ರಾಮನಗರ: ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಸಂಸದರಾಗಿ ಆಯ್ಕೆಯಾದ ಬೆನ್ನಲ್ಲೇ ಅವರ ರಾಜೀನಾಮೆಯಿಂದ ತೆರವಾಗಲಿರುವ ಬೊಂಬೆಗಳ ನಾಡು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕುರಿತು ಚರ್ಚೆ ಆರಂಭವಾಗಿದೆ. ಚುನಾವಣಾ ಆಯೋಗವು ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಘೋಷಿಸಲಿದ್ದು, ಮತ್ತೊಂದು ಉಪಕದನಕ್ಕೆ ರಾಜ್ಯ ಸಾಕ್ಷಿಯಾಗಲಿದೆ.
ಮೂರನೇ ಬಾರಿಗೆ ಎದುರಾಗಲಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮೇಲೆ ಮೂರು (ಜೆಡಿಎಸ್-ಬಿಜೆಪಿ-ಕಾಂಗ್ರೆಸ್) ಪಕ್ಷಗಳು ಕಣ್ಣಿಟ್ಟಿವೆ. ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಈ ಪೈಕಿ ಪ್ರಮುಖರು. ಚನ್ನಪಟ್ಟಣ ಕ್ಷೇತ್ರದಲ್ಲಿ ಐದು ಬಾರಿ ಗೆಲುವು ಸಾಧಿಸಿ, ಮೂರು ಬಾರಿ ಸೋಲು ಕಂಡಿರುವ ಸಿಪಿವೈ, ಈ ಬಾರಿ ಗೆದ್ದು ತಮ್ಮ ರಾಜಕೀಯ ನೆಲೆ ಭದ್ರಪಡಿಸಿಕೊಳ್ಳುವ ಗುರಿ ಹೊಂದಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇನ್ನೊಂದೆಡೆ, ಸಿ.ಪಿ.ಯೋಗೇಶ್ವರ್, ಬೆಂಗಳೂರು ಗ್ರಾ. ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಡಾ.ಮಂಜುನಾಥ್ ಅವರ ಸ್ಪರ್ಧೆ ಮತ್ತು ಗೆಲುವಿನ ಹಿಂದೆ ತಮ್ಮ ರಾಜಕೀಯ ತಂತ್ರಗಾರಿಕೆಯನ್ನು ಬಲವನ್ನಾಗಿಸಿ ಕ್ಷೇತ್ರದಲ್ಲಿ ಮತ್ತೆ ಹಿಡಿತ ಸಾಧಿಸಲು ಮುಂದಾಗಿದ್ದಾರೆ.
ಜೆಡಿಎಸ್‌ನಿಂದ ಯೋಗೇಶ್ವರ್ ಸ್ಪರ್ಧೆ?: 1999ರಿಂದಲೂ ಜೆಡಿಎಸ್ ಪಕ್ಷದ ವಿರುದ್ಧ ರಾಜಕಾರಣ ಮಾಡಿಕೊಂಡ ಬಂದ ಯೋಗೇಶ್ವರ್, 2010ರಲ್ಲಿ ಎಂ.ಸಿ.ಅಶ್ವಥ್, 2018 ಮತ್ತು 2023ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸೋಲುಂಡಿದ್ದಾರೆ. ಈ ಭಾಗದಲ್ಲಿ ತಾವೇ ಕಟ್ಟಿ ಬೆಳೆಸಿದ್ದ ಕಮಲದಲ್ಲಿ ಗೆಲುವು ಕಾಣುವುದು ಅಸಾಧ್ಯ. ಗೆದ್ದು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕಾದರೆ ಜೆಡಿಎಸ್ ಬೆಸ್ಟ್ ಎಂದು ಹಿತೈಷಿಗಳು ಸೈನಿಕನಿಗೆ ಕಿವಿಮಾತು ಹೇಳಿದ್ದಾರೆ ಎನ್ನುವ ಮಾತುಗಳೂ ಹರಿದಾಡುತ್ತಿವೆ.
ಗೆಲುವಿಗೂ ಜೆಡಿಎಸ್ ಬೆಸ್ಟ್!: ಒಕ್ಕಲಿಗ ಸಮುದಾಯದ ಭದ್ರಕೋಟೆಯಾಗಿರುವ ಚನ್ನಪಟ್ಟಣ ಹಿಂದಿನಿಂದಲೂ ಜೆಡಿಎಸ್ ಭದ್ರಕೋಟೆ. 2019ರ ಉಪಚುನಾವಣೆ ಸೇರಿದಂತೆ ಐದು ಬಾರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಯೋಗೇಶ್ವರ್, ಸ್ವತಂತ್ರ ಅಭ್ಯರ್ಥಿಯಾಗಿ ರಾಜಕೀಯ ಬದುಕು ಆರಂಭಿಸಿ ಕಾಂಗ್ರೆಸ್, ಬಿಜೆಪಿ, ಎಸ್‍ಪಿ ಬಳಿಕ ಮತ್ತೆ ಬಿಜೆಪಿ ಸೇರಿದ್ದರು.
