ಬೆಂಗಳೂರು: ಅನುಮತಿ ಪಡೆಯದೆ ಇಪ್ಪತ್ತು ಕೊಳವೆ ಬಾವಿಗಳನ್ನು ಕೊರೆದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ.
ಬೋರ್‌ವೆಲ್ ಕೊರೆಯುವವರು ಮಂಡಳಿಯಿಂದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಕಟ್ಟುನಿಟ್ಟಿನ ಸೂಚನೆಗಳ ಹೊರತಾಗಿಯೂ ಕೆಲವರು ಆದೇಶ ಉಲ್ಲಂಘಿಸುತ್ತಿರುವುದು ಕಂಡುಬಂದಿದೆ.
ಪ್ರಮುಖ ಪ್ರಕರಣದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡ ಮನೋಜ್ ಕುಮಾರ್ ಅವರು ತಲಕಾವೇರಿ ಲೇಔಟ್ ವಿಭೂತಿಪುರ ಕೆರೆ ಬಳಿ ಬೋರ್‌ವೆಲ್ ಕೊರೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರವಾಗಿ ಸ್ಥಳಕ್ಕೆ ಭೇಟಿ ನೀಡಿದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸೈಯದ್ ಮುದಾಸಿರ್ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ.
ಪ್ರಕರಣದ ಕುರಿತು ಎಂಜಿನಿಯರ್ ಸೈಯದ್ ಮುದಾಸಿರ್ ಮಾತನಾಡಿ, "ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆ ಬಳಿಕ ಬೋರ್‌ವೆಲ್ ವಾಹನ ಸಿಬ್ಬಂದಿ ಮತ್ತು ಮಾಲೀಕರು ಠಾಣೆಗೆ ಆಗಮಿಸಿ ಮಾಹಿತಿ ನೀಡಿದ್ದಾರೆ" ಎಂದು ಹೇಳಿದರು.