ಬೆಳಗಾವಿ: ಇಲ್ಲಿನ ಕುವೆಂಪು ನಗರದಲ್ಲಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ್ ಜಾಧವ್ ನೇತೃತ್ವದಲ್ಲಿ ಕ್ಷೇತ್ರಕ್ಕೆ ಹೆಬ್ಬಾಳ್ಕರ್ ತಂದಿರುವ ಅನುದಾನದ ಲೆಕ್ಕ ಕೊಡುವಂತೆ ಮನವಿ ಸಲ್ಲಿಸಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅನುಪಸ್ಥಿತಿಯಲ್ಲಿ ಅವರ ಪುತ್ರ ಮೃಣಾಲ್ ಅವರಿಗೆ ಮನವಿ ಸ್ವೀಕರಿಸಿದರು. ಬಳಿಕ ಬಿಜೆಪಿ ಕಾರ್ಯಕರ್ತರನ್ನು ಚಹಾ ಸೇವಿಸಲು ಮೃಣಾಲ್ ಹೆಬ್ಬಾಳ್ಕರ್ ಆಹ್ವಾನಿಸಿದರು. ಅವರ ಆಹ್ವಾನವನ್ನು ನಿರಾಕರಿಸಿ ತೆರಳುವ ವೇಳೆ ಬಿಜೆಪಿ ಪರ ಘೋಷಣೆ ಕೂಗಿದರು. ಅತ್ತ ಜೈ ಶ್ರೀರಾಮ, ಜೈ ಬಿಜೆಪಿ ಎಂದು ಘೋಷಣೆ ಕೂಗಿದರು. ಬಿಜೆಪಿ ಕಾರ್ಯಕರ್ತರ ಘೋಷಣೆ ಬೆನ್ನಲ್ಲೇ ಇತ್ತ ಹೆಬ್ಬಾಳ್ಕರ್ ಬೆಂಬಲಿಗರಿಂದಲೂ ಅಭಿವೃದ್ಧಿ ಹರಿಕಾರಿಣಿ ಲಕ್ಷ್ಮಿ ಹೆಬ್ಬಾಳ್ಕರ್ ಎಂದು ಘೋಷಣೆ ಮೊಳಗಿತು. ಎರಡೂ ಕಡೆಯಿಂದ ಪರ-ವಿರೋಧ ಘೋಷಣೆಗಳು ಕೇಳಿ ಬಂದವು.
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಧನಂಜಯ ಜಾಧವ್, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಖರ್ಚು ವೆಚ್ಚದ ಸರಿಯಾದ ಲೆಕ್ಕ ಇಲ್ಲದೇ ಗ್ಯಾರಂಟಿ ಘೋಷಿಸಿದ್ದರಿಂದ ಸರ್ಕಾರ ದಿವಾಳಿ ಆಗುವ ಸ್ಥಿತಿಗೆ ಬಂದಿದೆ. ಚುನಾವಣೆಗೂ ಮುಂಚೆ ಕೆಲವೊಂದು ಗ್ರಾಮಗಳಿಗೆ ಒಂದೂವರೆ ಕೋಟಿ ರೂ. ಅನುದಾನ ನೀಡುತ್ತೇವೆ ಅಂತಾ ಆಶ್ವಾಸನೆ ಕೊಟ್ಟಿದ್ದರು. ಅಲ್ಲದೇ ಅನೇಕ ಹಳ್ಳಿಗಳಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯವೂ ಅರ್ಧಕ್ಕೆ ನಿಂತಿವೆ ಎಂದು ಆರೋಪಿಸಿದರು.
ಬಳಿಕ ಮನವಿ ಸ್ವೀಕರಿಸಿ ಮಾತನಾಡಿದ ಮೃಣಾಲ್, ಈಗಾಗಲೇ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೆರೆ ತುಂಬಿಸುವ ಯೋಜನೆಗೆ 800 ಕೋಟಿ ಅನುದಾನಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದಿದ್ದಾರೆ. ಕೆಲವೇ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಭೂಮಿ ಪೂಜೆ ಕೂಡ ನೆರವೇರಿಸಲಾಗುತ್ತದೆ. ಅಲ್ಲದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಂದಿತ್ತು. ಈ ವೇಳೆ ಎಷ್ಟು ಅಭಿವೃದ್ಧಿಯಾಗಿದೆ ಎಂಬುದಕ್ಕೆ ಜನರೇ ಸಾಕ್ಷಿ ಇದ್ದಾರೆ. ಇದೀಗ ನಮ್ಮದೇ ಸರ್ಕಾರ ಇರುವುದರಿಂದ ಹೆಚ್ಚಿನ ಅನುದಾನ ತಂದು ಮತ್ತಷ್ಟು ಅಭಿವೃದ್ಧಿ ಕೈಗೊಳ್ಳಲಾಗುವುದು. ಹಾಗಾಗಿ, ಎಷ್ಟು ಅನುದಾನ ಬಂದಿದೆ ಎಂಬ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗುವುದು. ಗ್ರಾಮೀಣ ಕ್ಷೇತ್ರದಲ್ಲಿ ನೆಲೆ ಕಳೆದುಕೊಂಡಿರುವ ಬಿಜೆಪಿಯವರು ಸುದ್ದಿಯಲ್ಲಿರಬೇಕೆಂದು ಈ ರೀತಿ ಮಾಡುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು.
ಇದನ್ನೂ ಓದಿ: ಅನುದಾನ ಲೆಕ್ಕ ಕೊಡಿ ಬಿಜೆಪಿ ಅಭಿಯಾನ: ಶಾಸಕ ಅಬ್ಬಯ್ಯ ಪ್ರಸಾದ್ ಟಾಂಗ್