ಬೆಂಗಳೂರು: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಹಲವು ರಾಜಕೀಯ ಲೆಕ್ಕಾಚಾರ ನಿಗೂಢವಾಗಿದೆ.
ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ 25 ಕ್ಷೇತ್ರಗಳಲ್ಲಿ ಮಾತ್ರ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮೂರು ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ರಾಜ್ಯದ ನಾಯಕರು ಹಾಗೂ ದೆಹಲಿ ವರಿಷ್ಠರು ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ.
ಇದರಲ್ಲಿ ಮತ್ತೊಂದು ವಿಶೇಷವೆಂದರೆ, ಕೇಂದ್ರ ಸಚಿವ ಸೇರಿದಂತೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 14 ಹಾಲಿ ಸಂಸದರಿಗೆ ಗೇಟ್ ಪಾಸ್ ನೀಡಲಾಗಿದೆ. ಇನ್ನು ಮೂವರು ಸಂಸದರು ರಾಜಕೀಯ ನಿವೃತ್ತಿ ಸೇರಿದಂತೆ 14 ಮಂದಿ ಸಂಸದರಿಗೆ ಟಿಕೆಟ್ ನೀಡಲು ವರಿಷ್ಠರು ನಿರಾಕರಿಸಿದ್ದು, ಹೊಸ ಮುಖಗಳಿಗೆ ಮಣೆ ಹಾಕಿರುವುದು ಕುತೂಹಲ ಮೂಡಿಸಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹೃದಯ ತಜ್ಞ ಡಾ. ಸಿ.ಎನ್. ಮಂಜುನಾಥ್, ಮೈಸೂರು - ಕೊಡಗು ಕ್ಷೇತ್ರದಲ್ಲಿ ಮೈಸೂರು ಅರಸು ಮನೆತನದ ಯದುವೀರ್ ಸೇರಿದಂತೆ ಹಲವು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಇನ್ನು 2019 ರಲ್ಲಿ ಗೆಲುವು ಸಾಧಿಸಿದ್ದ 14 ಮಂದಿ ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಇಬ್ಬರು ಹಾಗೂ 10 ಯುವ ಮುಖಗಳಿಗೆ ಮನ್ನಣೆ ನೀಡಲಾಗಿದೆ.
ಟಿಕೆಟ್ ಕೈತಪ್ಪಿರುವ ಸಂಸದರು: ಬೆಳಗಾವಿಯಲ್ಲಿ ಮಂಗಳ ಸುರೇಶ್ ಅಂಗಡಿ, ಹಾವೇರಿಯಲ್ಲಿ ಶಿವಕುಮಾರ್ ಉದಾಸಿ, ಬಳ್ಳಾರಿಯಲ್ಲಿ ದೇವೇಂದ್ರಪ್ಪ, ದಾವಣಗೆರೆ ಜಿಲ್ಲೆಯಲ್ಲಿ ಜಿ ಎಂ ಸಿದ್ದೇಶ್ವರ್, ಕೊಪ್ಪಳದಲ್ಲಿ ಕರಡಿ ಸಂಗಣ್ಣ, ಚಿತ್ರದುರ್ಗ ಜಿಲ್ಲೆಯಲ್ಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ದಕ್ಷಿಣಕನ್ನಡದಲ್ಲಿ ನಳೀನ್‍ಕುಮಾರ್ ಕಟೀಲ್, ಉತ್ತರಕನ್ನಡದಲ್ಲಿ ಅನಂತಕುಮಾರ್ ಹೆಗಡೆ, ಬೆಂಗಳೂರು ಉತ್ತರ ಡಿ ವಿ ಸದಾನಂದಗೌಡ, ಮೈಸೂರು-ಕೊಡುಗು ಕ್ಷೇತ್ರದಿಂದ ಪ್ರತಾಪ್ ಸಿಂಹ, ಕೋಲಾರ ಕ್ಷೇತ್ರದಿಂದ ಮುನಿಸ್ವಾಮಿ ಅವರಿಗೆ ಟಿಕೆಟ್ ತಪ್ಪಿದೆ.
