ಬೆಂಗಳೂರು: ಮುಡಾ ಹಗರಣ ಆರೋಪ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ನಿರ್ಣಯ ಖಂಡಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಅಕ್ಷಮ್ಯ. ಹೀಗಾಗಿ ಕಾಂಗ್ರೆಸ್ ಧೋರಣೆ ವಿರೋಧಿಸಿ, ರಾಜ್ಯಪಾಲರ ನಿರ್ಣಯ ಬೆಂಬಲಿಸಿ ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸೌಧದಲ್ಲಿ ಬೆಳಗ್ಗೆ 11 ಗಂಟೆಗೆ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಿದ್ದೇವೆ. ಇದೇ ರಾಜ್ಯಪಾಲರ ಭಾಷಣವನ್ನು ಸ್ವಾಗತಿಸಿದ್ದೀರಿ. ನಿಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ತಕ್ಷಣ ವಿರೋಧ ಮಾಡ್ತೀರಿ. ರಾಜ್ಯಪಾಲರಿಗೆ ಬಿಜೆಪಿ ಅಣತಿಯಂತೆ ನಡೆದುಕೊಳುತ್ತೀರಿ ಅಂತ ಆರೋಪ ಮಾಡ್ತೀರಿ. ಕೂಡಲೇ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು, ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ ಎಂದು ಹೇಳಿದರು.
ಈ ಹಿಂದೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಇದೇ ಸಿದ್ದರಾಮಯ್ಯ ಆಗ ಸ್ವಾಗತಿಸಿದ್ದರು. ಅಂದು ಸ್ವಾಗತ ಮಾಡಿದ್ದ ಸಿದ್ದರಾಮಯ್ಯ ಇವತ್ತೇಕೆ ವಿರೋಧ ಮಾಡುತ್ತಿದ್ದಾರೆ?. ಈಗ ಸಂವಿಧಾನ ಬದಲಾಯ್ತಾ?. ಅದೇ 1988 ಕಾಯಿದೆಯ 17A ಅಡಿಯಲ್ಲಿ ತನಿಖೆಗೆ ಅನುಮತಿ ನೀಡಿದ್ದಾರೆ. ಬೇರೆಯವರು ಮಾಡಿದರೆ ಭ್ರಷ್ಟಾಚಾರ, ಇವರು ಮಾಡಿದರೆ ಭ್ರಷ್ಟಾಚಾರ ಅಲ್ಲ. ಇವರ ಈ ಧೋರಣೆಯನ್ನು ಬಿಜೆಪಿ ಖಂಡಿಸುತ್ತದೆ ಎಂದರು.
ತಮ್ಮ ಜಮೀನಿಗೆ ಸಿಎಂ 62 ಕೋಟಿ ರೂ ಪರಿಹಾರ ಕೇಳಿದ್ದಾರೆ. ಇದರ ಆಧಾರದ ಮೇಲೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. 2013ರಲ್ಲಿ ಅಫಿಡವಿಟ್‌ನಲ್ಲಿ ಈ ಆಸ್ತಿಯ ಉಲ್ಲೇಖವೇ ಮಾಡಿಲ್ಲ. ಕಣ್ತಪ್ಪಿನಿಂದ ಆಗಿದೆ ಅಂತ ಹೇಳಿದ್ದಾರೆ. ಕಾನೂನು ಇದಕ್ಕೆ ಅವಕಾಶ ನೀಡೋದಿಲ್ಲ. 2018ರಲ್ಲಿ 14 ಸೈಟಿನ ಬೆಲೆ 25 ಲಕ್ಷ, 2023ರಲ್ಲಿ 8 ಕೋಟಿ ಬೆಲೆ ಎಂದು ಹೇಳಿದ್ದಾರೆ. ಈಗ 62 ಕೋಟಿ ಕೊಡಿ ಅಂತ ಹೇಳಿದ್ದಾರೆ. ಕಾನೂನಿನ ಆಧಾರದ ಮೇಲೆ ಹೆಜ್ಜೆ ಹೆಜ್ಜೆಗೂ ತಪ್ಪು ಮಾಡಿದ್ದಾರೆ. ಹಾಗಾಗಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಮುಖ್ಯ ವಕ್ತಾರ ಅಶ್ವಥ್ ನಾರಾಯಣ್ ಮಾತನಾಡಿ, ಸಿದ್ದರಾಮಯ್ಯ ಒಂದು ಡಿಫೆನ್ಸ್ ಟೀಮ್ ಮಾಡಿಕೊಂಡಿದ್ದಾರೆ. ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಈ ಟೀಮ್‌ನವರು. ಇವರು ದಾಖಲೆ ಪರಿಶೀಲನೆ ಮಾಡೋದಿಲ್ಲ. ಕೂಗು ಮಾರಿಗಳ ರೀತಿ ಮಾತಾಡ್ತಾರೆ. ಯಡಿಯೂರಪ್ಪ ಅವರಿಗೆ ನೀಡಿದ ಪ್ರಾಸಿಕ್ಯೂಷನ್ ಬಗ್ಗೆ ಮಾತಾಡ್ತಾರೆ. ಮುಡಾ ಹಗರಣದಲ್ಲಿ ಕಾಂಗ್ರೆಸ್‌ನವರು ಹೋಮ್ ವರ್ಕ್ ಮಾಡೋದಿಲ್ಲ. ಕೃಷ್ಣ ಬೈರೇಗೌಡ ಪಾಣಿ, ಮ್ಯುಟೇಷನ್ ಬಗ್ಗೆ ಸರಿಯಾಗಿ ಹೋಮ್ ವರ್ಕ್ ಮಾಡಿಲ್ಲ. ಜಮೀನು ಮೂಲ ಮಾಲೀಕ ಯಾರು?. ಮೈಲಾರಪ್ಪನ ಪಾತ್ರ ಏನು?. ಇದೆಲ್ಲವನ್ನೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೋಗಿ ಅಧ್ಯಯನ ಮಾಡಿ ನಂತರ ಸುದ್ದಿಗೋಷ್ಠಿ ಮಾಡಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಪ್ರಾಸಿಕ್ಯೂಷನ್ ಅನುಮತಿಯಿಂದ ಸರ್ಕಾರ ಸ್ವಲ್ಪಮಟ್ಟಿಗೆ ಶೇಕ್ ಆಗಿದೆ: ಜಿ.ಪರಮೇಶ್ವರ್ - Prosecution against CM