ಆನೇಕಲ್ (ಬೆಂಗಳೂರು ನಗರ): ಕಳೆದ ಬಾರಿ ಲೋಕಸಭೆಯ 25 ಸ್ಥಾನಗಳನ್ನು ರಾಜ್ಯದಲ್ಲಿ ಗೆದ್ದಿದ್ದೆವು. ಅದರಲ್ಲಿಯೂ ಸುಮಲತಾರಿಗೆ ನಾವೇ ಬೆಂಬಲು ಕೊಟ್ಟಿದ್ದು, ಒಟ್ಟು 26 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದೆವು. ಬಿಜೆಪಿಯಲ್ಲಿ ಒಂದೇ ಒಂದು ದೃಷ್ಟಿ ಬೊಟ್ಟು ಡಿ ಕೆ ಸುರೇಶ್ ಗೆದ್ದಿದ್ದು ಈ ಬಾರಿ ಅದನ್ನು ಬಿಡದಂತೆ 27 ಸ್ಥಾನಗಳನ್ನು ಗೆದ್ದು ನರೇಂದ್ರ ಮೋದಿ ಸರ್ಕಾರವನ್ನು ಗಟ್ಟಿಗೊಳಿಸಲಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.
ಚೊಂಬು ಪ್ರದರ್ಶನ: ರಾಹುಲ್ ಗಾಂಧಿ, ಮನಮೋಹನ್ ಸಿಂಗ್, ಡಿ ಕೆ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ ಆರ್ ಅಶೋಕ್, ಸಿಎಂ ಸಿದ್ದರಾಮಯ್ಯ ಸರ್ಕಾರ ಬಂದರೆ ಬರಗಾಲ ಶನಿ ವಕ್ಕರಿಸಿದ ಹಾಗೆ. ಚೊಂಬುಗಳನ್ನು ಬಿಜೆಪಿಗೆ ಪ್ರದರ್ಶಿಸುತ್ತಿರುವ ಕಾಂಗ್ರೆಸ್ ಹತ್ತು ಚೊಂಬುಗಳನ್ನು ರಾಜ್ಯದ ಜನತೆಗೆ ನೀಡಿದೆ. ಅದರಲ್ಲಿ ರಾಹುಲ್ ಗಾಂಧಿಗೆ ಒಂದು ಚೊಂಬು ನೀಡಿ ವಿದೇಶದಲ್ಲಿ ಭಿಕ್ಷಾಟನೆಗೆ ಕಳುಹಿಸುತ್ತೇವೆ. ಲೋಕಸಭೆ ಚುನಾವಣೆ ಮುಗಿಯಲಿ ಎಂದು ಹರಿಹಾಯ್ದರು.
ಈ ಸಲ ಡಿ ಕೆ ಸುರೇಶ್ ದೇಶ ವಿಭಜನೆ ಬಗ್ಗೆ ಮಾತನಾಡಿ, ದೇಶಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಡಿ ಕೆ ಬ್ರದರ್ಸ್ ಮುಸ್ಲಿಂರನ್ನು ಭಾಯಿ ಭಾಯಿ ಎನ್ನುತ್ತಾರೆ. ಅವರೇನು ಅವರ ಸಂಬಂಧಿಗಳಾ? ಎಂದು ಪ್ರಶ್ನಿಸಿದ ಅಶೋಕ್, ಕಾಂಗ್ರೆಸ್ ಮುಸ್ಲಿಂ ಸಮುದಾಯ ಮತಗಳಿಗಾಗಿ ಅವರನ್ನು ಓಲೈಸುತ್ತಿದೆ ಎಂದು ಆರೋಪಿಸಿದರು.
ದಿನಕ್ಕೊಂದು ದ್ವಂದ್ವ ಹೇಳಿಕೆ ನೀಡುವ ಮೂಲಕ ಗೃಹಸಚಿವ, ಸಿಎಂ ಹಾಗೂ ಡಿಸಿಎಂ ಜನರಲ್ಲಿ ಗೊಂದಲಕ್ಕೆ ಕಾರಣರಾಗಿದ್ದಾರೆ. ಇದೊಂದು ತಾಲಿಬಾನ್ ಸರ್ಕಾರ, ನಕ್ಸ್ಲೈಟ್, ಭಯೋತ್ಪಾದನೆಗಳಿಗೆ ಎಡೆಮಾಡಿಕೊಟ್ಟಿದೆ. ರಾಜ್ಯದ ಜನತೆಗೆ ರೈತ ಸಮ್ಮಾನ್ ಯೋಜನೆಯಡಿ ಬಿಜೆಪಿ 4000 ರೂ. ನೀಡಿತ್ತು. ಅದಕ್ಕೂ ಕಾಂಗ್ರೆಸ್ ತೊಡರುಗಾಲು ಹಾಕಿದೆ ಎಂದು ಆರೋಪಿಸಿದರು.
ಹಾಲಿಗೆ ಪ್ರೋತ್ಸಾಹಧನವಾಗಿ 4-5 ರೂ. ನೀಡಿದ್ದನ್ನು ಕಾಂಗ್ರೆಸ್ 6-7 ತಿಂಗಳಿಂದ ಸಬ್ಸಿಡಿ ನಿಲ್ಲಿಸಿದೆ. ಇಂಡಿಯಾ ಒಕ್ಕೂಟದ ಪಕ್ಷವನ್ನು ಮೆಚ್ಚಿಸಲು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ ಎಂದು ಕರ್ನಾಟಕಕ್ಕೆ ಖಾಲಿ ಚೊಂಬು ನೀಡಿದೆ. ವಿದ್ಯುತ್ ಬಿಲ್ ಬಿಜೆಪಿ ಸರ್ಕಾರದ ಅವಧಿಯಲ್ಲಿ 4.30 ಪೈಸೆ ಇತ್ತು. ಇದೀಗ 7-8 ರೂ. ಕಾಂಗ್ರೆಸ್ ಏರಿಸಿದೆ. ಹಾಲು ಮೊಸರು 3 ರೂ ಹೆಚ್ಚಿಸಿದೆ. ಮದ್ಯಪ್ರಿಯರ ಮದ್ಯಕ್ಕೂ 50 ರೂ. ಹೆಚ್ಚಿಸಿದೆ. ಹೀಗೆ ಹತ್ತು ಹಲವು ಚೊಂಬು ಕೊಟ್ಟ ದರಿದ್ರ ಸರ್ಕಾರ ಈ ಕಾಂಗ್ರೆಸ್ ಎಂದು ಪ್ರತಿಪಕ್ಷ ನಾಯಕ ಆಕ್ರೋಶ ಹೊರಹಾಕಿದರು.
ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ ಸಿ ಎನ್ ಮಂಜುನಾಥ್, ಸಚಿವ ಎ ನಾರಾಯಣಸ್ಲಾಮಿ, ಜನಾರ್ದನ ರೆಡ್ಡಿ, ಎಂಎಲ್ಸಿ ಗೋಪಿನಾಥ್ ರೆಡ್ಡಿ ಹಾಜರಿದ್ದರು.
ಇದನ್ನೂಓದಿ:ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 18ರಿಂದ 20 ಸ್ಥಾನ ಗೆಲ್ಲಲಿದೆ: ಸಂತೋಷ್ ಲಾಡ್ - Santosh Lad