ಈ ಮೈತ್ರಿಯಾಗಿರುವ ಕಾರಣ ಕಳೆದ ಬಾರಿ ಗೆಲುವು ಕಂಡಿದ್ದ ಕೋಲಾರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಟ್ಟಿರುವುದರಿಂದ ಬಿಜೆಪಿ ಹಾಲಿ ಸಂಸದ ಮುನಿಸ್ವಾಮಿ ಅವರಿಗೂ ಟಿಕೆಟ್ ಕೈತಪ್ಪಿದೆ. ವಯಸ್ಸಿನ ಹಿನ್ನೆಲೆ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ತುಮಕೂರು ಕ್ಷೇತ್ರದಿಂದ ಜಿ ಎಸ್ ಬಸವರಾಜ್, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಿ ಎನ್ ಬಚ್ಚೇಗೌಡ ಹಾಗೂ ಚಾಮರಾಜನಗರ ಕ್ಷೇತ್ರದಿಂದ ವಿ.ಶ್ರೀನಿವಾಸ್ ಪ್ರಸಾದ್ ಅವರು ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ.
- ಮಂಗಳ ಸುರೇಶ್ ಅಂಗಡಿ - ಬೆಳಗಾವಿ
- ಶಿವಕುಮಾರ್ ಉದಾಸಿ - ಹಾವೇರಿ
- ದೇವೇಂದ್ರಪ್ಪ - ಬಳ್ಳಾರಿ
- ಜಿ ಎಂ ಸಿದ್ದೇಶ್ವರ್ - ದಾವಣಗೆರೆ
- ಕರಡಿ ಸಂಗಣ್ಣ - ಕೊಪ್ಪಳ
- ಎ ನಾರಾಯಣಸ್ವಾಮಿ - ಚಿತ್ರದುರ್ಗ
- ನಳೀನ್‍ಕುಮಾರ್ ಕಟೀಲ್ - ದಕ್ಷಿಣ ಕನ್ನಡ
- ಅನಂತಕುಮಾರ್ ಹೆಗಡೆ - ಉತ್ತರ ಕನ್ನಡ
- ಡಿ ವಿ ಸದಾನಂದಗೌಡ - ಬೆಂಗಳೂರು ಉತ್ತರ
- ಪ್ರತಾಪ್ ಸಿಂಹ - ಮೈಸೂರು
- ಮುನಿಸ್ವಾಮಿ - ಕೋಲಾರ
- ವಿ ಶ್ರೀನಿವಾಸ್ ಪ್ರಸಾದ್ - ಚಾಮರಾಜನಗರ
- ಬಿ ಎನ್ ಬಚ್ಚೇಗೌಡ - ಚಿಕ್ಕಬಳ್ಳಾಪುರ
- ಜಿ ಎಸ್ ಬಸವರಾಜ್ - ತುಮಕೂರು
ವಿಧಾನಸಭೆ ಚುನಾವಣೆಯಲ್ಲಿ ಸೋತವರಿಗೆ ಮಣೆ:ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿರುವ 7 ಮಂದಿಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಣೆ ಹಾಕಿದೆ. ಉತ್ತರಕನ್ನಡ ಕ್ಷೇತ್ರದಿಂದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ನೀಡಲಾಗಿದೆ. ಅದೇ ರೀತಿ ಬಳ್ಳಾರಿಯಿಂದ ಬಿ ಶ್ರೀರಾಮುಲು, ಬೆಳಗಾವಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಹಾವೇರಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಚಿತ್ರದುರ್ಗದಿಂದ ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಚಿಕ್ಕಬಳ್ಳಾಪುರದಿಂದ ಡಾ ಕೆ ಸುಧಾಕರ್ ಹಾಗೂ ತುಮಕೂರಿನಿಂದ ವಿ ಸೋಮಣ್ಣ ಚುನಾವಣೆ ಕಣಕ್ಕಿಳಿದಿದ್ದಾರೆ. ವಿಧಾನಸಭೆಯಲ್ಲಿ ಸೋತ ಸಿಂಪತಿ ವರ್ಕೌಟ್ ಆಗುವುದೇ? ಅಥವಾ ಮೋದಿ ಅಲೆಯಲ್ಲಿ ಗೆಲ್ಲಬಹುದೆಂಬ ವಿಶ್ವಾಸವೇ?. ಕಾದುನೋಡಬೇಕಿದೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಇಬ್ಬರು ಮಹಿಳೆಯರಿಗೆ ಟಿಕೆಟ್ ನೀಡಿರುವುದು ವಿಶೇಷ. ಬೆಂಗಳೂರು ಉತ್ತರ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ, ದಾವಣಗೆರೆ ಕ್ಷೇತ್ರದಿಂದ ಗಾಯತ್ರಿ ಸಿದ್ದೇಶ್ವರ್ ಸ್ಪರ್ಧಿಸುತ್ತಿದ್ದಾರೆ. ಉಡುಪಿ - ಚಿಕ್ಕಮಂಗಳೂರು ಪ್ರತಿನಿಧಿಸುತ್ತಿದ್ದ ಶೋಭಾ ಕರಂದ್ಲಾಜೆ ಅವರಿಗೆ ತೀವ್ರ ವಿರೋಧಿ ಅಲೆ ಇರುವುದರಿಂದ ಬೆಂಗಳೂರು ಉತ್ತರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇನ್ನು ದಾವಣಗೆರೆಯಿಂದ ಸಿದ್ದೇಶ್ವರ್ ಅವರಿಗೂ ಸಹ ವಿರೋಧಿ ಅಲೆ ಇದ್ದ ಕಾರಣ ತಮ್ಮ ಪತ್ನಿಗೆ ಟಿಕೆಟ್ ಕೊಡಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಇನ್ನು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹಲವು ಹೊಸ ಮುಖಗಳನ್ನು ಕಣಕ್ಕಿಳಿಸಿರುವುದು ವಿಶೇಷ ಎನಿಸಿದೆ. ಮೈಸೂರು - ಕೊಡುಗು ಲೋಕಸಭಾ ಕ್ಷೇತ್ರದಿಂದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್, ಚಾಮರಾಜನಗರದಿಂದ ಬಾಲರಾಜ್ ಸ್ಪರ್ಧೆ ಮಾಡಿದ್ದಾರೆ. ದಕ್ಷಿಣ ಕನ್ನಡದಿಂದ ನಿವೃತ್ತ ಸೇನಾಧಿಕಾರಿ ಬ್ರಿಜೇಶ್ ಚೌಟ, ಕೊಪ್ಪಳದಿಂದ ಬಸವರಾಜ್ ಕ್ಯಾವಟಗಿ ಸ್ಪರ್ಧಿಸಿದ್ದಾರೆ. ಇದುವರೆಗೂ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್ ಪ್ರವೇಶಿಸಿದ್ದ ಕೋಟಾ ಶ್ರೀನಿವಾಸ ಪೂಜಾರಿ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಮೊದಲ ಬಾರಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಈ ಬಾರಿಯ ಲೊಕಸಭೆ ಚುನಾವಣೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಬಿಜೆಪಿ ತಮ್ಮ ಹಿಂದಿನ ಸ್ಥಾನಗಳನ್ನು ಉಳಿಸಿಕೊಳ್ಳುವುದೇ ಅಥವಾ ಹೆಚ್ಚಿಸಿಕೊಳ್ಳುವುದೇ ಎಂಬುದು ಕುತೂಹಲದ ಸಂಗತಿ. ಎಲ್ಲವೂ ಚುನಾವಣಾ ಫಲಿತಾಂಶದಿಂದ ಹೊರಬೀಳಲಿದೆ.