ಬೆಂಗಳೂರು: ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ವಿತರಣೆಯ ನಂತರವಷ್ಟೇ ಕಟ್ಟಡಗಳಿಗೆ ತೆರಿಗೆ ಅನ್ವಯವಾಗಲಿ. ಅಲ್ಲಿಯವರೆಗೂ ಖಾಲಿ ಜಾಗಕ್ಕೆ ಮಾತ್ರ ತೆರಿಗೆ ವಿಧಿಸಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮೈಸೂರು ಮಹಾನಗರ ಪಾಲಿಕೆ ನೀಡಿದ್ದ ತೆರಿಗೆ ಬೇಡಿಕೆ ನೋಟಿಸ್ ಪ್ರಶ್ನಿಸಿ ಬಿ.ಎಂ.ಹ್ಯಾಬಿಟೇಟ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಶನಿವಾರ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಯಾವುದೇ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡು ಅದಕ್ಕೆ ಸಕ್ಷಮ ಪ್ರಾಧಿಕಾರದಿಂದ ಒಸಿ ಪಡೆದ ನಂತರವಷ್ಟೇ ಆಸ್ತಿ ತೆರಿಗೆ ವಿಧಿಸಲು ನಿಯಮಗಳಲ್ಲಿ ಅವಕಾಶವಿದೆ. ಅಲ್ಲಿಯವರೆಗೆ ಖಾಲಿ ಅಥವಾ ಮುಕ್ತ ಜಾಗಕ್ಕೆ ಮಾತ್ರ ತೆರಿಗೆ ವಿಧಿಸಬಹುದು ಎಂದು ಕೋರ್ಟ್ ತಿಳಿಸಿದೆ.
ಪ್ರಸ್ತುತದ ಪ್ರಕರಣದಲ್ಲಿ ಆಸ್ತಿಯನ್ನು ಪರಿಶೀಲಿಸಿ ಒಸಿ ನೀಡುವಲ್ಲಿ ಪಾಲಿಕೆ ಸಾಕಷ್ಟು ವಿಳಂಬ ಮಾಡಿದೆ. ಒಸಿ ಪಡೆಯುವ ಮುನ್ನ ಅರ್ಜಿದಾರರು ಕಟ್ಟಡವನ್ನು ಬಳಕೆ ಮಾಡಿದ್ದಾರೆಂಬುದಕ್ಕೆ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ. ಒಸಿ ಪಡೆದ ನಂತರವೇ ಕಟ್ಟಡವನ್ನು ಬಳಸಲಾಗಿದೆ. ಕಟ್ಟಡಕ್ಕೆ 2011ರ ಏ.25ಕ್ಕೆ ಒಸಿ ನೀಡಿರುವುದರಿಂದ ಆ ದಿನದಿಂದ ಬಳಿಕವೇ ತೆರಿಗೆ ಪಡೆದುಕೊಳ್ಳಬಹುದು ಎಂದು ಪಾಲಿಕೆಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ: ಮೈಸೂರಿನ ಜಯಲಕ್ಷ್ಮೀಪುರಂನ ವಿನೋಭನಗರದಲ್ಲಿ ಅರ್ಜಿದಾರ ಬಿ.ಎಂ.ಹ್ಯಾಬಿಟೇಟ್ ಸಂಸ್ಥೆಯು ಮಲ್ಟಿಪ್ಲೆಕ್ಸ್ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಮೈಸೂರು ಮಹಾನಗರ ಪಾಲಿಕೆ 2006ರಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿ, ನಕ್ಷೆ ಮಂಜೂರು ಮಾಡಿತ್ತು. ಅದರಂತೆ 2006ರಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಆದರೆ ಕಟ್ಟಡಕ್ಕೆ 2011ರ ಏ.25ರಂದು ಒಸಿ ನೀಡಲಾಗಿತ್ತು. ಮೈಸೂರು ಮಹಾನಗರ ಪಾಲಿಕೆಯು 2015ರಲ್ಲಿ ನೋಟಿಸ್ ನೀಡಿ 2007ರಿಂದ ಅನ್ವಯವಾಗುವಂತೆ ಆಸ್ತಿ ತೆರಿಗೆ ಪಾವತಿಸಬೇಕೆಂದು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಬಿ.ಎಂ.ಹ್ಯಾಬಿಟೇಟ್ ಸಂಸ್ಥೆಯು ಹೈಕೋರ್ಟ್ ಮೊರೆ ಹೋಗಿತ್ತು.
ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು, ಮಲ್ಟಿಪ್ಲೆಕ್ಸ್ ನಿರ್ಮಾಣಕ್ಕೆ ಅನುಮತಿ ನೀಡಲು ಜಿಲ್ಲಾಧಿಕಾರಿ ವಿಳಂಬ ಮಾಡಿದ ಕಾರಣ ನಿಗದಿಯಂತೆ 2010ಕ್ಕೆ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿಲ್ಲ. ಪಾಲಿಕೆಯಿಂದ ಒಸಿ ಪಡೆದ ನಂತರವಷ್ಟೇ ಕಟ್ಟಡವನ್ನು ಬಳಕೆ ಮಾಡಲಾಗಿದೆ. ಹಾಗಾಗಿ ಪಾಲಿಕೆಯು ಒಸಿ ವಿತರಿಸಿದ ದಿನದಿಂದ ಆಸ್ತಿ ತೆರಿಗೆ ಸಂಗ್ರಹಿಸಬೇಕೇ ಹೊರತು ಅದಕ್ಕೂ ಹಿಂದಿನ ಅವಧಿಗೆ ತೆರಿಗೆ ವಿಧಿಸುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಪಾಲಿಕೆ ಪರ ವಕೀಲರು ನಕ್ಷೆ ಅನುಮೋದನೆ ಪ್ರಕಾರ ಕಟ್ಟಡ ನಿರ್ಮಾಣ ಕಾಮಗಾರಿಯು 2008ಕ್ಕೆ ಪೂರ್ಣಗೊಳಿಸಬೇಕಿತ್ತು. ಜಿಲ್ಲಾಧಿಕಾರಿಗಳ ಅನುಮತಿ ಹಾಗೂ ಅಗ್ನಿಶಾಮಕ ದಳದ ಅನುಮತಿ ವಿಳಂಬವಾಗಿದೆ ಎನ್ನುವ ಕಾರಣಕ್ಕೆ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ವಾದ ಮಂಡಿಸಿದ್ದರು.