ಬೆಂಗಳೂರು: ಬಳ್ಳಾರಿಯಲ್ಲಿ ಬಾಣಂತಿಯರು ಮತ್ತು ಶಿಶುಗಳ ಮರಣ ಸಂಬಂಧ ರಾಜ್ಯದ ಕಾಂಗ್ರೆಸ್ ಸರ್ಕಾರದ ಅಮಾನವೀಯ ನಡೆಯನ್ನು ಜನರು ಪ್ರಶ್ನಿಸುವಂತಾಗಿದೆ ಎಂದು ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ದುರ್ಘಟನೆ ಸಂಬಂಧ ಸೂಕ್ತ ನ್ಯಾಯಾಂಗ ತನಿಖೆ ಮಾಡಿಸಿ, ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಬ್ಲ್ಯಾಕ್ ಲಿಸ್ಟ್ ಆದ ಕಂಪನಿಯಿಂದ ಐವಿ ಗ್ಲುಕೋಸ್ ಖರೀದಿಸಿದ್ದು, ದುರಂತಕ್ಕೆ ಕಾರಣವಾಗಿದೆ. ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ದೂರಿದರು.
ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಭೇಟಿ ನೀಡಿಲ್ಲ. ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರು ವಕ್ಫ್ನಲ್ಲಿ ಬ್ಯುಸಿ ಆಗಿದ್ದರಿಂದ ಅವರೂ ಕೂಡ ಸ್ಥಳಕ್ಕೆ ಹೋಗಿಲ್ಲ ಎಂದು ಕಿಡಿಕಾರಿದರು.
ಈ ಪ್ರಕರಣ ಸಂಬಂಧ ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ಅವರ ತಂಡವು ಲೋಕಾಯುಕ್ತರನ್ನು ಇಂದು ಭೇಟಿ ಮಾಡಿದೆ. ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ಮರೆತಿದೆ. ನಿನ್ನೆ ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ಮಾಡಲು ಮುಖ್ಯಮಂತ್ರಿ ಹೊರಟರೆ, ಜನಕಲ್ಯಾಣ ಸಮಾವೇಶವೆಂದು ಹೆಸರು ಬದಲಿಸಿ ಕಾರ್ಯಕ್ರಮ ಮಾಡಿದ್ದಾರೆ. ಜನಕಲ್ಯಾಣ ಸಮಾವೇಶ ಇರಲಿ. ರಾಜ್ಯದ ಪರಿಸ್ಥಿತಿ ಏನೆಂದು ಮುಖ್ಯಮಂತ್ರಿ ಗಮನಿಸಬೇಕೆಂದು ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಪ್ರವಾಸ ಮಾಡಿ ಬಂದಿದ್ದೇನೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ತೊಗರಿ ಬೆಳೆಯುವ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರಕಾರ ಸರ್ವೇ ಮಾಡಿ ರೈತರಿಗೆ ಪರಿಹಾರ ನೀಡಬೇಕು ಆಗ್ರಹಿಸಿದರು.
ಆರ್.ಅಶೋಕ್ ಪ್ರತಿಕ್ರಿಯೆ: ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಕ್ಫ್ ಭೂ ಕಬಳಿಕೆ ವಿರುದ್ಧ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ನೋವಿನಿಂದ ಮಾತಾಡಿರುವುದಕ್ಕೆ ಕಾಂಗ್ರೆಸ್ ಸರ್ಕಾರ ತಕ್ಷಣ ಕ್ರಮ ಕೈಗೊಂಡಿದೆ. ಮುಸ್ಲಿಂ ಲೀಗ್‌ನ ಮೌಲಾನ ಅಬು ಎಂಬವರು ಸಂಸತ್ತು, ನ್ಯಾಯಾಲಯವನ್ನು ತಿರಸ್ಕರಿಸುತ್ತೇನೆಂದು ಮಾತಾಡಿದರೂ ಸರ್ಕಾರ ಕ್ರಮ ವಹಿಸಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕುಕ್ಕರ್ ಬ್ರದರ್‌ಗಳ ಮೇಲೆ ಪ್ರೀತಿ ಇದ್ದು, ಅವರ ವಿರುದ್ಧ ಕ್ರಮ ವಹಿಸುತ್ತಿಲ್ಲ ಎಂದು ಕಿಡಿಕಾರಿದರು.
ಗುಂಡಿಗಳ ಊರು ಬೆಂಗಳೂರು: ರಾಜಧಾನಿ ಬೆಂಗಳೂರು ಗುಂಡಿಗಳ ಊರಾಗಿದೆ. ಒಂದೇ ಒಂದು ಗುಂಡಿ ಇಲ್ಲದ ರಸ್ತೆ ನಗರದಲ್ಲಿ ಇಲ್ಲ. ಬಿಬಿಎಂಪಿ ಆಯುಕ್ತರು ಲಕ್ಷಗಟ್ಟಲೆ ಗುಂಡಿ ಇದೆ, ಮುಚ್ಚಿದ್ದೇವೆ ಎನ್ನುತ್ತಾರೆ. ನಂತರ ಮತ್ತೆ ಗುಂಡಿಗಳ ಸಂಖ್ಯೆ ಹೇಳುತ್ತಾರೆ. ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಎಷ್ಟು ಅನುದಾನ ಬಿಬಿಎಂಪಿಗೆ ನೀಡಲಾಗಿದೆ ಎಂದು ತಿಳಿಸಲಿ. ಅದು ಬಿಟ್ಟು ʼನಮ್ಮ ತೆರಿಗೆ ನಮ್ಮ ಹಕ್ಕುʼ ಎಂದು ಹೇಳುತ್ತಾರೆ. ಹಾಗಾದರೆ ಬೆಂಗಳೂರಿನ ತೆರಿಗೆ ಯಾರ ಹಕ್ಕು? ಪ್ರತೀ ವಿಧಾನಸಭಾ ಕ್ಷೇತ್ರಕ್ಕೂ 100 ಕೋಟಿ ರೂ. ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಜಲಮಂಡಳಿ ಅಧ್ಯಕ್ಷರು ಎಲ್ಲ ಶಾಸಕರಿಗೆ ಪತ್ರ ಬರೆದು ದರ ಏರಿಕೆಗೆ ಸಹಕಾರ ನೀಡಲು ಕೋರಿದ್ದಾರೆ. ಹಾಲಿನ ದರ ಹಾಗೂ ಆಲ್ಕೋಹಾಲ್ ದರ ಹೆಚ್ಚಳಕ್ಕೆ ಸಿದ್ಧತೆ ನಡೆದಿದೆ. ಅರಣ್ಯ ಸಚಿವರು ನದಿ ನೀರಿಗೂ ತೆರಿಗೆ ವಿಧಿಸಲು ಮುಂದಾಗಿದ್ದಾರೆ. ಇನ್ನು ಸಮುದ್ರಕ್ಕೆ ತೆರಿಗೆ ವಿಧಿಸುವುದು ಬಾಕಿ ಇದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜೊತೆಗಿನ ಸಭೆಯಲ್ಲಿ, ಎಲ್ಲರೂ ಒಂದಾಗಿ ಹೋಗುವ ಕುರಿತು ಸಲಹೆ ನೀಡಿದ್ದೇನೆ. ಇದನ್ನೇ ಬಿ.ಎಸ್.ಯಡಿಯೂರಪ್ಪ ಕೂಡ ಹೇಳಿದ್ದಾರೆ. ಎಲ್ಲವೂ ಸುಖಾಂತ್ಯವಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣದ ತನಿಖೆ ಸಿಬಿಐಗೆ ವಹಿಸಿ: ಶ್ರೀರಾಮುಲು