ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ವಿಷಯದಲ್ಲಿ ನಾವು ರೈತರ ಹಿತ ಕಾಪಾಡುವ ಕೆಲಸ ಮಾಡುತ್ತಿದ್ದರೆ, ಇನ್ನೊಂದೆಡೆ ಬಿಜೆಪಿಗರು ರಾಜಕಾರಣ ಮಾಡುತ್ತಿದ್ದಾರೆ. ಇದು ಸರಿಯಲ್ಲ. ನಮಗೂ ಮಾತನಾಡಲು ಬರುತ್ತದೆ. ಆದರೆ, ಈ ಸಂದರ್ಭ ಹಾಗಿಲ್ಲ. ಬಿಜೆಪಿಗರು ರಾಜ್ಯ ಸರ್ಕಾರವನ್ನು ಟೀಕಿಸುವ ಬದಲು ಸಲಹೆ ನೀಡಲಿ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ನೀರಿನಲ್ಲೇ ಗೇಟ್ ಕೆಳಗಿಳಿಸಿ ದುರಸ್ಥಿಗೆ ಚಿಂತನೆ: ಮುನಿರಾಬಾದ್ನ ಟಿಬಿ ಡ್ಯಾಂನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡು ತಂತ್ರಜ್ಞರ ತಂಡದ ಸಲಹೆ ಪಡೆದು ಗೇಟ್ ಪುನರ್‌ಸ್ಥಾಪಿಸುವ ಕೆಲಸಕ್ಕೆ ಮುಂದಾಗಿದ್ದೇವೆ. ಒಂದು ತಂಡದಲ್ಲಿ ಕನ್ಹಯ್ಯ ನಾಯ್ಡು ಅವರ ಹತ್ತಿರ ಒಂದು ಡಿಸೈನ್ ಇದೆ. ಅವರ ಪ್ರಕಾರ, ಸುಮಾರು 60 ಟಿಎಂಸಿಯಷ್ಟು ನೀರು ಹೊರಹಾಕಿದರೆ ಮಾತ್ರ ಕೆಲಸ ಮಾಡಲು ಸಾಧ್ಯವಿದೆ. ಇನ್ನೊಂದು ತಂಡ ನೀರನ್ನು ಉಳಿಸಿಕೊಂಡು ನೀರಿನಲ್ಲೇ ಗೇಟ್ ಕೆಳಗಿಳಿಸಿ ನೀರು ಪೋಲಾಗುತ್ತಿರುವುದನ್ನು ತಡೆಯಬಹುದು ಎಂದು ಹೇಳುತ್ತಿದೆ. ಹಾಗಾಗಿ, ರೈತರ ಹಿತದೃಷ್ಠಿಯಿಂದ ನಾವು ನೀರನ್ನು ಉಳಿಸಿಕೊಂಡು ಗೇಟ್ ದುರಸ್ಥಿ ಮಾಡುವ ಬಗ್ಗೆ ಚಿಂತನೆಯಲ್ಲಿ ತೊಡಗಿದ್ದೇವೆ. ಇನ್ನೊಂದು ಡಿಸೈನ್ ರೆಡಿ ಮಾಡಲಾಗಿದೆ. ಅದರಲ್ಲಿ 5 ಗೇಟ್ನ ಪ್ಲೇಟ್‌ಗಳನ್ನು ಅಳವಡಿಸಬಹುದು. ನೀರಿನಲ್ಲಿಯೇ ಕೆಲಸ ಮಾಡಬಹುದು. ಈ ಕುರಿತು ಸಿಎಂ ಹಾಗೂ ಡಿಸಿಎಂ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ಇದರಿಂದ ಸುಮಾರು 25 ಟಿಎಂಸಿ ನೀರು ಉಳಿಸಬಹುದು ಎಂದು ತಿಳಿಸಿದರು.
