ಬೆಂಗಳೂರು: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಅರ್ಧ ಶತಮಾನ ಕಳೆಯುತ್ತಿರುವ ಹಿನ್ನೆಲೆಯಲ್ಲಿ ನಗರದ ಫ್ರೀಡಂ ಪಾರ್ಕ್‌ನಲ್ಲಿರುವ ಹಳೆ ಸೆಂಟ್ರಲ್ ಜೈಲಿನ ಬ್ಯಾರಕ್‌ನ ಕಂಬಿಗಳ ಹಿಂದೆ ನಿಂತು ಬಿಜೆಪಿ ನಾಯಕರು ಇಂದು ಪ್ರತಿಭಟನೆ ನಡೆಸಿದ್ದಾರೆ. ಅಂದಿನ ಜೈಲುವಾಸವನ್ನು ಅದೇ ಜಾಗದಲ್ಲಿ ನಿಂತು ಮೆಲುಕು ಹಾಕಿ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿದರು. ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಡಾ.ಸಿ.ಎನ್.ಅಶ್ವಥ್‌ನಾರಾಯಣ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೀವ್, ಪರಿಷತ್ ಸದಸ್ಯರಾದ ರವಿಕುಮಾರ್, ಚಲವಾದಿ ನಾರಾಯಣ ಸ್ವಾಮಿ, ಕಾರ್ಯಕರ್ತರು ಭಾಗಿಯಾಗಿದ್ದರು.
ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಗೆ ಇಂದು ರಾಹುಲ್ ಗಾಂಧಿ ಕ್ಷಮೆ ಕೇಳಲಿ. ತುರ್ತು ಪರಿಸ್ಥಿತಿಯ ಮೂಲಕ ಸಂವಿಧಾನದ ಅಪಮಾನ ಮಾಡಿರುವುದಕ್ಕೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ, ಧಿಕ್ಕಾರ ಕೂಗಿದರು.
ಆರ್.ಅಶೋಕ್ ಮಾತನಾಡಿ, "ಸಂವಿಧಾನವನ್ನು ಮೂಲೆಗೆ ತಳ್ಳಿ ಸರ್ವಾಧಿಕಾರಿ ಪ್ರವೃತ್ತಿ ತೋರಿದವರು ಇಂದಿರಾ ಗಾಂಧಿ. ತುರ್ತುಪರಿಸ್ಥಿತಿ ಹೇರಿ ನ್ಯಾಯಾಂಗ, ಪತ್ರಿಕಾರಂಗವನ್ನು ಅವರು ಹತ್ತಿಕ್ಕಿದರು. ಘಟಾನುಘಟಿ ನಾಯಕರನ್ನು ಜೈಲಿಗೆ ಹಾಕಲಾಯಿತು. ಆ ಸಂದರ್ಭದಲ್ಲಿ ನಾನೂ ಜೈಲಿಗೆ ಹೋಗಿದ್ದೆ. ನನ್ನೊಂದಿಗೆ ಸುರೇಶ್ ಕುಮಾರ್ ಅವರನ್ನೂ ಬಂಧಿಸಲಾಗಿತ್ತು. ಒಂದು ತಿಂಗಳು ಜೈಲಿನಲ್ಲಿದ್ದೆ. ಚಿತ್ರಹಿಂಸೆ ಕೊಟ್ಟರು. ಮಲಗೋಕೆ ಸಿಮೆಂಟ್ ಕಟ್ಟೆ ಕೆಳಗೆ ನನಗೆ ಜಾಗ ಸಿಕ್ಕಿತ್ತು. ಸರಿಯಾಗಿ ಊಟವೂ ಕೊಡುತ್ತಿರಲಿಲ್ಲ. ಇಷ್ಟು ಕಿರುಕುಳ ಕೊಟ್ಟ ಕಾಂಗ್ರೆಸ್ ಇವತ್ತು ರಾಜ್ಯದಲ್ಲಿ ಅಧಿಕಾರದಲ್ಲಿದೆ. ಯಾವ ಮುಖ ಇಟ್ಕೊಂಡು ಇವರು ಮತ ಕೇಳ್ತಾರೆ?" ಎಂದು ಆಗ್ರಹಿಸಿದರು.
ಪ್ರತಿಭಟನೆ ಮುಗಿಸಿದ ಬಿಜೆಪಿ ನಾಯಕರು ಅಲ್ಲಿಂದ ನೇರವಾಗಿ ಕಾಂಗ್ರೆಸ್ ಕಚೇರಿಗೆ ಪೋಸ್ಟರ್ ಅಂಟಿಸಲು ಮುಂದಾದರು. ಇದಕ್ಕೆ ಅನುಮತಿ ನಿರಾಕರಿಸಿದ ಪೊಲೀಸರು, ಪ್ರೀಡಂ ಪಾರ್ಕ್ ಬಳಿಯೇ ತಡೆದರು. ಕಾಂಗ್ರೆಸ್ ಕಚೇರಿಗೆ ತೆರಳುವ ಪ್ರಯತ್ನ ಕೈಬಿಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಬಿಜೆಪಿ ನಾಯಕರನ್ನು ವಶಕ್ಕೆ ಪಡೆದುಕೊಂಡು ಸ್ಥಳ ತೆರವುಗೊಳಿಸಿದರು.
ಇದನ್ನೂ ಓದಿ: 'ರಾಹುಲ್ ಗಾಂಧಿ ಕೈಯಲ್ಲಿರುವ ಸಂವಿಧಾನ ಬುಕ್ ಬೈಬಲ್ ರೀತಿ ಕಾಣುತ್ತಿದೆ ಎಂದರೆ ಅವರನ್ನೇ ಕೇಳಬೇಕು' - Santosh Lad