ಮಂಗಳೂರು: ರಾಜ್ಯದಲ್ಲಿ ಐದೂವರೆ ಮುಖ್ಯಮಂತ್ರಿಗಳು ಆಡಳಿತ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್, ಡಾ. ಜಿ ಪರಮೇಶ್ವರ, ಪ್ರಿಯಾಂಕಾ ಖರ್ಗೆ, ಡಾ ಯತೀಂದ್ರ ಮತ್ತು ಸುರ್ಜೆವಾಲಾ ಮುಖ್ಯಮಂತ್ರಿಗಳಾಗಿದ್ದಾರೆ. ಉಳಿದ ಅರ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದು ಹೇಳಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಅವರದ್ದು ಏನು ನಡೆಯುತ್ತಿಲ್ಲ. ಇನ್ನುಳಿದ ಐವರು ರಾಜ್ಯದ ಮುಖ್ಯಮಂತ್ರಿಗಳಂತೆ ಆಡಳಿತ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಪೂರ್ಣವಾಗಿ ಜಾರಿಯಾಗಿಲ್ಲ. 200 ಯುನಿಟ್ ವಿದ್ಯುತ್ ನೀಡಲಾಗುತ್ತಿಲ್ಲ. ಮತ್ತೊಂದೆಡೆ ವಿದ್ಯುತ್ ದರ ಜಾಸ್ತಿ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರ ಸರ್ಕಾರ ನೀಡಿದ 5 ಕೆ.ಜಿ ಅಕ್ಕಿಯನ್ನು ಮಾತ್ರ ನೀಡಲಾಗಿದೆ ಎಂದರು.
ಹುಬ್ಬಳ್ಳಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿಯ ಹತ್ಯೆ ಪ್ರಕರಣದಲ್ಲಿ ಯುವತಿಯ ತಂದೆ ಹುಬ್ಬಳ್ಳಿ ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಆಗಿದ್ದರೂ, ಅವರಿಗೆ ತಮ್ಮ ಪಕ್ಷ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರದ ಮೇಲೆ ಭರವಸೆ ಇಲ್ಲ. ಬಿಜೆಪಿ ನಾಯಕರಲ್ಲಿ ನ್ಯಾಯ ಒದಗಿಸುವಂತೆ ಕೇಳಿ ಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕಾನೂನು ಕ್ರಮಗಳ ಬಗ್ಗೆ ಕ್ರಿಮಿನಲ್ಗಳಿಗೆ ಭಯ ಇಲ್ಲ. ರಾಜ್ಯದಲ್ಲಿರುವುದು ಭ್ರಷ್ಟ, ಕ್ರಿಮಿನಲ್ ಹಾಗೂ ಕಮ್ಯುನಲ್ ಸರ್ಕಾರ ಎಂದರು.
ಹತರಾದ ನಕ್ಸಲರನ್ನು ಕಾಂಗ್ರೆಸ್ ಹುತಾತ್ಮರೆ ಎಂದು ಹೇಳಿದೆ. ಈ ಮೂಲಕ ನಮ್ಮ ರಕ್ಷಣಾ ಪಡೆಗಳಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಅವರು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿಗಳು ಸೋತರೆ ಸಿಎಂ ಸಿದ್ದರಾಮಯ್ಯ ಸ್ಥಾನಕ್ಕೆ ಕಂಟಕ: ಸಚಿವ ಬೈರತಿ ಸುರೇಶ್ - Byrathi Suresh