ತುಂಗಭದ್ರಾ ಮಂಡಳಿ ಯಾರ ಹಿಡಿತದಲ್ಲಿದೆ?: ಟಿಬಿ ಡ್ಯಾಂ ನಿರ್ವಹಣೆ ಮಾಡುತ್ತಿರುವುದು ತುಂಗಭದ್ರಾ ಮಂಡಳಿ. ಸದ್ಯ ಮಂಡಳಿಯು ಕೇಂದ್ರ ಸರ್ಕಾರದ ಸುಪರ್ದಿಯಲ್ಲಿದೆ. ಹಾಗಾಗಿ ರಾಜ್ಯದ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿ ಡ್ಯಾಂ ನಿರ್ವಹಣೆ ಮಾಡಿಸಲಿ. ಅದನ್ನು ಬಿಟ್ಟು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಿದೆ. ನವಲಿ ಸಮಾನಾಂತರ ಜಲಾಶಯ ನಿರ್ಮಿಸಲು ಹಣ ನೀಡಿಲ್ಲ. ಇದು ರಾಜ್ಯ ಸರ್ಕಾರದ ವೈಫಲ್ಯ ಎಂದು ಬಿಜೆಪಿ ಸಂಸದರಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಜನಾರ್ದನ ರೆಡ್ಡಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ತುಂಗಭದ್ರಾ ಮಂಡಳಿಯಲ್ಲಿ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣದವರು ಕಾರ್ಯದರ್ಶಿಗಳಾಗಿ ಕೆಲಸಮಾಡಬಾರದು ಎಂದು ಈ ಕುರಿತು ನಾವು ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದಿದ್ದೇವೆ. ಇಂತಹ ಸಂದರ್ಭದಲ್ಲಿ ಅವುಗಳನ್ನೆಲ್ಲಾ ಮಾತನಾಡದೆ, ರೈತರ ಈ ನಾಡಿನ ಸಂಪತ್ತಾಗಿರುವ ಜಲಾಶಯದ ಉಳುವಿಗಾಗಿ ಪಕ್ಷಬೇಧ ಬಿಟ್ಟು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಬಿಜೆಪಿಯವರು ಡ್ಯಾಂ ಕುರಿತು ಉತ್ತಮ ಸಲಹೆಗಳನ್ನು ನೀಡಲಿ. ಎಷ್ಟು ಸಾಧ್ಯವೊ ಅಷ್ಟು ಬೇಗ ಡ್ಯಾಂನ ಗೇಟ್ ರಿಪೇರಿ ಮಾಡುತ್ತೇವೆ ಎಂದು ತಿಳಿಸಿದರು.
ತುಂಗಭದ್ರಾ ಜಲಾಶಯದಿಂದ ರಾಜ್ಯದ ರೈತರ ಭೂಮಿಗೆ ನೀರು ನೀಡುತ್ತೇವೆ. ಮುಂಗಾರು ಹಂಗಾಮಿಗೆ ಯಾವುದೇ ತೊಂದರೆ ಆಗಲ್ಲ. ದೇವರ ಮೇಲೆ ನಂಬಿಕೆ ಇಡಿ. ಸದ್ಯ ನಡೆದಿರುವುದು ಇದು ಅಸಹಜವಾದ ಘಟನೆ. ಪ್ರಕೃತಿಗಿಂತ ನಾವು ದೊಡ್ಡವರಲ್ಲ. ಕ್ರಸ್ಟ್ ಗೇಟ್ ರಿಪೇರಿ ಬಳಿಕ ಮತ್ತೆ ಮಳೆ ಬಂದರೆ ಜಲಾಶಯಕ್ಕೆ ನೀರು ಹರಿದು ಬರಲಿದೆ. ಅಕ್ಟೋಬರ್ ಅಂತ್ಯಕ್ಕೆ ನೀರು ಹಂಚಿಕೆ ಮಾಡಲಾಗುತ್ತದೆ. ರಾಜ್ಯದ ರೈತರಿಗೆ ಮೊದಲ ಬೆಳೆಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಸಚಿವ ತಂಗಡಗಿ ಭರವಸೆ ನೀಡಿದರು.
ಇದಕ್ಕೂ ಮುನ್ನ ಗೇಟ್ ಸಿದ್ದಪಡಿಸಲಾಗುತ್ತಿರುವ ಹೊಸಪೇಟೆ ಹಾಗೂ ಕೊಪ್ಪಳ ಜಿಲ್ಲೆಯ ಹೊಸಳ್ಳಿಗೆ ಸಚಿವ ಶಿವರಾಜ್ ತಂಗಡಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಂಸದ ರಾಜಶೇಖರ ಹಿಟ್ನಾಳ್, ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ: ಟಿಬಿ ಡ್ಯಾಂನಿಂದ ಅಪಾರ ನೀರು ಹೊರಕ್ಕೆ: ಇಂದು ಮಧ್ಯಾಹ್ನ ಭೇಟಿ ನೀಡಲಿರುವ ವಿಪಕ್ಷ ನಾಯಕರು - Tungabhadra dam