ಬೆಂಗಳೂರು: ಹೆಚ್‌ಎಎಲ್‌ನ ಕುಂದಲಹಳ್ಳಿ ಸಮೀಪದಲ್ಲಿರುವ ರಾಮೇಶ್ವರ ಕೆಫೆಯಲ್ಲಿ ಇಂದು ಮಧ್ಯಾಹ್ನ ಬಾಂಬ್ ಸ್ಫೋಟ ಸಂಭವಿಸಿದ್ದು, ಸಿಸಿಟಿವಿ ವಿಡಿಯೋ ದೊರೆತಿದೆ. ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದು, ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಜಿ & ಐಜಿಪಿ ಅಲೋಕ್ ಮೋಹನ್, "ರಾಮೇಶ್ವರಂ ಕೆಫೆಯಲ್ಲಿ ಮಧ್ಯಾಹ್ನ ಸುಮಾರು 1 ಗಂಟೆಗೆ ಬಾಂಬ್ ಸ್ಫೋಟವಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದೆವು. ಎಫ್.ಎಸ್.ಎಲ್ ತಂಡ ಕೂಡ ಬಂದಿದೆ. ಅಧಿಕಾರಿಗಳು ತನಿಖೆಯಲ್ಲಿದ್ದಾರೆ. ಘಟನೆಯಲ್ಲಿ ಸುಮಾರು 9 ಜನ ಗಾಯಗೊಂಡಿರುವ ಮಾಹಿತಿ ಇದೆ. ಸಿಎಂ ಮತ್ತು ಗೃಹ ಸಚಿವರೂ ಮಾಹಿತಿ ಪಡೆದಿದ್ದಾರೆ. ತನಿಖೆ ಬಳಿಕ ಹೆಚ್ಚಿನ ವಿವರ ಲಭ್ಯವಾಗಲಿದೆ" ಎಂದು ಹೇಳಿದರು.
ಸ್ಥಳದಲ್ಲಿ ಬ್ಯಾಟರಿ ಮತ್ತು ಸಣ್ಣ ಪುಟ್ಟ ನಟ್ಟು ಬೋಲ್ಟ್ ಪತ್ತೆ ಕುರಿತಂತೆ ಪ್ರತಿಕ್ರಿಯಿಸಿ, "ಎಫ್.ಎಸ್.ಎಲ್ ತಂಡ ತನಿಖೆ ನಡೆಸುತ್ತಿದೆ. ಈಗಲೇ ಏನನ್ನು ಹೇಳಲಾಗದು. ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ. ಎಲ್ಲವೂ ತನಿಖೆ ಬಳಿಕ ಗೊತ್ತಾಗಲಿದೆ" ಎಂದರು.
"ಮಧ್ಯಾಹ್ನ 1 ಗಂಟೆಯ ಸುಮಾರಿಗೆ ದೊಡ್ಡ ಮಟ್ಟದಲ್ಲಿ ಶಬ್ದ ಕೇಳಿಸಿತು. ಸಿಲಿಂಡರ್ ಸ್ಫೋಟವೆಂದು ತಿಳಿದು ಹೋಟೆಲ್ ಸುತ್ತಮುತ್ತಲಿನ ಜನ ಓಡಿ ಹೋಗಿದ್ದಾರೆ. ಆದರೆ, ನಂತರ ಅದು ಸಿಲಿಂಡರ್ ಸ್ಫೋಟ ಅಲ್ಲ ಎಂದು ಮೇಲ್ನೋಟಕ್ಕೆ ಗೊತ್ತಾಯಿತು. ತಕ್ಷಣ ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿಯ ಸಹಾಯದೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸ್ಥಳದಲ್ಲಿ ಸಣ್ಣಪುಟ್ಟ ನಟ್ಟು ಮತ್ತು ಬೋಲ್ಟ್, ಬ್ಯಾಗ್ ತುಂಡುಗಳು ಬಿದ್ದಿದ್ದವು" ಎಂದು ಸ್ಥಳೀಯ ನಿವಾಸಿಗಳು ಹೇಳಿದರು.
