ಶಿವಮೊಗ್ಗ: ಒಂದು ಕಾಲದಲ್ಲಿ ಸಮಾಜವಾದಿ ನೆಲೆಯಾಗಿದ್ದ ಶಿವಮೊಗ್ಗ ಜಿಲ್ಲೆ ಈಗ ಬಿಜೆಪಿ ಶಕ್ತಿ ಕೇಂದ್ರವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಲೆನಾಡಿನ ಜನ ಮತ್ತೆ ಬಿ.ವೈ.ರಾಘವೇಂದ್ರರನ್ನು ಗೆಲ್ಲಿಸಿದ್ದಾರೆ. ಎರಡು ದಶಕಗಳಿಂದ ಮಾಜಿ ಸಿಎಂಗಳ ಕುಟುಂಬಗಳ ಮಧ್ಯೆ ನಡೆಯುತ್ತಿರುವ ಚುನಾವಣಾ ಕದನದಲ್ಲಿ ಮತ್ತೆ ಬಿ.ಎಸ್.ಯಡಿಯೂರಪ್ಪ ಕುಟುಂಬ ಗೆದ್ದು ಬೀಗಿದೆ.
ಮಾಜಿ ಸಿಎಂ ಕುಟುಂಬಗಳ ಪ್ರತಿಷ್ಠೆಯ ಕದನ: ಶಿವಮೊಗ್ಗ ಲೋಕಸಭೆ ಚುನಾವಣೆ ಇಬ್ಬರು ಮಾಜಿ ಸಿಎಂ ಕುಟುಂಬಗಳ ನಡುವೆ ನಡೆಯುತ್ತಿರುವ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿದೆ. 2009ರಲ್ಲಿ ಎಸ್.ಬಂಗಾರಪ್ಪನವರೆದುರು ಸ್ಪರ್ಧಿಸಿದ್ದ ಬಿ.ವೈ.ರಾಘವೇಂದ್ರ ಸುಮಾರು 54 ಸಾವಿರ ಮತಗಳಿಂದ ಜಯ ಗಳಿಸಿದ್ದರು. ನಂತರ ಯಡಿಯೂರಪ್ಪನವರು ಕೆಜಿಪಿ ಕಟ್ಟಿ ಸೋತು ಪುನಃ ಬಿಜೆಪಿಗೆ ಬಂದು 2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದರು. ಈ ವೇಳೆ ಯಡಿಯೂರಪ್ಪನವರೆದುರು ಬಂಗಾರಪ್ಪನವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಜೆಡಿಎಸ್ನಿಂದ ಸ್ಪರ್ಧಿಸಿದ್ದರು. ಯಡಿಯೂರಪ್ಪ ಜಯಗಳಿಸಿದ್ದರು.
ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆಗೆ ಸ್ಪರ್ಧಿಸಿದ ಹಿನ್ನೆಲೆಯಲ್ಲಿ 2018ರಲ್ಲಿ ಉಪ ಚುನಾವಣೆ ನಡೆಯಿತು. ಆಗ ಮಧು ಬಂಗಾರಪ್ಪನವರೆದುರು ಬಿ.ವೈ.ರಾಘವೇಂದ್ರ ಗೆದ್ದರು. 2019ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಮಾಜಿ ಸಿಎಂಗಳ ಮಕ್ಕಳ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಆಗಲೂ ಕೂಡ ರಾಘವೇಂದ್ರ ಜಯಭೇರಿ ಬಾರಿಸಿದ್ದರು. ಈ ಸಲ ಗೀತಾ ಶಿವರಾಜ್ ಕುಮಾರ್ ಮತ್ತೆ ಸೋತಿದ್ದಾರೆ. ಈ ಮೂಲಕ ಉಪ ಚುನಾವಣೆ ಸೇರಿ ಕಳೆದ ಐದು ಚುನಾವಣೆಯಲ್ಲಿ ಬಂಗಾರಪ್ಪ ಕುಟುಂಬದೆದುರು ಯಡಿಯೂರಪ್ಪ ಕುಟುಂಬಕ್ಕೆ ಮತದಾರರು ಮಣೆ ಹಾಕಿದ್ದಾರೆ.
