ಬೆಂಗಳೂರು: ಫೆಬ್ರವರಿ 27ರಂದು ನಡೆಯುವ ರಾಜ್ಯಸಭಾ ಚುನಾವಣೆ ಹಾಗೂ ಜೂನ್ನಲ್ಲಿ ನಡೆಯಲಿರುವ ವಿಧಾನ ಪರಿಷತ್ನ ನಾಲ್ಕು ಸ್ಥಾನಗಳ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತುಕತೆ ನಡೆಸಿದ್ದಾರೆ. ಅಭ್ಯರ್ಥಿಗಳ ವಿಚಾರದಲ್ಲಿ ಅಮಿತ್ ಶಾ ಜೊತೆಗಿನ ಮಾತುಕತೆ ಬಳಿಕ ಹೆಸರುಗಳನ್ನು ಪ್ರಕಟಿಸಲಾಗುತ್ತದೆ. ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದ್ದು, ಇನ್ನೆರಡು ದಿನದಲ್ಲಿ ಹೆಸರು ಘೋಷಿಸಲಾಗುತ್ತದೆ ಎಂದು ತಿಳಿದುಬಂದಿದೆ.
ದೆಹಲಿಯಲ್ಲಿ ಇಂದು ನಡ್ಡಾರನ್ನು ಭೇಟಿ ಮಾಡಿದ ವಿಜಯೇಂದ್ರ, ರಾಜ್ಯದಲ್ಲಿ ಪಕ್ಷದ ಸಂಘಟನಾ ಚಟುವಟಿಕೆಗಳು ಹಾಗೂ ಚುನಾವಣಾ ಸಿದ್ಧತೆ ಕುರಿತು ಮಾಹಿತಿ ನೀಡಿ ಚರ್ಚಿಸಿದರು. ಅಭ್ಯರ್ಥಿಗಳ ಆಯ್ಕೆ ಕುರಿತು ಇತ್ತೀಚೆಗೆ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಕೈಗೊಂಡ ನಿರ್ಧಾರದ ಕುರಿತು ನಡ್ಡಾಗೆ ತಿಳಿಸಿದ ವಿಜಯೇಂದ್ರ, ರಾಜ್ಯಸಭಾ ಚುನಾವಣೆಗೆ ರಾಜೀವ್ ಚಂದ್ರಶೇಖರ್ ಅವರಿಗೇ ಮತ್ತೊಮ್ಮೆ ಟಿಕೆಟ್ ನೀಡುವುದಾದಲ್ಲಿ ಈ ಬಗ್ಗೆ ಚರ್ಚೆ ನಡೆಸುವುದಿಲ್ಲ. ಆದರೆ, ಬೇರೆಯವರಿಗೆ ಅವಕಾಶ ನೀಡುವುದಾದರೆ ಮಾತ್ರ ಹೆಸರುಗಳ ಶಿಫಾರಸು ಪರಿಗಣಿಸಿ ಎನ್ನುವ ನಿರ್ಣಯದೊಂದಿಗೆ ಮೂರ್ನಾಲ್ಕು ಹೆಸರುಗಳನ್ನು ಶಿಫಾರಸು ಮಾಡಲಾಗಿದ್ದ ಕೋರ್ ಕಮಿಟಿ ಪತ್ರವನ್ನು ನಡ್ಡಾಗೆ ನೀಡಿದರು.
ರಾಜೀವ್ ಚಂದ್ರಶೇಖರ್ ಅವರ ಬದಲಿಗೆ ಬೇರೆಯವರಿಗೆ ಅವಕಾಶ ನೀಡುವುದಾದಲ್ಲಿ ಅಥವಾ ಎರಡನೇ ಅಭ್ಯರ್ಥಿ ಕಣಕ್ಕಿಳಿಸುವ ನಿರ್ಣಯ ಮಾಡಿದರೆ ರಾಜ್ಯ ಕೋರ್ ಕಮಿಟಿ ಶಿಫಾರಸಿನ ಹೆಸರು ಪರಿಗಣಿಸುವಂತೆ ಕೈಗೊಂಡ ನಿರ್ಣಯವನ್ನು ನಡ್ಡಾ ಗಮನಕ್ಕೆ ತಂದು ಕೆಲಕಾಲ ಮಾತುಕತೆ ನಡೆಸಿದರು. ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಈಗ ಮೊದಲು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಹೆಸರು ಪ್ರಕಟವಾಗಲಿದೆ. ಕೆಲ ದಿನಗಳ ನಂತರ ನಾಲ್ಕು ಪರಿಷತ್ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನುವ ಭರವಸೆಯನ್ನು ನಡ್ಡಾ ವಿಜಯೇಂದ್ರಗೆ ನೀಡಿದ್ದಾರೆ ಎಂದು ಪಕ್ಷದ ಆಪ್ತ ಮೂಲಗಳು ತಿಳಿಸಿವೆ.
