ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ದಿಢೀರ್ ವಿಧಾನಸೌಧ ಮುತ್ತಿಗೆ ಹಾಕಿದ ಬಿಜೆಪಿ ನಾಯಕರು, ವಿಧಾನಸೌಧದ ದ್ವಾರಕ್ಕೆ ಬೀಗ ಜಡಿಯಲು ಮುಂದಾಗಿದ್ದರಿಂದ ಹೈಡ್ರಾಮಾ ನಡೆಯಿತು. ಕೂಡಲೇ ಎಲ್ಲ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಪರಿಸ್ಥಿತಿ ನಿಯಂತ್ರಿಸಿದರು.
ಮುಡಾ ಹಗರಣ ಆರೋಪ ಪ್ರಕರಣದಲ್ಲಿ ತನಿಖೆಗೆ ಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. ನಂತರ ದಿಢೀರ್ ವಿಧಾನಸೌಧ ಮುತ್ತಿಗೆ ನಿರ್ಧಾರ ಪ್ರಕಟಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರತಿಭಟನಾನಿರತ ಎಲ್ಲ ಶಾಸಕರು, ಸಂಸದರು ಮುಖಂಡರ ಜೊತೆ ಪಾದಯಾತ್ರೆ ಮೂಲಕ ಕೆಂಗಲ್ ಗೇಟ್ ದ್ವಾರದತ್ತ ತೆರಳಿದರು.
ವಿಧಾನಸೌಧ ಮುತ್ತಿಗೆ ಹಾಕಲು ಮುಂದಾಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಎಲ್ಲ ನಾಯಕರನ್ನು ತಡೆದು, ಬೀಗ ಜಡಿದು ಪ್ರತಿಭಟಿಸಲು ಅವಕಾಶ ನಿರಾಕರಿಸಿದರು. ಈ ವೇಳೆ ಮಾತಿನ ಚಕಮಕಿ ನಡೆಯುತ್ತಿದ್ದಾಗ ನುಸುಳಿಕೊಂಡು ಓಡಿದ ಶಾಸಕ ಅರವಿಂದ ಬೆಲ್ಲದ್ ದ್ವಾರಕ್ಕೆ ಬೀಗ ಜಡಿಯುವ ಪ್ರಯತ್ನ ನಡೆಸಿದರು. ಆದರೆ ಇದರ ಸುಳಿವು ಅರಿತ ಪೊಲೀಸರು ಗೇಟ್ ಮುಚ್ಚಿ ಶಾಸಕರ ಪ್ರಯತ್ನ ವಿಫಲಗೊಳಿಸಿದರು. ನಂತರ, ಪ್ರತಿಪಕ್ಷ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಪ್ರತಿಭಟನಾನಿರತ ಎಲ್ಲ ಶಾಸಕರು, ಸಂಸದರು, ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಬಸ್ಸಿನಲ್ಲಿ ಕೂರಿಸಿಕೊಂಡು ವಿಧಾನಸೌಧದಿಂದ ಹೊರಗಡೆ ಕರೆದೊಯ್ದರು.
ಇದಕ್ಕೂ ಮುನ್ನ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕರು, ಸಂಸದರು ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ಆರ್ ಅಶೋಕ್, ಸಿದ್ದರಾಮಯ್ಯಗೆ ಬೇರೆ ಆಯ್ಕೆಯೇ ಉಳಿದಿಲ್ಲ, ಕೋರ್ಟ್ ಎಫ್ಐಆರ್ ದಾಖಲಿಸಲು ಸೂಚಿಸಿದೆ. ಇನ್ನು ಯಾವುದಕ್ಕೆ ಕಾಯುತ್ತಿದ್ದೀರಾ? ಯಡಿಯೂರಪ್ಪ ಮುಖ್ಯಮಂತ್ರಿ ಆದ ವೇಳೆ ಆರೋಪ ಬಂದಾಗ ರಾಜೀನಾಮೆ ನೀಡಿ ಎಂದಿದ್ದಿರಿ. ಈಗ ನೀವು ಅದನ್ನು ಪಾಲಿಸಬೇಕಲ್ಲವೇ? ಈಶ್ವರಪ್ಪ ವಿರುದ್ಧ ಆರೋಪ ಬಂದಾಗ ರಾಜೀನಾಮೆ ಕೊಡುವವರೆಗೂ ವಿಧಾನಸೌಧದಲ್ಲಿ ಕುಸ್ತಿ ಮಾಡಿದಿರಿ. ಈಗ ಯಾಕೆ ಮೌನವಾಗಿದ್ದೀರಿ? ಮೋದಿ ಬಗ್ಗೆಯೂ ದೊಡ್ಡದಾಗಿ ಕಮೆಂಟ್ ಮಾಡಿದ್ದೀರಿ, ಮೋದಿ ನಿಮಗೆ ಸೈಟ್ ತೆಗೆದುಕೊಳ್ಳಲು ಹೇಳಿದ್ದರಾ? ದೇಶಾದ್ಯಂತ ಚರ್ಚೆಗೆ ಬಂದಿದೆ. ಹಾಗಾಗಿ ಮೋದಿ ಇದನ್ನ ಉಲ್ಲೇಖಿಸಿದ್ದಾರೆ. ನ್ಯಾ.ಸಂತೋಷ್ ಹೆಗ್ಡೆ, ಹಿರಿಯ ವಕೀಲ ಬಿವಿ ಆಚಾರ್ಯ, ಮಾಜಿ ಸ್ಪೀಕರ್ ಕೆಬಿ ಕೋಳಿವಾಡ ಕೂಡ ರಾಜೀನಾಮೆ ಸೂಕ್ತ ಎಂದಿದ್ದಾರೆ. ಈಗ ಸಿಎಂ ಸ್ಥಾನಕ್ಕೆ ಟವಲ್ ಹಾಕಿಕೊಂಡು ಏಳು ಜನ ಕುಳಿತಿದ್ದಾರೆ. ಅವರು ಹೇಳುವ ಮೊದಲೇ ರಾಜೀನಾಮೆ ನೀಡಿ. ಇಲ್ಲದೇ ಇದ್ದರೆ ಅವರೇ ದಂಗೆ ಎದ್ದು ನಿಮ್ಮನ್ನು ಇಳಿಸಲಿದ್ದಾರೆ ಎಂದು ಲೇವಡಿ ಮಾಡಿದರು.