ಸಿಎಂ ಪ್ರತಿಕ್ರಿಯೆ: "ರಾಮೇಶ್ವರ ಕೆಫೆಯಲ್ಲಿ ನಡೆದಿದ್ದು ಭಾರೀ ಪ್ರಮಾಣದ ಸ್ಫೋಟವಲ್ಲ. ಆದರೆ ಸುಧಾರಿತ ಸ್ಫೋಟ ಸಂಭವಿಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಡಕನಹಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನನಗಿರುವ ಮಾಹಿತಿ ಪ್ರಕಾರ ಮಧ್ಯಾಹ್ನ 12 ಗಂಟೆಗೆ ಯಾರೋ ಹೋಟೆಲ್ಗೆ ಬ್ಯಾಗ್ ತಂದಿಟ್ಟಿದ್ದು, ಅದು ಸ್ಫೋಟಗೊಂಡಿದೆ. ಘಟನೆಯಲ್ಲಿ 8 ಜನ ಗಾಯಗೊಂಡಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ" ಎಂದರು.
ಇದು ಉಗ್ರರ ಕೃತ್ಯವೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಗೊತ್ತಿಲ್ಲ. ಪೊಲೀಸರು ತನಿಖೆ ಮಾಡುವಂತೆ ಸೂಚಿಸಿದ್ದೇವೆ. ಸ್ಥಳಕ್ಕೆ ಭೇಟಿ ನೀಡುವಂತೆ ಗೃಹ ಸಚಿವರಿಗೆ ಹೇಳಿದ್ದೇನೆ" ಎಂದು ತಿಳಿಸಿದರು.
ಗೃಹ ಸಚಿವರ ಪ್ರತಿಕ್ರಿಯೆ: "ಈ ಸ್ಫೋಟ ಯಾವ ರೀತಿ ಆಯ್ತು, ಹೇಗೆ ಮಾಡಿದ್ದಾರೆ ಎಂಬ ಬಗ್ಗೆ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ. ಡಿಜಿ ಹಾಗು ನಗರ ಪೊಲೀಸ್ ಆಯುಕ್ತರು, ಎಫ್‌ಎಸ್‌ಎಲ್, ಬಾಂಬ್ ಸ್ಕ್ಯಾಡ್ ಕೂಡ ಸ್ಥಳಕ್ಕೆ ಹೋಗಿದೆ. ಸ್ಥಳದಲ್ಲಿ ಮಾದರಿ ಸಂಗ್ರಹಿಸಲಾಗುತ್ತಿದೆ" ಎಂದು ತುಮಕೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಡಿಸಿಎಂ-ಪರಮೇಶ್ವರ್: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್, "ಬಾಂಬ್ ಬ್ಲಾಸ್ಟ್ ಆಗಿದೆ. ಕಡಿಮೆ ತೀವ್ರತೆ ಇರುವ ಬಾಂಬ್ ಇದಾಗಿದೆ. ಆರೋಪಿ ಯಾರೆಂದು ಅಲ್ ಮೋಸ್ಟ್ ಗೊತ್ತಾಗಿದೆ. ಬ್ಯಾಗ್ ಇಟ್ಟು ಒಂದು ಗಂಟೆ ನಂತರ ಬ್ಲಾಸ್ಟ್ ಆಗಿದೆ. ವ್ಯಕ್ಯಿ ಚಹರೆ ಸಹ ಗೊತ್ತಾಗಿದೆ. 28-ರಿಂದ 30 ವಯಸ್ಸಿನ ಯುವಕನಾಗಿದ್ದಾನೆ. 12 ಗಂಟೆಗೆ ಆ ಯುವಕ ಇಲ್ಲಿಗೆ ಬಂದಿದ್ದಾನೆ. ಕೌಂಟರ್ನಲ್ಲಿ ರವೆ ಇಡ್ಲಿ ಆರ್ಡರ್ ಮಾಡಿದ್ದಾನೆ. ಬಳಿಕ ಮರದ ಬಳಿ ಬ್ಯಾಗ್ ಇಟ್ಟು ಹೋಗಿದ್ದಾನೆ. ಟೈಮರ್ ಇಟ್ಟಿದ್ದರಿಂದ ಬಾಂಬ್ ಬ್ಲಾಸ್ಟ್ ಆಗಿದೆ. ಕೆಲವೇ ಗಂಟೆಗಳಲ್ಲಿ ಆರೋಪಿಯ ಬಂಧನವಾಗಲಿದೆ. ವಿಚಲಿತರಾಗೋದು ಬೇಡ. ಬೆಂಗಳೂರು ಸುರಕ್ಷಿತವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಸುಧಾರಿತ ಸ್ಫೋಟ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ-ಸಿಎಂ ಸಿದ್ದರಾಮಯ್ಯ