ಚಾಮರಾಜನಗರ: ವಾರ್ಷಿಕವಾಗಿ 1.20 ಲಕ್ಷ ಆದಾಯ ಹೊಂದಿರುವವರು ಬಡತನ ರೇಖೆಗಿಂತ ಕೆಳಗಿರುವವರ ಪಟ್ಟಿಯಲ್ಲಿ ಇರುವಂತಿಲ್ಲ. ಆದಾಯ ಇದ್ದು, ತಾನು ಸರ್ಕಾರಿ ನೌಕರನಾಗಿದ್ದರೂ ಕಣ್ತಪ್ಪಿಸಿ ಬಿಪಿಎಲ್ ಕಾರ್ಡ್ ಹೊಂದಿದ್ದ ಬರೋಬ್ಬರಿ 18,292 ಅನರ್ಹ ಪಡಿತರ ಕಾರ್ಡ್ಗಳನ್ನು ಚಾಮರಾಜನಗರ ಆಹಾರ ಇಲಾಖೆ ರದ್ದು ಮಾಡಿ ಬಿಸಿ ಮುಟ್ಟಿಸಿದೆ.
ಆಹಾರ ಇಲಾಖೆ ಉಪನಿರ್ದೇಶಕ ಯೋಗಾನಂದ, "ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಆಹಾರ ಭದ್ರತೆ ಮೂಲಕ ಪಡಿತರ ಚೀಟಿಗಳನ್ನು ಹಂಚಿಕೆ ಮಾಡಲಾಗುತ್ತದೆ. 1.20 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳು, ತೆರಿಗೆ ಪಾವತಿ ಮಾಡುವಂತಹ ಕುಟುಂಬಗಳು, ಮೂರೂವರೆ ಹೆಕ್ಟೇರ್ ಜಮೀನನ್ನು ಹೊಂದಿರುವಂತಹವರು, ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹರಾಗಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿರುವಂತಹದ್ದು ಕಂಡು ಬಂದಿತ್ತು. ಅವುಗಳನ್ನು ಪತ್ತೆ ಹಚ್ಚಿ ನಾವು, ಜಿಲ್ಲೆಯಲ್ಲಿ ಸುಮಾರು 96 ಸರ್ಕಾರಿ ನೌಕರಿ ಹೊಂದಿದವರ ಬಿಪಿಎಲ್ ಕಾರ್ಡ್ಗಳ ಪೈಕಿ 69 ಅನ್ನು ರದ್ದು ಮಾಡಿದ್ದೇವೆ." ಎಂದು ತಿಳಿಸಿದರು.
"ಉಳಿದಂತೆ 3610 ಮರಣ ಹೊಂದಿದ ಸದಸ್ಯರನ್ನು ಪಡಿತರ ಚೀಟಿಯಿಂದ ತೆಗೆದು ಹಾಕಿದ್ದೇವೆ. ಸುಮಾರು 6 ತಿಂಗಳುಗಳಿಂದ ಆಹಾರ ಪದಾರ್ಥಗಳನ್ನು ಪಡೆಯದೇ ಇರತಕ್ಕಂತಹ 7,524 ಪಡಿತರ ಚೀಟಿಗಳನ್ನು ಅಮಾನತು ಮಾಡಿದ್ದೇವೆ. ಜಿಲ್ಲೆಯಲ್ಲಿ 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ ಒಟ್ಟು 10,768 ಪಡಿತರ ಚೀಟಿಗಳು ಇದ್ದು, ಮತ್ತು ಆದಾಯ ತೆರಿಗೆ ಸಲ್ಲಿಸುತ್ತಿರುವ 985 ಪಡಿತರ ಚೀಟಿಗಳು ಇದ್ದು, ಸದ್ಯ ಅವುಗಳನ್ನು ಪರಿಶೀಲನೆ ಮಾಡಿ ರದ್ದು ಪಡಿಸಲು ಕ್ರಮ ವಹಿಸಲಾಗುತ್ತಿದೆ. ಈ ಕೆಲಸ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಉಳಿದೆಲ್ಲವೂ ಈಗಾಗಲೇ ಪೂರ್ಣಗೊಂಡಿವೆ. ಈ ರೀತಿ ಒಟ್ಟಾರೆಯಾಗಿ ಜಿಲ್ಲೆಯಲ್ಲಿ 18,000 ಅನರ್ಹ ಬಿಪಿಎಲ್ ಪಡಿತರ ಕಾರ್ಡ್ಗಳನ್ನು ರದ್ದು ಪಡಿಸಿದಂತಾಗುತ್ತದೆ. ಅಕ್ರಮವಾಗಿ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವವರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಿ ಕಾರ್ಡ್ಗಳನ್ನು ರದ್ದು ಮಾಡಲಾಗುವುದು. ಸರ್ಕಾರದ ಸೌಲಭ್ಯ ನೈಜ ಫಲಾನುಭವಿಗಳಿಗೆ ತಲುಪಬೇಕು" ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಇದನ್ನೂ ಓದಿ: ದಂಡ ಸಹಿತ ಪಾನ್-ಆಧಾರ್ ಜೋಡಿಸಿದ ಬಡವರೂ ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ! - Income Tax Payers List