2013ರಲ್ಲಿ ಎಸ್‍ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಯೋಗೇಶ್ವರ್ ಅವರು ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು 6,464 ಮತಗಳ ಅಂತರದಿಂದ ಸೋಲಿಸಿ, ಸಿದ್ದರಾಮಯ್ಯ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿ ತಾಲೂಕಿನಲ್ಲಿ ನೀರಿನ ಕ್ರಾಂತಿಗೆ ಕಾರಣೀಭೂತರಾದರು. ತನಗೆ ಆಧುನಿಕ ಭಗೀರಥ ಎಂಬ ಹೆಸರು ತಂದುಕೊಟ್ಟ ಕೆರೆಗಳನ್ನು ತುಂಬಿಸುವ ಕೆಲಸವು ಚುನಾವಣೆಯಲ್ಲಿ ಕೈ ಹಿಡಿಯುತ್ತದೆ ಎನ್ನುವ ಅತಿಯಾದ ಆತ್ಮವಿಶ್ವಾಸ ಹೊಂದಿದ್ದರು. ಆದರೆ ಚುನಾವಣೆಯಲ್ಲಿ ಸೋಲುಂಡಿದ್ದಾರೆ.
ಡಿಕೆಸುಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ಹೆಚ್ಚು ಮತ: ಚನ್ನಪಟ್ಟಣ ಕ್ಷೇತ್ರದಲ್ಲಿ 2,30,327 ಮತದಾರರಲ್ಲಿ ಶೇ.40ರಷ್ಟು ಒಕ್ಕಲಿಗರು ಪ್ರಾಬಲ್ಯ ಹೊಂದಿದ್ದಾರೆ. ಸುಮಾರು 25,000 ಮುಸ್ಲಿಂ ಹಾಗೂ 40 ಸಾವಿರಕ್ಕೂ ಹೆಚ್ಚಿರುವ ದಲಿತ ಮತ್ತು ಅಹಿಂದ ಮತಗಳನ್ನು ಕ್ರೋಢೀಕರಿಸಬೇಕಿದೆ. ಈ ಹಿಂದಿನ ಚುನಾವಣೆಗಳಲ್ಲಿ ಯೋಗೇಶ್ವರ್ ಅವರ ಮತಬ್ಯಾಂಕ್ ಆಗಿದ್ದ ಅಹಿಂದ, ದಲಿತ ಹಾಗೂ ಅಸಂಖ್ಯಾತ ಮುಸ್ಲಿಂ ಸಮಾಜದ ಮತಗಳು 2018ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಾಗ ಸೈನಿಕ ಬದಲಾಗಿ ಕುಮಾರಸ್ವಾಮಿ ಅವರ ಗೆಲುವಿನಲ್ಲಿ ಪಾತ್ರ ನಿರ್ವಹಿಸಿದ್ದವು. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರ್ಧೆ ಮಾಡದೇ ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಜೆಡಿಎಸ್ ಮತಬ್ಯಾಂಕ್ ಎನ್ನಲಾದ ಮುಸ್ಲಿಂ, ದಲಿತ ಹಾಗೂ ಅಹಿಂದ ಮತಗಳು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರ ಪಾಲಾದವು. ಹಾಗೊಂದು ವೇಳೆ ಜೆಡಿಎಸ್ ಸ್ವರ್ದೆ ಮಾಡಿದಿದ್ದರೇ ಕಾಂಗ್ರೆಸ್ 85000 ಮತಗಳನ್ನು ಪಡೆಯುತ್ತಿರಲಿಲ್ಲ ಎನ್ನವುದು ಸುಳ್ಳಲ್ಲ ಎಂಬ ಚರ್ಚೆ ಕೂಡ ಶುರುವಾಗಿದೆ.
ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದೇ ಆದಲ್ಲಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರ ಪಡೆ, ಬಿಜೆಪಿಯಲ್ಲಿರುವ ತನ್ನ ಪಡೆ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜತೆಗೆ ಬಿಜೆಪಿ ಮೈತ್ರಿಯಾಗಿರುವುದರಿಂದ ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸೇರಿದಂತೆ ಬಿಜೆಪಿ ದಂಡೇ ಗೆಲುವು ತಂದುಕೊಡಲಿದೆ ಎನ್ನುವ ಲೆಕ್ಕಾಚಾರವೂ ಇದೆ.
ಇದನ್ನೂ ಓದಿ: ಶ್ರೀರಾಮನ ನೆಲೆವೀಡು ಅಯೋಧ್ಯೆಯಲ್ಲಿ ಬಿಜೆಪಿ ಸೋತಿದ್ದೇಕೆ? ಇಲ್ಲಿವೆ ಕಾರಣಗಳು! - Ayodhya