ಮಂಗಳೂರು: ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಮಳೆಗಾಲದಲ್ಲಿ ವಿರಾಮ ಇರುತ್ತದೆ. ಈ ಸಂದರ್ಭದಲ್ಲಿ ಬಡ ಯಕ್ಷಗಾನ ಕಲಾವಿದರು ಚಿಕ್ಕಮೇಳದ ಮೊರೆ ಹೋಗುತ್ತಾರೆ. ಆದರೆ, ಈ ಚಿಕ್ಕಮೇಳದಲ್ಲಿ ಶಿಸ್ತು ಇಲ್ಲ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಶಿಸ್ತು ಮೂಡಿಸಲು ಹೊಸ ಪ್ರಯತ್ನ ಆರಂಭವಾಗಿದೆ.
ಚಿಕ್ಕಮೇಳ ಎಂದರೇನು?: ಮಳೆಗಾಲದಲ್ಲಿ ಚಿಕ್ಕಮೇಳಗಳು ಕರಾವಳಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸಾರ್ವಜನಿಕವಾಗಿ ಪ್ರದರ್ಶಿಸುವ ಯಕ್ಷಗಾನಕ್ಕೆ ಮಳೆಗಾಲದಲ್ಲಿ ವಿರಾಮ ಇರುವುದರಿಂದ ಈ ಸಂದರ್ಭದಲ್ಲಿ ಯಕ್ಷಗಾನದಲ್ಲಿ ಜೀವನ ಸಾಗಿಸುವ ಬಡ ಕಲಾವಿದರು ಬದುಕು ಸಾಗಿಸಲು ಕಂಡುಕೊಂಡ ಮಾರ್ಗವಿದು. ಎರಡು ಮೂರು ಬಡ ಕಲಾವಿದರು ಮನೆಮನೆಗೆ ಹೋಗಿ ಯಕ್ಷಗಾನದ ಸಣ್ಣ ಪ್ರಸಂಗವನ್ನು ಮಾಡಿ, ಜೀವನ ಸಾಗಿಸುತ್ತಾರೆ. ಕರಾವಳಿಯ ಕಲಾ ಪೋಷಕರು ಮನೆ ಮನೆಗೆ ಬರುವ ಈ ಯಕ್ಷಗಾನಕ್ಕೆ ಪ್ರೋತ್ಸಾಹ ನಿಡುತ್ತಾರೆ. ಇದು ಪೂರ್ವಿಕ ಕಾಲದಿಂದಲೂ ಬಂದ ಪದ್ದತಿಯಾಗಿದೆ. ಇದನ್ನು ಚಿಕ್ಕಮೇಳ ಎಂದು ಕರೆಯುತ್ತಾರೆ.
ಚಿಕ್ಕಮೇಳದ ಬಗ್ಗೆ ಇರುವ ಆರೋಪವೇನು?: ಮನೆಮನೆಗೆ ಬರುವ ಚಿಕ್ಕಮೇಳಗಳು ಹಲವು ಆರೋಪಗಳನ್ನು ಹೊಂದಿದೆ. ಒಂದೇ ಮನೆಗೆ ಎರಡು ಮೂರು ತಂಡಗಳು ಬರುವುದು, ಮನೆಯವರು ಮಲಗಿದ ನಂತರ ಅವರನ್ನು ಎಬ್ಬಿಸಿ ಯಕ್ಷಗಾನ ಸೇವೆ ನೀಡುವುದು, ಎರಡು ಮೂರು ನಿಮಿಷದಲ್ಲಿ ಪ್ರದರ್ಶನ ಮಾಡುವುದು, ಸಭ್ಯವಲ್ಲದ ಮಾತುಗಾರಿಕೆ, ಯಕ್ಷಗಾನ ಸೇವೆಯಲ್ಲಿಲ್ಲದವರು ಬರುವುದು, ಸರಿಯಾದ ವೇಷಭೂಷಣಗಳು ಇಲ್ಲದಿರುವುದು ಸೇರಿದಂತೆ ಇನ್ನಿತರ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದಿವೆ.
ಚಿಕ್ಕಮೇಳಗಳು ಮನೆಗೆ ಬಂದಾಗ ಅದನ್ನು ಕಲಾ ಪೋಷಕರು ಧಾರ್ಮಿಕ ನಂಬುಗೆಯೊಂದಿಗೆ ಬರ ಮಾಡಿಕೊಳ್ಳುತ್ತಾರೆ. ಬಂದ ಕಲಾವಿದರಿಗೆ ದಕ್ಷಿಣೆಗಳನ್ನು ನೀಡಿ ಪ್ರೋತ್ಸಾಹಿಸುತ್ತಾರೆ. ಆದರೆ ಇದನ್ನೇ ದುರುಪಯೋಗ ಮಾಡಿಕೊಳ್ಳುತ್ತಿರುವುದು ಯಕ್ಷಗಾನಕ್ಕೆ ಕಪ್ಪುಚುಕ್ಕೆಯಾಗಿಬಿಟ್ಟಿದೆ.