ಜಿಲ್ಲಾ ಸಚಿವ ಸೇರಿ ಮೂವರು ಕೈ ಶಾಸಕರಿದ್ದರೂ ದಕ್ಕದ ಜಯ: ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಜಿಲ್ಲೆಯಲ್ಲಿ ಮೂವರು ಶಾಸಕರನ್ನು ಹೊಂದಿದ್ದರೂ ಸಹ ಕೈ ಬಲಗೊಂಡಿಲ್ಲ. ಸೊರಬ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಮತ ಬಿದ್ದಿದೆ. ಜಿಲ್ಲೆಯ ಮತದಾರರರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮಣೆ ಹಾಕಿದ್ದಾರೆ. ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ಈಡಿಗ ಮತಗಳಲ್ಲಿ ಶೇ.40ರಷ್ಟು ಮತ ಬಿಜೆಪಿಗೆ ಹೋಗಿದೆ. ಜೊತೆಗೆ ಹಿಂದುತ್ವದ ಅಂಶವೂ ಸೇರಿದಂತೆ ಜಿಲ್ಲೆಯಲ್ಲಿ ನರೇಂದ್ರ ಮೋದಿ ಹಾಗೂ ಸಂಸದ ರಾಘವೇಂದ್ರರ ಅಭಿವೃದ್ಧಿಗೆ ಜನ ಮನ್ನಣೆ ನೀಡಿದಂತಿದೆ. ಇದರಿಂದ ರಾಘವೇಂದ್ರ 2,40,715 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರಬೇಕೆಂದು ಮತದಾದರರು ತೋರಿಸಿಕೊಟ್ಟಂತಿದೆ.
ಎಸ್.ಬಂಗಾರಪ್ಪರಿಂದ ಲಾಭ ಪಡೆದಿದ್ದ ಬಿಜೆಪಿ: ರಾಜ್ಯ ಕಂಡ ಅತ್ಯಂತ ವರ್ಣರಂಜಿತ ರಾಜಕಾರಣಿ ಎಸ್.ಬಂಗಾರಪ್ಪ ಅವರಿಂದ ಬಿಜೆಪಿ ಲಾಭ ಪಡೆದಿತ್ತು. ಬಂಗಾರಪ್ಪ ಬಿಜೆಪಿ ಬರುವ ಮುನ್ನ ಬಿಜೆಪಿಗೆ ಶೇ.55ರಷ್ಟು ಮತಗಳು ಬರುತ್ತಿದ್ದವು. ಬಂಗಾರಪ್ಪ ಬಿಜೆಪಿ ಪಕ್ಷವನ್ನು ಬಿಟ್ಟು ಹೋದರೆ ಹೊರತು ಮತಗಳನ್ನು ತೆಗೆದುಕೊಂಡು ಹೋಗಲಿಲ್ಲ. ಇದನ್ನು ಬಿಜೆಪಿ ಲಾಭವನ್ನಾಗಿಸಿಕೊಂಡು ಪಕ್ಷವನ್ನು ವಿಸ್ತರಣೆ ಮಾಡಿದೆ. ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿಯಾಗಿ ಬೇರೂರಿದೆ. ಯಡಿಯೂರಪ್ಪ, ಈಶ್ವರಪ್ಪ ಅವರಂತಹ ನಾಯಕರು ಬಿಜೆಪಿಯನ್ನು ಗಟ್ಟಿಗೊಳಿಸಿದರು. ಇದಕ್ಕೆ ಸರಿಯಾಗಿ ಸಂಘ ಪರಿವಾರ ಮಾರ್ಗದರ್ಶನ ನೀಡಿದೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಆಡಳಿತ ಬಲವನ್ನು ಜಿಲ್ಲೆಯಲ್ಲಿ ಪ್ರಯೋಗಿಸಿದರೂ ಸಹ ಜನ ಕಾಂಗ್ರೆಸ್ ಕೈ ಹಿಡಿದು ಮೇಲೆತ್ತಲಿಲ್ಲ. ಕಾಂಗ್ರೆಸ್ ಪಕ್ಷವು ಕರ್ನಾಟಕ ಹಾಗೂ ತೆಲಂಗಾಣದಲ್ಲಿ ನೀಡಿದ ಗ್ಯಾರಂಟಿಯನ್ನು ತನ್ನ ಲೋಕಸಭೆ ಚುನಾವಣೆಗೆಗೂ ಪ್ರಯೋಗ ಮಾಡಿದರು ಸಹ ಜನ ತಮಗೆ ಗ್ಯಾರಂಟಿ ಬೇಡ ದೇಶವನ್ನು ಮುನ್ನಡೆಸುವವರು ಬೇಕೆಂದು ಭಾಜಪಗೆ ಮತದಾರರ ಮತ ನೀಡಿದ್ದಾನೆ.