ವಿಜಯೇಂದ್ರ, ಜೋಶಿ, ಯತ್ನಾಳ್ ಭೇಟಿ: ನಡ್ಡಾ ಭೇಟಿ ನಂತರ ಸಂಸತ್ ಭವನದಲ್ಲಿ ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ವಿಜಯೇಂದ್ರ ಭೇಟಿಯಾದರು. ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳ ಕುರಿತು ಚರ್ಚಿಸಿ, ಮಾಹಿತಿ ನೀಡಿದರು. ಈ ವೇಳೆ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಸಂಸದರಾದ ಪಿ.ಸಿ.ಗದ್ದಿಗೌಡರ್ ಹಾಗೂ ಪಿ.ಸಿ.ಮೋಹನ್ ಕೂಡ ಉಪಸ್ಥಿತರಿದ್ದರು.
ಎಣ್ಣೆ- ಸೀಗೇಕಾಯಿಯಂತೆ ಇರುವ ಯತ್ನಾಳ್ ಹಾಗೂ ವಿಜಯೇಂದ್ರ ಒಂದೇ ಕಡೆ ಸೇರಿದ್ದು ಅಚ್ಚರಿಗೆ ಕಾರಣವಾಗಿದೆ. ವಿಜಯೇಂದ್ರ ಮೇಲಿನ ಮುನಿಸಿನಿಂದ ಪಕ್ಷದ ಶಾಸಕಾಂಗ ಸಭೆಯಿಂದಲೂ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದ ಯತ್ನಾಳ್, ರಾಜ್ಯದಲ್ಲಿಯೂ ಪಕ್ಷದ ಸಭೆಗಳಿಂದ ದೂರ ಉಳಿದಿದ್ದರು. ಆದರೆ ದೆಹಲಿಯ ಜೋಶಿ ನಿವಾಸದಲ್ಲಿ ಒಟ್ಟಿಗೆ ಸೇರಿದ್ದು, ಲೋಕಸಭಾ ಚುನಾವಣಾ ದೃಷ್ಟಿಯಿಂದ ಪಕ್ಷಕ್ಕೆ ಸಕಾರಾತ್ಮಕ ಬೆಳವಣಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಿಜಯೇಂದ್ರಗೆ ನಡ್ಡಾ ಮೆಚ್ಚುಗೆ: ಹೈಕಮಾಂಡ್ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ''ರಾಜ್ಯಸಭಾ ಚುನಾವಣೆ ನಾಮಪತ್ರ ಸಲ್ಲಿಕೆಗೆ ಫೆಬ್ರವರಿ 15 ಕಡೆಯ ದಿನವಾಗಿರುವುದರಿಂದ ಆದಷ್ಟು ಬೇಗ ಅಭ್ಯರ್ಥಿ ಆಯ್ಕೆ ಮಾಡುವ ಕುರಿತು ಮಾತುಕತೆ ನಡೆಲಾಯಿತು. ವಿಧಾನ ಪರಿಷತ್ ಚುನಾವಣೆಗೂ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಲಾಯಿತು. ಅಭ್ಯರ್ಥಿಗಳ ಬಗ್ಗೆ ನಿರ್ಧರಿಸಲಾಗುತ್ತದೆ, ಚುನಾವಣಾ ಸಿದ್ಧತೆ ಕಡೆ ಗಮನ ಹರಿಸಲು ಸಲಹೆ ನೀಡಿದ್ದಾರೆ. ರಾಜ್ಯಾಧ್ಯಕ್ಷನಾಗಿ ನಾನು ಎಲ್ಲರನ್ನು ಜೊತೆ ಸೇರಿಸಿಕೊಂಡು ಪಕ್ಷ ಮುನ್ನಡೆಸುತ್ತಿರುವ ಕುರಿತು ನಡ್ಡಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸ ದಾಖಲೆ ಬರೆಯಲಿದೆ. ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ನಾನು ಭರವಸೆ ನೀಡಿದ್ದೇನೆ'' ಎಂದರು.
ಮಾಜಿ ಸಚಿವ ಸೋಮಣ್ಣಗೆ ರಾಜ್ಯಸಭೆ ಟಿಕೆಟ್ ನೀಡುವ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ''ಸೋಮಣ್ಣ ರಾಜ್ಯಸಭಾ ಟಿಕೆಟ್ ಕೇಳಿರುವುದು, ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸುವ ಅಪೇಕ್ಷೆ ಹೊಂದಿರುವುದು ಸೇರಿದಂತೆ ಎಲ್ಲವೂ ಚರ್ಚೆಯಾಗಿದೆ. ಈ ಬಗ್ಗೆ ನಮ್ಮ ವರಿಷ್ಠರು ತೀರ್ಮಾನಿಸುತ್ತಾರೆ. ನಾಡಿದ್ದು ಅಮಿತ್ ಶಾ ಮೈಸೂರಿಗೆ ಬಂದಾಗ ಎಲ್ಲವೂ ಮತ್ತೊಮ್ಮೆ ಚರ್ಚೆಯಾಗಲಿದೆ. ಬಹುತೇಕ ಅಂದೇ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಹೆಸರು ಪ್ರಕಟಿಸಲಾಗುತ್ತದೆ'' ಎಂದು ತಿಳಿಸಿದರು.
