ಬೆಂಗಳೂರು: ವೋಟು ಕೊಡದಿದ್ದರೆ ಗ್ಯಾರಂಟಿ ನಿಲ್ಲಿಸುವ ಬಗ್ಗೆ ಮತದಾರರಿಗೆ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಬೆದರಿಕೆ ಒಡ್ಡುತ್ತಿದ್ದಾರೆ. ನಿಮ್ಮ ವೋಟು ಅಕ್ಷತೆ ಕಾಳಿಗಾ? ಐದು ಗ್ಯಾರಂಟಿಗಾ ಎನ್ನುವ ಪ್ರಶ್ನೆಯನ್ನು ಜನತೆಯ ಮುಂದಿಟ್ಟಿದ್ದಾರೆ. ಅವರು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಗ್ರಹಿಸಿದರು.
''ಮೋದಿಯವರ ಅಭಿವೃದ್ಧಿ ಕಾರ್ಯ, ಶ್ರೀರಾಮನ ಜೈಕಾರ, ಕೇಸರಿಯ ವಿಸ್ತಾರ ಕಾಂಗ್ರೆಸ್ಸಿಗರನ್ನು ಕಂಗೆಡಿಸಿದೆ. ಅಖಾಡಕ್ಕೆ ಬರುವ ಮುನ್ನವೇ ಸೋಲೊಪ್ಪಿಕೊಳ್ಳುವಂತೆ ಮಾಡಿದೆ. ಪ್ರಬುದ್ಧತೆಗೆ ಹೆಸರಾದ ನಮ್ಮ ಕರ್ನಾಟಕದ ಮತದಾರರನ್ನು ಕಾಂಗ್ರೆಸ್ ಆಮಿಷಗಳಿಗೆ ಬಲಿಯಾಗುವ ದುರ್ಬಲ ಮನಸ್ಸಿನವರು ಎಂದು ಭಾವಿಸಿದೆ. ಈ ನಿಟ್ಟಿನಲ್ಲಿ ತಮ್ಮ ಶಾಸಕರೊಬ್ಬರ ಮೂಲಕ ಮತದಾರರನ್ನು ಬಿಕ್ಷುಕರಂತೆ ಬೆದರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಮಾನಿಸುವ ಹೇಳಿಕೆ ಕೊಡಿಸಿರುವುದು ಅಕ್ಷಮ್ಯ ಅಪರಾಧ. ಈ ಕೂಡಲೇ ಕಾಂಗ್ರೆಸ್ ಜನರ ಬಳಿ ಬೇಷರತ್ ಕ್ಷಮೆಯಾಚಿಸಬೇಕು'' ಎಂದು ಬಿ.ವೈ. ವಿಜಯೇಂದ್ರ ಒತ್ತಾಯಿಸಿದರು.
''ಯಾರದೋ ದುಡ್ಡು ಯಲ್ಲಮನ ಜಾತ್ರೆಯ ರೀತಿ ಜನರ ತೆರಿಗೆಯಿಂದ ರಾಜ್ಯದ ಬೊಕ್ಕಸ ಸೇರುವ ಹಣವನ್ನು ಬಿಟ್ಟಿ ಭಾಗ್ಯದ ಹೆಸರಿನ ಯೋಜನೆಗಳಿಗೆ ಸರ್ಕಾರ ಬಳಸಿಕೊಂಡರೂ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗದೇ ಪರದಾಡುತ್ತಿದೆ. ಈ ನಡುವೆ ಫಲಾನುಭವಿ ಜನರನ್ನು ಹಂಗಿಸಿ, ಬೆದರಿಸಿ ಕರ್ನಾಟಕದ ಮಾನ ಕಳೆಯುತ್ತಿದೆ'' ಎಂದು ವಿಜಯೇಂದ್ರ ಟೀಕಿಸಿದರು.
ಕಾಂಗ್ರೆಸ್ನಿಂದ ಬ್ಲ್ಯಾಕ್‍ಮೇಲ್ ರಾಜಕಾರಣ: ಶಾಸಕ ಬಾಲಕೃಷ್ಣ ಅವರ ಹೇಳಿಕೆಯನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷ ಬ್ಲ್ಯಾಕ್‍ಮೇಲ್ ರಾಜಕಾರಣ ಮಾಡುವುದು ಗೊತ್ತಾಗುತ್ತದೆ ಎಂದು ಬಿಜೆಪಿ ಯುವಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು ಆರೋಪಿಸಿದರು.
ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಮತ ಕೊಟ್ಟರೆ ಗ್ಯಾರಂಟಿಗಳು ಮುಂದುವರೆಯುತ್ತವೆ. ಇಲ್ಲವಾದರೆ ಅದು ಬಂದ್ ಆಗಲಿದೆ ಎಂದು ಶಾಸಕ ಬಾಲಕೃಷ್ಣ ಅವರು ಹೇಳಿದ್ದಾರೆ ಎಂದ ಅವರು, ಕಾಂಗ್ರೆಸ್ ಪಕ್ಷದ್ದು ಬೋಗಸ್ ಗ್ಯಾರಂಟಿ ಎಂದು ಬಿಜೆಪಿ ವಿಧಾನಸಭೆಯಲ್ಲಿ ಪ್ರತಿಭಟನೆಯನ್ನೂ ಮಾಡಿತ್ತು ಎಂದರು.
ಈ ಹೇಳಿಕೆ ಸಂವಿಧಾನಕ್ಕೆ ನೂರಕ್ಕೆ ನೂರರಷ್ಟು ವಿರುದ್ಧವಾದುದು. ಅವರು ಕೊಟ್ಟ ಗ್ಯಾರಂಟಿಗಳು ಸರಿಯಾಗಿ ತಲುಪುತ್ತಿವೆಯೇ? ಎಷ್ಟು ಜನ ಬಿಪಿಎಲ್ ಕಾರ್ಡ್‍ದಾರರನ್ನು ಇವತ್ತು ಎಪಿಎಲ್ ಮಾಡಿದ್ದಾರೆ? ಎಂದ ಧೀರಜ್, ಪ್ರತಿದಿನ ಫುಡ್ ಇನ್ಸ್ಪೆಕ್ಟರ್ಗಳು, ಫುಡ್ ಶಿರಸ್ತೇದಾರರು ಎಪಿಎಲ್ ಕಾರ್ಡ್‍ದಾರರನ್ನು ಎಪಿಎಲ್ ಕಾರ್ಡ್‍ದಾರರನ್ನಾಗಿ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು 5 ಕೆಜಿ ಅಕ್ಕಿ ಕೊಡುತ್ತಿದೆ. ಇವರು 3 ಕೆಜಿ ಅಕ್ಕಿ ನೀಡಿ, 2 ಕೆಜಿ ರಾಗಿ ಕೊಡುತ್ತಾರೆ. 5 ಕೆಜಿ ಅಕ್ಕಿ ಕೊಟ್ಟು ಅದರ ಮೇಲೆ 2 ಕೆಜಿ ರಾಗಿ ಕೊಡಬಹುದಲ್ಲವೇ? ದುಡ್ಡು ಕೊಡುತ್ತೇವೆ ಎನ್ನುತ್ತಾರೆ. ಎಷ್ಟು ತಿಂಗಳಿಗೆ ದುಡ್ಡು ಕೊಟ್ಟಿದ್ದಾರೆ? ಗೃಹಲಕ್ಷ್ಮಿ ಯೋಜನೆಯಡಿ ಒಂದು ಕಂತು ಬಿಟ್ಟು ಇನ್ಯಾರಿಗಾದರೂ ದುಡ್ಡು ಬಂದಿದೆಯೇ? ನೀವು ಯಜಮಾನಿ ಅಲ್ಲ ಎಂಬಿತ್ಯಾದಿ ನೆಪಗಳನ್ನು ಹೇಳುತ್ತ ಸಂಸತ್ ಚುನಾವಣೆವರೆಗೂ ತಳ್ಳಿಬಿಟ್ಟರು. ಇವತ್ತು ರಾಜ್ಯ, ದೇಶದಲ್ಲಿ ಬಿಜೆಪಿ ಪರ ಅಲೆ ಇದೆ ಎಂದು ಕಾಂಗ್ರೆಸ್ಸಿಗರಿಗೆ ಗೊತ್ತಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಪ್ರಾಬಲ್ಯ ಹೆಚ್ಚಿದೆ. ಅದಕ್ಕಾಗಿ ಬಾಲಕೃಷ್ಣರವರು ಅಲ್ಲಿ ಹೋಗಿ ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಮುಂದಾಗಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ: 'ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ ಗ್ಯಾರಂಟಿ ರದ್ದುಗೊಳಿಸುವುದು ಉತ್ತಮ'