ಹೊಸ ಪ್ರಯತ್ನವೇನು?: ಇದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಈಗಾಗಲೇ 45 ಚಿಕ್ಕಮೇಳ ತಂಡಗಳು ನೋಂದಾಣಿಯಾಗಿವೆ. ನೋಂದಾಯಿತವಾದ ಚಿಕ್ಕಮೇಳ ತಂಡಗಳಿಗೆ ಒಕ್ಕೂಟದಿಂದ ಚಿಕ್ಕಮೇಳ ನಡೆಸಲು ಪರವಾನಗಿ ನೀಡಲಾಗುತ್ತದೆ. ಇದರಲ್ಲಿ ಕೆಲವೊಂದು ನಿಯಮಗಳನ್ನು ರೂಪಿಸಲಾಗಿದೆ. ಅವುಗಳೆಂದರೆ, ಒಂದೇ ಊರಿನಲ್ಲಿ ಎರಡೆರಡು ತಂಡ ಮನೆಗೆ ಭೇಟಿ ನೀಡುವಂತಿಲ್ಲ. ನಿಗದಿತ ಸಮಯ 10.30 ರೊಳಗೆ ಮುಕ್ತಾಯವಾಗಬೇಕು. ತಂಡದಿಂದ ಅನಪೇಕ್ಷಿತ ಘಟನೆ ನಡೆದರೆ ಒಕ್ಕೂಟಕ್ಕೆ ಮನೆಯವರು ದೂರು ನೀಡಬಹುದಾಗಿದೆ.
ಚಿಕ್ಕಮೇಳಗಳ ತಿರುಗಾಟದಲ್ಲಿ ಸಂಗ್ರಹವಾದ ಸಂಪಾದನೆಯ ಒಂದು ಭಾಗ ಚಿಕ್ಕಮೇಳದ ಕಲಾವಿದರ ಸಂಕಷ್ಟ ನಿಧಿಯಾಗಿ ಠೇವಣಿಯಾಗಿ ಇಡುವುದು. ಶಿಸ್ತು, ಸರಳತೆ, ಭಕ್ತಿಯೊಂದಿಗೆ ಮನೆ ಪ್ರವೇಶಿಸಬೇಕು. ಗಣಪತಿ ಸ್ವಸ್ತಿಕ ಕಡ್ಡಾಯ ಎಂದು ಹೇಳಬಾರದು. ವೇಷ ಭೂಷಣ ಒಪ್ಪ ಓರಣವಾಗಿರಬೇಕು. ಚೌಕಿಯಿಂದ ಹೊರಟ ಬಳಿಕ ಧೂಮಪಾನ, ಮದ್ಯಪಾನ, ಗುಟ್ಕಾ ಮೊದಲಾದ ಸೇವನೆ ಮಾಡಬಾರದು. ಕನಿಷ್ಟ 20 ನಿಮಿಷಕ್ಕೆ ಕಡಿಮೆ ಇರದಂತೆ ಪ್ರದರ್ಶನ ಮಾಡಬೇಕು ಮತ್ತು ಪ್ರಸಾದ ನೀಡಿ ಹೊರಡಬೇಕು ಸೇರಿದಂತೆ ಮೊದಲಾದ ನಿಯಮಗಳನ್ನು ಮಾಡಲಾಗಿದೆ.
ಈ ಬಗ್ಗೆ ಮಾತನಾಡಿದ ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟದ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಅವರು, ಚಿಕ್ಕಮೇಳದ ತಂಡಗಳನ್ನು ಕರೆಸಿ ಸಭೆ ನಡೆಸಲಾಗಿದೆ. ಚಿಕ್ಕಮೇಳದಲ್ಲಿ ಸಂಬಂಧಪಡದವರು, ವೇಷ ಮಾಡಲು ಗೊತ್ತಿಲ್ಲದವರು ವೇಷ ಹಾಕುವುದು ಗೊತ್ತಾಗಿದೆ. ಅದಕ್ಕಾಗಿ ಚಿಕ್ಕಮೇಳಗಳು ನೊಂದಾವಣೆಯಾದರೆ, ಅದಕ್ಕೆ ಪರವಾನಿಗೆಯನ್ನು ನಿಡುತ್ತೇವೆ. ಅದನ್ನು ಮನೆಯವರು ಗಮನಿಸಬೇಕು. ನಕಲಿಗಳಿಗೆ ಅವಕಾಶವಾಗಬಾರದು ಎಂಬ ನಿಟ್ಟಿನಲ್ಲಿ ಈ ಕಾರ್ಯ ಮಾಡುತ್ತಿದ್ದೇವೆ. ಶಿಸ್ತುಬದ್ದವಾಗಿ, ಸಂಪ್ರದಾಯ ಮೀರದೆ ಚಿಕ್ಕಮೇಳಗಳು ನಡೆಯಬೇಕು. ಮನೆಯವರು ಎರಡನೇ ತಂಡ ಬಂದರೆ ಅವಕಾಶ ಕೊಡಬಾರದು. ಪರವಾನಗಿ ಪತ್ರ ಕೇಳಬೇಕು ಎಂದರು.
ಓದಿ: ಮಳೆಗಾಲದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ವಿರಾಮ.. ಮನೆ ಮನೆಗಳಲ್ಲಿ ಚಿಕ್ಕಮೇಳ ಸೇವೆ ಪ್ರಾರಂಭ