ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಹೆದ್ದಾರಿಯಲ್ಲಿ ಓವರ್ ಟೇಕ್ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಕೆರಳಿದ ದುಷ್ಕರ್ಮಿಗಳು ತರಕಾರಿ ವ್ಯಾಪಾರಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆ ಬೆಂಗಳೂರಿನ ಹೊರವಲಯದ ಹೊಸಕೋಟೆಯಲ್ಲಿ ನಡೆದಿದೆ.
ಹೊಸಕೋಟೆಯ ಬೆಂಗಳೂರು-ಕೋಲಾರ ರಾಷ್ಟ್ರೀಯ ಹೆದ್ದಾರಿ 75ರ ಡಾಬಾ ಬಳಿ ಭಾನುವಾರ ಮುಂಜಾನೆ 4:45 ರಿಂದ 4.50ರ ಸಮಯದಲ್ಲಿ ಗಲಾಟೆ ನಡೆದಿದೆ. ನಡೆದ ಗಲಾಟೆಯಲ್ಲಿ 27 ವರ್ಷದ ನವೀನ್ ನಾಯಕ್ ಬರ್ಬರವಾಗಿ ಕೊಲೆಯಾಗಿದ್ದಾನೆ. ಕೊಲೆಗೈದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಕೊಲೆಯಾದ ನವೀನ್ ನಾಯಕ್ ತರಕಾರಿ ವ್ಯಾಪಾರಿಯಾಗಿದ್ದು, ಹೊಸಕೋಟೆ ರಸ್ತೆಯ ಗಂಗಾಪುರ ಗೇಟ್ನಲ್ಲಿ ತರಕಾರಿ ಅಂಗಡಿ ಇಟ್ಟುಕೊಂಡಿದ್ದರು. ಪ್ರತಿದಿನ ದಿನ ಬೆಳಗ್ಗೆ ಕೆಆರ್ ಪುರಂ ಮಾರುಕಟ್ಟೆಗೆ ಹೋಗಿ ತರಕಾರಿ ಖರೀದಿಸಿ ಅಂಗಡಿಗೆ ತರುತ್ತಿದ್ದರು. ಇಂದು ತನ್ನ ಒಮ್ನಿ ಕಾರಿನಲ್ಲಿ ತರಕಾರಿಗಳನ್ನ ತುಂಬಿಕೊಂಡು ಬರುವಾಗ ಅಲ್ಟೋ ಕಾರಿನಲ್ಲಿದ್ದವರು ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆ ಓವರ್ ಟೇಕ್ ಮಾಡುತ್ತಿದ್ದರು. ಇದರಿಂದ ನವೀನ್ ನಾಯಕ್ಗೆ ವಾಹನ ಚಾಲನೆ ಮಾಡುವುದು ಕಷ್ಟವಾಗಿದೆ.
ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿ ಓವರ್ ಟೇಕ್ ಮಾಡುತ್ತಿದ್ದ ಅಲ್ಟೋ ಕಾರಿನಲ್ಲಿದ್ದವರನ್ನ ನವೀನ್ ಪ್ರಶ್ನೆ ಮಾಡಿದ್ದಾರೆ. ಇಷ್ಟಕ್ಕೆ ಕೆರಳಿದ ಅಲ್ಟೋ ಕಾರಿನಲ್ಲಿದ್ದ ನಾಲ್ವರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ, ಈ ವೇಳೆ ನವೀನ್ ನಾಯಕ್ ಜೊತೆಗಿದ್ದ ವ್ಯಕ್ತಿ ಹೆದರಿ ಓಡಿ ಹೋಗಿದ್ದಾನೆ. ತಲೆಗೆ ಬಲವಾದ ಏಟು ಬಿದ್ದ ಹಿನ್ನೆಲೆ ನವೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಅಧಿಕಾರಿ ಹೇಳಿದ್ದು ಹೀಗೆ: ಬೆಂಗಳೂರು-ಕೋಲಾರ ಹೈವೇ ರಸ್ತೆಯ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮೈಲಾಪುರ ಗೇಟ್ ಹತ್ತಿರ ಭಾನುವಾರ ಬೆಳ್ಳಂಬೆಳಗ್ಗೆ ಸುಮಾರು 4.45 ರಿಂದ 4.50ರ ವೇಳೆಗೆ ಒಂದು ಓಮ್ನಿ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಗೆ ಮತ್ತು ಇನ್ನೊಂದು ಅಲ್ಟೋ ವಾಹನದಲ್ಲಿ ಬರುತ್ತಿದ್ದ ನಾಲ್ವರಿಗೆ ಓವರ್ ಟೇಕ್ ವಿಚಾರದಲ್ಲಿ ಗಲಾಟೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಅಲ್ಟೋ ಎಂದು ಹೇಳುವ ವಾಹನದಲ್ಲಿದ್ದ ನಾಲ್ವರು ದುಷ್ಕರ್ಮಿಗಳು ಓಮ್ನಿ ಕಾರಿನಲ್ಲಿದ್ದ ವ್ಯಕ್ತಿಗೆ ಹಿಡಿದು ಹಲ್ಲೆ ಮಾಡಿದ್ದರಿಂದ ತಲೆಗೆ ಬಲವಾದ ಪೆಟ್ಟುಬಿದ್ದಿದೆ. ಹೀಗಾಗಿ ಓಮ್ನಿ ಕಾರಿನಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಓಮ್ನಿ ಕಾರಿನಲ್ಲಿ ಇನ್ನೊಬ್ಬ ವ್ಯಕ್ತಿ ಇದ್ದು, ಆತ ಗಲಾಟೆ ಆದ ಕೂಡಲೇ ಸ್ಥಳದಿಂದ ಓಡಿ ಹೋಗಿದ್ದಾನೆ. ಸುದ್ದಿ ತಿಳಿದಾಕ್ಷಣ ನಾವು ಸ್ಥಳಕ್ಕೆ ಭೇಟಿ ನೀಡಿದ್ದೇವೆ. ನಮ್ಮ ಟೆಕ್ನಿಕಲ್ ಟೀಂ ಪರಿಶೀಲನೆ ನಡೆಸಿದೆ. ಆದಷ್ಟು ಬೇಗ ನಾವು ಆರೋಪಿಗಳನ್ನು ಪತ್ತೆ ಮಾಡುತ್ತೇವೆ. ಎಲ್ಲ ರೀತಿಯಿಂದ ತನಿಖೆ ಕೈಗೊಂಡಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡ ಮನೆಯಲ್ಲಿ ಪೊಲೀಸರಿಂದ ತನಿಖೆ - Pavitra Gowda