ಬೆಳಗಾವಿ : ಬೆಳಗಾವಿಯ ವೆಲ್ ಕಮ್ ಐಟಿಸಿ ಹೋಟೆಲ್ನಲ್ಲಿ ಮಾರ್ಚ್ 4ರಂದು ರಾತ್ರಿ 9ಕ್ಕೆ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ. ಪಿ ನಡ್ಡಾ ನೇತೃತ್ವದಲ್ಲಿ ಬೆಳಗಾವಿ, ಚಿಕ್ಕೋಡಿ, ವಿಜಯಪುರ ಮತ್ತು ಬಾಗಲಕೋಟೆ ಲೋಕಸಭೆ ಕ್ಷೇತ್ರಗಳ ಕೋರ್ ಕಮಿಟಿ ಸಭೆ ಆಯೋಜಿಸಲಾಗಿದೆ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ ಅವರು ತಿಳಿಸಿದರು.
ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಭೆಯಲ್ಲಿ ಶಾಸಕರು, ಮಾಜಿ ಶಾಸಕರು, ಮುಖಂಡರು, ಟಿಕೆಟ್ ಆಕಾಂಕ್ಷಿಗಳು ಭಾಗವಹಿಸಲಿದ್ದಾರೆ. ಅದೇ ರೀತಿ ಮಾ. 5ರಂದು ಬೆಳಗ್ಗೆ 11ಕ್ಕೆ ಚಿಕ್ಕೋಡಿಯಲ್ಲಿ ಬಿಜೆಪಿ ಬೂತ್ ಮೇಲ್ಪಟ್ಟ ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ಹೇಳಿದರು. ನಂತರ ಪ್ರಬುದ್ಧರ ಸಭೆಯಲ್ಲಿ ಅವರು ಭಾಗವಹಿಸಿ ದೆಹಲಿಗೆ ತೆರಳಲಿದ್ದಾರೆ ಎಂದರು.
ರಾಜ್ಯ ಬಿಜೆಪಿ ವಕ್ತಾರ ಎಂ ಬಿ ಜೀರಲಿ ಮಾತನಾಡಿ, ನಾಳೆ ಸಂಜೆ 4.30ಕ್ಕೆ ಬೆಳಗಾವಿಯಲ್ಲಿ ಆಯೋಜಿಸಲಾಗಿರುವ ಪ್ರಬುದ್ಧರ ಸಭೆಯಲ್ಲಿ ವೈದ್ಯರು, ಉದ್ಯಮಿಗಳು, ವಕೀಲರು, ಇಂಜಿನಿಯರ್, ಶಿಕ್ಷಣ ತಜ್ಞರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ವಿಶೇಷವಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವುದು ಲೋಕಸಭಾ ಚುನಾವಣೆಯ ತಯಾರಿ, ಮತ್ತೆ ಸಂಘಟನೆಯ ದೃಷ್ಟಿಕೋನದಿಂದ ಸಭೆ ನಡೆಯುತ್ತಿದೆ ಎಂದರು. ಈ ವೇಳೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಕೆಲಸಗಳನ್ನು ವಿಸ್ತೃತವಾಗಿ ತಿಳಿಸಲಾಗುತ್ತದೆ. ಅಲ್ಲದೇ ಭವಿಷ್ಯದಲ್ಲಿ ಪ್ರಥಮ ಆರ್ಥಿಕ ಶಕ್ತಿಯಾಗಿ ಭಾರತ ಹೊರ ಹೊಮ್ಮುವ ಬಗ್ಗೆ ಸಭೆಯಲ್ಲಿ ಜೆ ಪಿ ನಡ್ಡಾ ಅವರು ಮಾತನಾಡಲಿದ್ದಾರೆ ಎಂದು ವಿವರಿಸಿದರು.
ಅಭ್ಯರ್ಥಿಗಳ ಆಯ್ಕೆಯಲ್ಲಿನ ಅಭಿಪ್ರಾಯ ಸಂಗ್ರಹಣೆ ಮಾಡಲಿದ್ದಿರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅಭಿಪ್ರಾಯದ ಸಂಗ್ರಹಣೆಗೆ ಅವರು ಬರುತ್ತಿಲ್ಲ. ಈಗಾಗಲೇ ನಮ್ಮ ಬೆಳಗಾವಿ ಲೋಕಸಭೆ ಕುರಿತು ನಿನ್ನೆ ಮುನಿರಾಜು ಅವರು ಮತ್ತು ಎಂಎಲ್ಸಿ ಡಿ ಎಸ್ ಅರುಣ್ ಅವರು ಬಂದಿದ್ದರು. ಅವರು ಸಂಗ್ರಹವನ್ನು ಮಾಡಿ ಅದನ್ನು ರಾಜ್ಯ ಹಾಗೂ ಕೇಂದ್ರದ ನಾಯಕರಿಗೆ ಮುಟ್ಟಿಸುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮೇಯರ್ ಸವಿತಾ ಕಾಂಬಳೆ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ : ನಡ್ಡಾ ಜೊತೆ ವಿಜಯೇಂದ್ರ ಚರ್ಚೆ: ಇನ್ನೆರಡು ದಿನದಲ್ಲಿ ರಾಜ್ಯಸಭಾ ಅಭ್ಯರ್ಥಿ ಹೆಸರು ಪ್ರಕಟ?