ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಸಂಭವಿಸಿದ ಮರುದಿನ 'ಬಸ್ಸು, ರೈಲು, ದೇವಸ್ಥಾನ, ಹೋಟೆಲ್‌ಗಳೂ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಬೆದರಿಕೆ ಇ-ಮೇಲ್ ರವಾನಿಸಿರುವ ಘಟನೆ ವರದಿಯಾಗಿದೆ. ಕಳೆದ ಶನಿವಾರ ಮಧ್ಯಾಹ್ನ 2:48ಕ್ಕೆ ಇ-ಮೇಲ್ ಕಳುಹಿಸಲಾಗಿದ್ದು, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶಾಹಿದ್ ಖಾನ್ ಹೆಸರಿನಲ್ಲಿ ಇ-ಮೇಲ್ ಬಂದಿದೆ. ಈ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು ಎಫ್ಎಸ್ಎಲ್ ವರದಿಯಲ್ಲಿ ಬಂದಿದೆ: ಸಚಿವ ಪರಮೇಶ್ವರ್
ಅಂಬಾರಿ ಉತ್ಸವ್ ಬಸ್‌ನಲ್ಲಿ ಸ್ಫೋಟಿಸುವ ಬೆದರಿಕೆ: ಸ್ವಿಜರ್ಲೆಂಡ್ ಮೂಲದ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಇ-ಮೇಲ್ ಸರ್ವಿಸ್ ಬಳಸಿರುವ ಆರೋಪಿ ಶಾಹಿದ್ ಖಾನ್ ಹೆಸರಿನಿಂದ ಮೇಲ್ ರವಾನಿಸಿದ್ದಾನೆ. ಕರ್ನಾಟಕ ಸರ್ಕಾರ, ಮುಖ್ಯಮಂತ್ರಿಗಳು, ಗೃಹಸಚಿವರು, ಅಡ್ಮಿನ್ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಡಿಸಿಪಿ ಸೇರಿದಂತೆ ವಿವಿಧ ಅಧಿಕೃತ ಖಾತೆಗಳಿಗೆ ಮೇಲ್ ರವಾನಿಸಲಾಗಿದೆ.
ಇಮೇಲ್ನಲ್ಲಿ ಏನಿದೆ...? ರಾಮೇಶ್ವರಂ ಕೆಫೆ ಸ್ಫೋಟ ಕೃತ್ಯವನ್ನ ಟ್ರೈಲರ್ ಎಂದು ಉಲ್ಲೇಖಿಸಲಾಗಿದೆ. 2.5 ಮಿಲಿಯನ್ ಡಾಲರ್ ಹಣ ಕೊಡದಿದ್ದರೆ ಕರ್ನಾಟಕದಾದ್ಯಂತ ಬಸ್, ರೈಲು, ಟ್ಯಾಕ್ಸಿ, ದೇವಾಲಯ, ಹೋಟೆಲ್‌ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬೃಹತ್ ಪ್ರಮಾಣದಲ್ಲಿ ಸ್ಫೋಟಿಸಲಾಗುವುದು ಎಂದು ಬೆದರಿಕೆ ಹಾಕಿರುವ ಸಂದೇಶ ಇಮೇಲ್ಗೆ ಬಂದಿದೆ..
ಎರಡನೇ ಟ್ರೈಲರ್ ತೋರಿಸಲು ನಾವು ಸಜ್ಜಾಗಿದ್ದು, ಅಂಬಾರಿ ಉತ್ಸವ್ ಬಸ್‌ನಲ್ಲಿ ಸ್ಫೋಟಿಸಲಾಗುವುದು. ತಮ್ಮ ಬೇಡಿಕೆಗಳು, ಮುಂದಿನ ನಡೆ ಹಾಗೂ ಸದ್ಯ ಕಳಿಸಲಾಗಿರುವ ಮೇಲ್ ಸಂದೇಶದ ಸ್ಕ್ರೀನ್ ಶಾಟ್ಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗುವುದು ಎಂದಿರುವುದು ಇಮೇಲ್ಗೆ ಬಂದಿರುವ ಸಂದೇಶದಲ್ಲಿದೆ.
ಇದನ್ನೂ ಓದಿ: 9 ನಿಮಿಷದೊಳಗೆ ರಾಮೇಶ್ವರಂ ಕೆಫೆ ಪ್ರವೇಶಿಸಿ ನಿರ್ಗಮಿಸಿದ್ದ ಶಂಕಿತ ವ್ಯಕ್ತಿ
ಇಮೇಲ್ ಬೆದರಿಕೆ: ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕುವುದು ಹೊಸದೇನಲ್ಲ. ಕಳೆದ ವರ್ಷ ಬೆಂಗಳೂರಿನ 50 ಕ್ಕಿಂತ ಹೆಚ್ಚು ಶಾಲೆಗಳಲ್ಲಿ ಬಾಂಬ್ ಇಡುವುದಾಗಿ ಬೀಬಲ್ ಕಂಪೆನಿ ಹೆಸರಿನ ಇಮೇಲ್ ಸಂದೇಶ ಬಂದಿತ್ತು. ಇದೀಗ ಮತ್ತೊಂದು ವಿದೇಶಿ ಕಂಪೆನಿ ಇಮೇಲ್ ಮೂಲಕ ಬಾಂಬ್ ಸಂದೇಶ ಹರಿಬಿಟ್ಟಿದ್ದಾರೆ.
ಇದೇ ಐಡಿ ಬಳಿಸಿ ಕಳೆದ ಫೆಬ್ರುವರಿ 8ರಂದು ಚೆನ್ನೈನ 13 ಶಾಲೆಗಳಿಗೆ ಬಾಂಬ್ ಸ್ಫೋಟದ ಸಂದೇಶ ಬಂದಿತ್ತು. ಚೆನ್ನೈ ಪೊಲೀಸರು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೂಲಕ ಪ್ರೊಟಾನ್ ಕಂಪೆನಿಯಿಂದ ಬಂದಿದ್ದ ಇಮೇಲ್ ಕಳುಹಿಸಿದವರ ವಿವರ ಕೇಳಿದ್ದರು. ವಿದೇಶದ ಕಾನೂನು ಅವಶ್ಯಕತೆಗಳಿಗೆ ನೇರವಾಗಿ ತಮ್ಮ ಗ್ರಾಹಕರ ವಿವರ ನೀಡಲು ಸಾಧ್ಯವಿಲ್ಲ ಎಂದು ಸಂಸ್ಥೆ ತಿಳಿಸಿತ್ತು. ಅಗತ್ಯವಿದ್ದರೆ ಸ್ವಿಜರ್ಲೆಂಡ್ ಸರ್ಕಾರದ ಮೂಲಕ ನೆರವು ಪಡೆಯಬಹುದು ಎಂದು ಪೋಟ್ರಾನ್ ಮೇಲ್ ತಿಳಿಸಿತ್ತು. ಹೀಗಾಗಿ ದೇಶದಲ್ಲಿ ಪ್ರೋಟಾನ್ ಮೇಲ್ ನಿಷೇಧಿಸುವ ಕುರಿತು ಕೇಂದ್ರ ಚಿಂತನೆ ನಡೆಸಿತ್ತು.