''ಪ್ರಹ್ಲಾದ್ ಜೋಶಿಯವರನ್ನು ಭೇಟಿ ಮಾಡುವ ವೇಳೆ ಅನಿರೀಕ್ಷಿತವಾಗಿ ನಮ್ಮ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಅವರು ಸಿಕ್ಕಿದ್ದರು. ಅವರ ಜೊತೆ ಕುಳಿತು ಚರ್ಚಿಸಿದ್ದೇವೆ. ಅದಕ್ಕೆ ಬಹಳ ವಿಶೇಷತೆ ಅಥವಾ ಬೇರೆ ಅರ್ಥ ಕೊಡುವ ಅಗತ್ಯವಿಲ್ಲ'' ಎಂದು ಈ ಕುರಿತ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದರು.
ಮೈಸೂರಿಗೆ ಅಮಿತ್ ಶಾ: ''ಅಮಿತ್ ಶಾ ರಾಜ್ಯ ಪ್ರವಾಸದಲ್ಲಿ ಬದಲಾವಣೆಯಾಗಿದೆ. ಅವರು ಬೆಂಗಳೂರಿಗೆ ಬಾರದೆ ನೇರವಾಗಿ ಮೈಸೂರಿಗೆ ತೆರಳಲಿದ್ದಾರೆ. ಶನಿವಾರ ರಾತ್ರಿ ತಲುಪಲಿರುವ ಶಾ ಅಲ್ಲಿ ವಾಸ್ತವ್ಯ ಹೂಡಿ, ಫೆ.11ರಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ನಂತರ ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆಯಲ್ಲೇ ಪಕ್ಷದ ನಾಯಕರ ಜೊತೆ ಮಹತ್ವದ ಸಭೆ ನಡೆಯಲಿದೆ. ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹಾಗೂ ಲೋಕಸಭಾ ಚುನಾವಣಾ ಸಿದ್ಧತೆ ಮತ್ತು ಕಾರ್ಯತಂತ್ರದ ಕುರಿತು ಚರ್ಚಿಸಲಾಗುತ್ತದೆ'' ಎಂದರು.
ಸುಧಾಕರ್ ಅಪೇಕ್ಷೆ ತಪ್ಪಲ್ಲ: ''ರಿಸ್ಕ್ ತೆಗೆದುಕೊಂಡು ಬಿಜೆಪಿಗೆ ಬಂದಿರುವುದಾಗಿ ಡಾ.ಸುಧಾಕರ್ ಅವರ ಹೇಳಿಕೆ ಕುರಿತು ಕೇಳಿದಾಗ, ಸುಧಾಕರ್ ಅವರ ಕ್ಷೇತ್ರದಲ್ಲಿ ಬಿಜೆಪಿ ಅಸ್ತಿತ್ವವೇ ಇರದ ಕ್ಷೇತ್ರ. ಅಲ್ಲಿ ರಾಜೀನಾಮೆ ಕೊಟ್ಟು ಬಿಜೆಪಿ ಬೆಂಬಲಿಸುವುದು ಎಂದರೆ ಅದು ಹುಡುಗಾಟಿಕೆಯ ಮಾತಲ್ಲ. ಅದನ್ನು ಯಶಸ್ವಿಯಾಗಿ ಮಾಡಿದ್ದಾರೆ. ಚುನಾವಣೆಯಲ್ಲಿ ಆಗ ಗೆದ್ದಿದ್ದರು. ಆದರೆ, ಕಳೆದ ಬಾರಿ ಅವರಿಗೆ ಹಿನ್ನಡೆ ಆಗಿದೆ, ಸೋತಿದ್ದಾರೆ. ಅವರು ಅಪೇಕ್ಷೆ ಪಡುವುದು ತಪ್ಪಲ್ಲ. ಬಿಜೆಪಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಕಾರ್ಯಕರ್ತರ ಅಭಿಪ್ರಾಯ ಪಡೆದು, ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಅವರಿಗೆ ಕೊಡಬೇಕು ಅಥವಾ ಕೊಡಬಾರದು ಎಂದು ನಾನು ಹೇಳಿಲ್ಲ'' ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ವಿಧಾನಸೌಧದ ಪ್ರತಿ ಕಲ್ಲುಗಳೂ ಕಾಂಗ್ರೆಸ್ ಭ್ರಷ್ಟಾಚಾರದ ಕಥೆ ಹೇಳುತ್ತಿವೆ: ಬೊಮ್ಮಾಯಿ