ಬೆಂಗಳೂರು: ದೇಶದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಹಬ್ಬ ಲೋಕಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದೆ. ಈ ನಡುವೆ ರಾಜ್ಯ ಮತ್ತೊಂದು ಚುನಾವಣೆಗೆ ಸಜ್ಜಾಗಲು ಸಿದ್ದವಾಗುತ್ತಿದೆ. ರಾಜ್ಯ ನಾಯಕರು ರಾಷ್ಟ್ರ ರಾಜಕಾರಣಕ್ಕೆ ಸಜ್ಜಾಗಿರುವುದು ಇದಕ್ಕೆ ಕಾರಣ.
ರಾಜ್ಯ ರಾಜಕೀಯದಲ್ಲಿ ಛಾಪು ಮೂಡಿಸಿದ್ದ ಹೆಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಶಾಸಕ ಇ.ತುಕರಾಂ ಮತ್ತು ಕೋಟಾ ಶ್ರೀನಿವಾಸ್ ಪೂಜಾರಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ವಿಧಾನಸಭೆ ತೊರೆದು ಲೋಕಸಭೆ ಪ್ರವೇಶಕ್ಕೆ ಸಜ್ಜಾಗಬೇಕಿದೆ. ಈ ಮೂಲಕ ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ಹಾಗೂ ವಿಧಾನ ಪರಿಷತ್‌ನ ಒಂದು ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ನಡೆಯಬೇಕಿದೆ.
ಚನ್ನಪಟ್ಟಣ: ಜೆಡಿಎಸ್-ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ಚನ್ನಪಟ್ಟಣ ಶಾಸಕ ಹೆಚ್.ಡಿ.ಕುಮಾರಸ್ವಾಮಿ, ಪ್ರತಿಷ್ಟಿತ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದು, 1 ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆಲುವು ಸಾಧಿಸಿದ್ದಾರೆ. ಭರ್ಜರಿ ಗೆಲುವು ದಾಖಲಿಸಿರುವ ಕುಮಾರಸ್ವಾಮಿಗೆ ಈಗಾಗಲೇ ಗೃಹ ಸಚಿವ ಅಮಿತ್ ಶಾ ಕರೆ ಮಾಡಿ, ನಾಳೆ ನಡೆಯಲಿರುವ ಎನ್‌ಡಿಎ ಸಭೆಗೆ ಆಹ್ವಾನ ನೀಡಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ. ಹೆಚ್‌ಡಿಕೆಯಿಂದ ತೆರವಾದ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಶಿಗ್ಗಾವಿ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹಾವೇರಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಮೂಲಕ ಅವರ ತಂದೆಯ ಮಾರ್ಗ ಅನುಸರಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸ್ವಾಮಿ ವಿರುದ್ಧ ಬೊಮ್ಮಾಯಿ ಕೂಡ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಬೊಮ್ಮಾಯಿ ತಮ್ಮ ಶಾಸಕ ಸ್ಥಾನಕ್ಕೆ ಶೀಘ್ರದಲ್ಲೇ ರಾಜೀನಾಮೆ ನೀಡಲಿದ್ದು, ಶಿಗ್ಗಾವಿ ಕ್ಷೇತ್ರ ಮತ್ತೊಂದು ಬಾರಿ ವಿಧಾನಸಭಾ ಉಪಚುನಾವಣೆಗೆ ರೆಡಿಯಾಗಬೇಕಿದೆ.
ಬಳ್ಳಾರಿ: ಮೀಸಲು ಕ್ಷೇತ್ರದಲ್ಲಿ ಸಂಡೂರಿನ ಶಾಸಕ ಇ.ತುಕಾರಾಮ್ಗೆ ಕಾಂಗ್ರೆಸ್ ಲೋಕಸಭಾ ಟಿಕೆಟ್ ನೀಡಿತು. ನಿರೀಕ್ಷೆಯಂತೆ ತುಕಾರಾಮ್ ಗೆಲುವು ದಾಖಲಿಸಿದ್ದು ಬಿ.ಶ್ರೀರಾಮುಲುಗೆ ಶಾಕ್ ನೀಡಿದ್ದಾರೆ. ರಾಮುಲು ವಿರುದ್ಧ ಇವರು 98,294 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಇದೀಗ ರಾಷ್ಟ್ರ ರಾಜಕಾರಣಕ್ಕೆ ತೆರಳಬೇಕಿದೆ. ಲೋಕಸಭೆಗೆ ತಮಗೆ ಬೇಡ ಮಗಳಿಗೆ ಟಿಕೆಟ್ ನೀಡಿ ಎಂದು ಮನವಿ ಮಾಡಿದ್ದ ತುಕಾರಾಂ ಇದೀಗ ರಾಮುಲು ಅವರನ್ನು ಸೋಲಿಸಿದ್ದು ಸಂಸತ್ ಪ್ರವೇಶಿಸಬೇಕಿದೆ. ಶೀಘ್ರದಲ್ಲೇ ಸಂಡೂರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ವಿಧಾನ ಪರಿಷತ್ ಸ್ಥಾನ: ಸಂಸದೆ ಶೋಭಾ ಕರಂದ್ಲಾಜೆಗೆ ಕ್ಷೇತ್ರ ಬದಲಾವಣೆ ಹಿನ್ನೆಲೆಯಲ್ಲಿ ತೆರವಾದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಸರಳ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದ ಕೋಟಾ ಶ್ರೀನಿವಾಸ್ ಪೂಜಾರಿಯನ್ನು ಕಣಕ್ಕಿಳಿಸಿತ್ತು. ಇವರು ಕಾಂಗ್ರೆಸ್ನ ಜಯಪ್ರಕಾಶ್ ಹೆಗ್ಡೆ ವಿರುದ್ಧ 1,61,886 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಪರಿಷತ್ ಸದಸ್ಯರಾಗಿಯೇ ಸಚಿವರಾಗಿ ಆಯ್ಕೆಯಾಗಿದ್ದ ಕೋಟಾ ಇದೀಗ ರಾಷ್ಟ್ರ ರಾಜಕಾರಣಕ್ಕೆ ಸಜ್ಜಾಗಿದ್ದಾರೆ. ವಿಧಾನ ಪರಿಷತ್ ವಿಪಕ್ಷ ನಾಯಕರೂ ಆಗಿರುವ ಇವರಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಉಡುಪಿ - ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಕೋಟ ಶ್ರೀನಿವಾಸ ಪೂಜಾರಿ ಜಯ