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಗ್ಯಾರಂಟಿಯನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿತ್ತು. ಅಲ್ಲದೆ ಮೋದಿ ಅವರು ದೇಶದಲ್ಲಿ ಕೋಮು ಭಾವನೆ ಕೆರಳಿಸುತ್ತಿದ್ದಾರೆ. ದೇಶದ ಸಾಲದ ಹೊರೆಯನ್ನು ಹೆಚ್ಚಿಸಿದ್ದಾರೆ. ನಮ್ಮ ರಾಜ್ಯಕ್ಕೆ ನೀಡಬೇಕಾದ ತೆರಿಗೆ ಪಾಲನ್ನು ನೀಡುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದರು. ಇನ್ನೂ ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾ ಸಚಿವರು ರಾಘವೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರೂ ಸಹ ಬಿಜೆಪಿ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ, ಮೋದಿ ಹಾಗೂ ಜಿಲ್ಲೆಯಲ್ಲಿ ಆದ ಅಭಿವೃದ್ಧಿಯ ಬಗ್ಗೆ ಮಾತ್ರ ಪ್ರಚಾರ ನಡೆಸಿದ್ದರು.
ನೀರಾವರಿ ಯೋಜನೆ, ರಸ್ತೆಗಳ ಅಭಿವೃದ್ಧಿ, ವಿಮಾನ ನಿಲ್ದಾಣ, ಹೆಚ್ಚು ರೈಲುಗಳ ಸಂಚಾರ, ರೈಲ್ವೆ ಮೇಲ್ಸೇತುವೆಗಳು, ಮನೆ ಮನೆಗೆ ಗಂಗೆ ಯೋಜನೆ, ಶರಾವತಿ ಹಿನ್ನೀರಿಗೆ ಸೇತುವೆ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ ಹೀಗೆ ಹಲವಾರು ಯೋಜನೆಗಳಿಗೆ ಶಿವಮೊಗ್ಗ ಜಿಲ್ಲೆಯ ಮತದಾರ ಮಣೆ ಹಾಕಿದ್ದಾರೆ. ಇನ್ನೂ ಉಡುಪಿಯ ಬೈಂದೂರು ಭಾಗದ ಜನ ಅಲ್ಲಿನ ಬಂದರುಗಳ ಅಭಿವೃದ್ಧಿ, ರಸ್ತೆ ನಿರ್ಮಾಣಕ್ಕೆ ಬಿಜೆಪಿಗೆ ಬೆಂಬಲ ನೀಡಿ ಗೆಲ್ಲಿಸಿದ್ದಾರೆ. ಈ ಮೂಲಕ ಮಲೆನಾಡ ಹೆಬ್ಬಾಗಿಲು ಮತ್ತೆ ಕೇಸರಿ ಪಕ್ಷಕ್ಕೆ ನೆಲೆಯನ್ನು ಮುಂದುವರೆಸಿದೆ ಎಂದು ಹೇಳಲಾಗುತ್ತಿದೆ.