ಕರ್ನಾಟಕ ಬಿಜೆಪಿಯಲ್ಲಿ ಒಬ್ಬರೇ ಒಬ್ಬರು ಭ್ರಷ್ಟಾಚಾರ ಆರೋಪವಿಲ್ಲದ ನಾಯಕರನ್ನು ತೋರಿಸಿ ಎಂದು ಸಿಎಂ ಸವಾಲಾಕಿದ್ದಾರೆ. ಇಡೀ ಕಾಂಗ್ರೆಸ್ನಲ್ಲಿ ಒಬ್ಬ ಸ್ವಚ್ಛ ರಾಜಕಾರಣಿ ಇದ್ದರೆ ತೋರಿಸಿ ಎಂದು ನಾನು ಮರುಸವಾಲು ಹಾಕುತ್ತಿದ್ದೇನೆ ಎಂದರು.
ಇದನ್ನೂ ಓದಿ: ಹರಿಯಾಣದಲ್ಲಿ ಸದ್ದು ಮಾಡಿದ ಮುಡಾ ಪ್ರಕರಣ: ಕಾಂಗ್ರೆಸ್ ವಿರುದ್ಧ ಪಿಎಂ ಮೋದಿ ವಾಗ್ದಾಳಿ - PM Modi Attack On Siddaramaiah
ಈ ಭ್ರಷ್ಟಾಚಾರ ಆರೋಪ ಪ್ರಕರಣ ತನಿಖೆಗೆ ಕೊಡದೆ ದೇಶದಲ್ಲಿ ಇನ್ನು ಯಾವ ರೀತಿಯ ಪ್ರಕರಣದ ತನಿಖೆಗೆ ಕೊಡಲು ಸಾಧ್ಯ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ದೇಶದ ದೊಡ್ಡ ವಕೀಲ, ಕಾಂಗ್ರೆಸ್ನ ಆಪದ್ಬಾಂಧವ ಸಿಂಗ್ವಿ ಅವರೇ ವಾದ ಮಾಡಿದರೂ ತನಿಖೆಗೆ ಆದೇಶವಾಗಿದೆ. ಹಾಗಾಗಿ ಮತ್ತೆ ಎಲ್ಲಿಗೆ ಹೋಗುತ್ತೀರಿ, ಅಲ್ಲಿಯೂ ಇವರೇ ವಾದ ಮಾಡಬೇಕಲ್ಲವೇ? ಎಂದು ಪ್ರಶ್ನಿಸಿದರು.

ಮಾತೆತ್ತಿದರೆ ನನ್ನೊಂದಿಗೆ 136 ಶಾಸಕರಿದ್ದಾರೆ. ರಾಜ್ಯದ ಜನ ನನ್ನೊಂದಿಗಿದ್ದಾರೆ ಎನ್ನುತ್ತಿದ್ದೀರಲ್ಲ, ರಾಮಕೃಷ್ಣ ಹೆಗಡೆ ರೀತಿ ಸರ್ಕಾರ ವಿಸರ್ಜಿಸಿ ಜನರ ಮುಂದೆ ಹೋಗಿ. ಆಗ ನಾವು ಪ್ರತಿಭಟನೆ ಮಾಡಲ್ಲ. ಆದರೆ ನೀವು ಬೆಂಬಲ ಕೋರಲು ಹೋದರೆ ನಿಮ್ಮ ಜೊತೆ ಯಾರೂ ಬರಲ್ಲ, ಜಮೀರ್ ಕೂಡ ಬರಲ್ಲ, ನಿಮ್ಮ ಹಿಂದೆ ಇರುವ ಶಾಸಕರೆಲ್ಲಾ ಖಾಲಿಯಾಗಿರುತ್ತಾರೆ ಎಂದು ವ್ಯಂಗ್ಯವಾಡಿದರು.
