಹನೆ ಕಳೆದುಕೊಳ್ಳುವ ಮುನ್ನ ಕೆಪಿಎಸ್ಸಿ ಯಡವಟ್ಟುಗಳಿಗೆ ಕಡಿವಾಣ ಹಾಕಿ ನೇಮಕಾತಿ ಪರೀಕ್ಷೆಗಳು ಸೂಕ್ತ ರೀತಿಯಲ್ಲಿ ನಡೆಸಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ' ಎಂದು ಒತ್ತಾಯಿಸಿದ್ದಾರೆ.
'ಜನಸಾಮಾನ್ಯರಿಂದ ಹಿಡಿದು ಅಧಿಕಾರಿ ವರ್ಗದವರೆಗೂ ಕಾಂಗ್ರೆಸ್ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿರುವುದು ನಿಲ್ಲುವಂತೆ ಕಾಣುತ್ತಿಲ್ಲ. ಯಾವೊಂದು ಹೊಸ ಯೋಜನೆಗಳೂ ಜಾರಿಯಾಗಲಿಲ್ಲ, ಹೊಸ ಕಾಮಗಾರಿಗಳಿಗೆ ಚಾಲನೆಯೂ ಸಿಗಲಿಲ್ಲ, ಯಾವ ಇಲಾಖೆಯ ಅಧಿಕಾರಿಗಳಿಗೂ ಸಮಯಕ್ಕೆ ಸರಿಯಾಗಿ ವೇತನ ಸಿಗುತ್ತಿಲ್ಲ, ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ ತಪ್ಪುತ್ತಿಲ್ಲ. ಇದೀಗ ಶಿಕ್ಷಕರಿಗೂ ಸಂಕಟ ತಂದೊಡ್ಡಿರುವ ಕಾಂಗ್ರೆಸ್ ಸರ್ಕಾರ, ಸೇವಾ ಭದ್ರತೆಗಾಗಿ ನಿರಂತರ ಹೋರಾಟ ನಡೆಸುತ್ತಲೇ ತ್ರಿಶಂಕು ಸ್ಥಿತಿಯಲ್ಲಿ ದಿನ ದೂಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಕಳೆದ 4 ತಿಂಗಳಿಂದಲೂ ವೇತನ ನೀಡಿಲ್ಲ. ಇದರಿಂದ ಶಿಕ್ಷಕರು ಜೀವನ ನಡೆಸವುದೂ ಕಷ್ಟವಾಗಿದೆ' ಎಂದು ಹರಿಹಾಯ್ದಿದ್ದಾರೆ.
'ಸರ್ಕಾರದ ಈ ತಾತ್ಸಾರ ಧೋರಣೆಯಿಂದಾಗಿ 42 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗಷ್ಟೇ ಅಲ್ಲ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಕೊಡಲಿ ಪೆಟ್ಟು ಬೀಳಲಿದೆ. ತಕ್ಷಣ ಈ ದಪ್ಪ ಚರ್ಮದ ಸರ್ಕಾರ ಉಪನ್ಯಾಸಕರಿಗೆ ವೇತನ ಬಿಡುಗಡೆ ಮಾಡದಿದ್ದರೆ ಉಪನ್ಯಾಸಕರ ಪರ ಬೀದಿಗಿಳಿದು ಬಿಜೆಪಿ ಪ್ರತಿಭಟನೆ ಮಾಡಲಿದೆ' ಎಂದು ಸರ್ಕಾರಕ್ಕೆ ವಿಜಯೇಂದ್ರ ಎಚ್ಚರಿಕೆ ರವಾನಿಸಿದ್ದಾರೆ.
ಇದನ್ನೂ ಓದಿ: ನಾನು ಸಿದ್ದರಾಮಯ್ಯ ನೆರಳಲ್ಲಿ ಬಂದಿದ್ದೇನಾ? ನಾನ್ಯಾಕೆ ಭಯಪಡಲಿ: ಹೆಚ್.ಡಿ.ಕುಮಾರಸ್ವಾಮಿ - H D Kumaraswamy