ದಾವಣಗೆರೆ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪ ಅವರ ಸ್ಪರ್ಧೆಯಿಂದ ಕಣ ರಂಗೇರಿದೆ. ನಮ್ಮ ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಿದೆ. ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅವರು 3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆಗೆ ಭೇಟಿ ನೀಡಿರುವ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಹೇಗಾದರೂ ಮಾಡಿ ಮತ ಪಡೆದುಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಹಣ ಹಂಚಿಕೆ ಮಾಡಿದರೂ ಕೂಡ ವಾತಾವರಣ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪರ ಇದೆ. ಕಾಂಗ್ರೆಸ್ ಏನೇ ಆಮಿಷ ತೋರಿಸಿದರೂ, ಮತದಾರರು ದೇಶದ ಭವಿಷ್ಯದ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಲಿದ್ದಾರೆ. ಎನ್ಡಿಎ ಕೂಟಕ್ಕೆ ಮತ ಕೊಡಬೇಕೆಂದು ಮತದಾರರು ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗೊಂದಲಗಳಿದ್ದವು. ಅವೆಲ್ಲವೂ ಈಗ ಮುಗಿದ ಅಧ್ಯಾಯ. ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ವಿರುದ್ಧವೂ ಕೆಲವೊಂದು ಬೆಳವಣಿಗೆಗಳು ನಡೆದವು. 2 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದುಕೊಂಡಿದ್ದೆವು. ಈಗಿನ ವಾತಾವರಣ ಗಮನಿಸಿದರೆ, 3 ಲಕ್ಷ ಅಂತರದಲ್ಲಿ ಗೆಲುವು ನಿಶ್ಚಿತ. ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಶಿವಮೊಗ್ಗದಲ್ಲಿ ಪ್ರಚಾರ ಮಾಡಿದ್ದಾರೆ. ಎಲ್ಲರೂ ರಾಘವೇಂದ್ರ ಅವರ ಪರವಾಗಿದೆ ಎಂದರು.
ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ಕನಸು ಕಾಣುತ್ತಿದೆ. ಅಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ರಾಜ್ಯಾದ್ಯಂತ ನಾನು ಪ್ರವಾಸ ಮಾಡುತ್ತಿದ್ದೇನೆ. ಎಲ್ಲೆಡೆ ಜನರ ಉತ್ಸಾಹವನ್ನು ಕಾಣುತ್ತಿದ್ದರೆ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಾಣಲಿದ ಎಂಬುದು ವಿಧಿತವಾಗುತ್ತಿದೆ. ಏಪ್ರಿಲ್ 26 ರಂದು ನಡೆಯುವ ಮೊದಲ ಹಂತದ ಮತದಾನದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತದಾರರು ವೋಟ್ ನೀಡಲಿದ್ದಾರೆ ಎಂದು ತಿಳಿಸಿದರು.
28ಕ್ಕೆ ದಾವಣಗೆರೆಗೆ ಮೋದಿ: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 28 ರಂದು ದಾವಣಗೆರೆಗೆ ಆಗಮಿಸಲಿದ್ದು, ಅಂದು ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕಾಂಗ್ರೆಸ್ನವರು ಹಣ, ಅಧಿಕಾರ ದುರುಪಯೋಗ ಮಾಡಿದರೂ, ನಮ್ಮೆಲ್ಲಾ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಬಿಜೆಪಿ ಸೇರ್ಪಡೆ: ಬಿ.ವೈ.ವಿಜಯೇಂದ್ರ ಅವರ ದಾವಣಗೆರೆ ಭೇಟಿಯ ವೇಳೆ ಪಾಲಿಕೆಯ ಕಾಂಗ್ರೆಸ್ನ ಮಾಜಿ ಸದಸ್ಯರು ಬಿಜೆಪಿ ಸೇರಿದರು. ಲಿಂಗರಾಜ್, ಹಾಲೇಶ್ ಸೇರಿದಂತೆ ಮತ್ತಿತರ ಮುಖಂಡರು ಕಮಲ ಬಾವುಟ ಹಿಡಿದರು. ಈ ವೇಳೆ ಸಂಸದ ಜಿ.ಎಂ. ಸಿದ್ದೇಶ್ವರ್, ಮಾಜಿ ಸಚಿವ ಎಸ್.ರವೀಂದ್ರನಾಥ್ ಇದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಏ.28ರಿಂದ ಎರಡು ದಿನ ವಿವಿಧೆಡೆ ಪ್ರಧಾನಿ ಮೋದಿ ರ್‍ಯಾಲಿ - PM Modi Rally