ಪರಿಷತ್ ಸದಸ್ಯ ಸಿ ಟಿ ರವಿ ಮಾತನಾಡಿ, ಜಮೀರ್ ರೀತಿಯ ಹೊಗಳಭಟರ ಮಾತು ಕೇಳಬೇಡಿ. ನ್ಯಾ. ಸಂತೋಷ್ ಹೆಗ್ಡೆ ಅವರಂತಹ ವ್ಯಕ್ತಿಗಳ ಮಾತು ಕೇಳಿ, ನೀವು ಗಟ್ಟಿಯಾಗಿರುವವರೆಗೂ ನಿಮ್ಮನ್ನು ಹಿಡಿದುಕೊಳ್ಳುವ ಜಮೀರ್ ಮುಂದೆ ಯಾರು ಗಟ್ಟಿಯಾಗುತ್ತಾರೋ ಅವರನ್ನು ಹಿಡಿದುಕೊಳ್ಳುತ್ತಾರೆ ಅಷ್ಟೇ. ನಿಮ್ಮಲ್ಲಿ 136 ಸೀಟ್ ಇದೆ, ನಿಮ್ಮಲ್ಲೇ ಯಾರೋ ಸಿಎಂ ಆಗಬಹುದು, ನಿರ್ದೋಷಿಯಾಗಿ ನೀವೇ ಮತ್ತೆ ಸಿಎಂ ಆಗಬಹುದು. ನಾವು ಯಾರೂ ಟವಲ್, ಕರ್ಚೀಫ್ ಇರಲಿ, ವೇಸ್ಟ್ ಪೇಪರ್ ಕೂಡ ಹಾಕಿಲ್ಲ. ಹಾಗಾಗಿ ನಮ್ಮ ಬಗ್ಗೆ ನಿಮಗೆ ಆತಂಕ ಬೇಡ. ಕೂಡಲೇ ರಾಜೀನಾಮೆ ನೀಡಿ, ಜನ ಬೀದಿಗಿಳಿಯುವ ಮೊದಲೇ ರಾಜೀನಾಮೆ ನೀಡಿ, ನಿಮ್ಮ ರಾಜೀನಾಮೆವರೆಗೂ ನಮ್ಮ ಹೋರಾಟ ನಿರಂತರ ಎಂದರು.
ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ತುಂಬಾ ದುರ್ಬಲವಾಗಿದೆ. ಎಲ್ಲಾ ಲೋಕಮಾಂಡ್ ಆಗಿದೆ, ಹೈಕೋರ್ಟ್ ತೀರ್ಪು ಬಂದಾಗಲೇ ಎಐಸಿಸಿ ಅಧ್ಯಕ್ಷ ಖರ್ಗೆ ಮಲ್ಲಿಕಾರ್ಜುನ ಅವರು ಸಿದ್ದರಾಮಯ್ಯ ರಾಜೀನಾಮೆಗೆ ಸೂಚಿಸಬೇಕಿತ್ತು. ಆದರೆ ಆ ಶಕ್ತಿ ಅವರಲ್ಲಿಲ್ಲ, ಕಾಂಗ್ರೆಸ್ಗೆ ಕರ್ನಾಟಕ ಎಟಿಎಂ ಆಗಿತ್ತು. ಅದನ್ನು ಸಿದ್ದರಾಮಯ್ಯ ಸಮರ್ಥವಾಗಿ ನಿಭಾಯಿಸಿದರು. ಕರ್ನಾಟಕವನ್ನು ಎಟಿಎಂ ಮಾಡಲು ಹೋಗಿ ನಿಮ್ಮ ವ್ಯಕ್ತಿತ್ವ ಹಾಳು ಮಾಡಿಕೊಂಡಿದ್ದೀರಿ. ರಾಜ್ಯಕ್ಕೆ ಕೆಟ್ಟ ಹೆಸರು ತರದೆ ಕೂಡಲೇ ರಾಜೀನಾಮೆ ನೀಡಿ ಎಂದು ಒತ್ತಾಯಿಸಿದರು.

ಅನಾರೋಗ್ಯದಿಂದ ವಿಜಯೇಂದ್ರ ಗೈರು: ಇಂದಿನ ಹೋರಾಟಕ್ಕೆ ವಿಜಯೇಂದ್ರ ಗೈರಾಗಿದ್ದಾರೆ, ಅನಾರೋಗ್ಯದ ಕಾರಣದಿಂದ ಬಂದಿಲ್ಲ. ಮುಂದಿನ ಹೋರಾಟದಲ್ಲಿ ಇರಲಿದ್ದಾರೆ ಎಂದು ಅಶೋಕ್ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಕರ್ನಾಟಕ ಬಿಜೆಪಿಯಲ್ಲಿ ಭ್ರಷ್ಟಾಚಾರ ಕಳಂಕವಿಲ್ಲದ ಒಬ್ಬ ನಾಯಕನ ತೋರಿಸಿ: ಮೋದಿಗೆ ಸಿದ್ದರಾಮಯ್ಯ ಸವಾಲು - CM Siddaramaiah