ಕೋಲಾರ: ಬಿಬಿಎಂಪಿ ಗುತ್ತಿಗೆದಾರನಿಂದ 30 ಲಕ್ಷಕ್ಕೆ ಬೇಡಿಕೆ ಇಟ್ಟು, ಜೀವ ಬೆದರಿಕೆ ಹಾಕಿರುವ ಆರೋಪದಡಿ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಕೋಲಾರದ ಮುಳಬಾಗಿಲು ತಾಲೂಕಿನ ನಂಗಲಿ ಬಳಿ ಶಾಸಕ ಮುನಿರತ್ನ ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಕೋಲಾರದ ಪೊಲೀಸರ ನೆರವಿನೊಂದಿಗೆ ಬೆಂಗಳೂರು ಪೊಲೀಸರು ಮುನಿರತ್ನರನ್ನು ವಶಕ್ಕೆ ಪಡೆದು, ಬೆಂಗಳೂರಿನತ್ತ ಕರೆತಂದಿದ್ದರು. ಮುನಿರತ್ನ ಕೋಲಾರ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದರು. ಈ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೋಲಾರ ಎಸ್ಪಿ ನಿಖಿಲ್ ಮಾಹಿತಿ ನೀಡಿದ್ದರು. ಬಳಿಕ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ಇತರ ಆರೋಪಿಗಳಾದ ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ನಾಯಕ್ ಮತ್ತು ರವಿಶಂಕರ್ ಕೂಡ ಪೊಲೀಸರ ಮುಂದೆ ಶರಣಾಗಿದ್ದಾರೆ.
ಇದನ್ನೂ ಓದಿ: 'ನಿಮ್ಮ ಶಾಸಕ ಮುನಿರತ್ನ ಬಾಯಿ ಶುದ್ಧಗೊಳಿಸಿ, ನಂತರ ಊರಿಗೆ ಬುದ್ಧಿ ಹೇಳಿ': ಸಿಎಂ ಸಿದ್ದರಾಮಯ್ಯ - CM Siddaramaiah
ಬೆಂಗಳೂರು ಪೊಲೀಸರು ಮುನಿರತ್ನ ಅವರನ್ನು ವಿಚಾರಣೆ ಬಳಿಕ ವಾಯ್ಸ್ ಸ್ಯಾಂಪಲ್ಸ್ ಪಡೆದುಕೊಳ್ಳಲಿದ್ದಾರೆ. ವೈರಲ್ ಆಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದ ಮುನಿರತ್ನ, ''ಆಡಿಯೊದಲ್ಲಿನ ಧ್ವನಿ ತನ್ನದಲ್ಲ'' ಎಂದಿದ್ದರು. ಹೀಗಾಗಿ, ಸತ್ಯಾಸತ್ಯತೆ ಬಗ್ಗೆ ತಿಳಿದುಕೊಳ್ಳಲು ಪೊಲೀಸರು ಎಫ್ಎಎಸ್ಎಲ್ಗೆ ಕಳುಹಿಸಲಿದ್ದಾರೆ.
ಆರೋಪ ಸತ್ಯಕ್ಕೆ ದೂರ ಎಂದಿರುವ ಮುನಿರತ್ನ: ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದ ಮುನಿರತ್ನ, ''ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದುದು. 15 ವರ್ಷದಿಂದ ನನ್ನ ಮೇಲೆ ಯಾವೊಬ್ಬ ಗುತ್ತಿಗೆದಾರರು ಆರೋಪಿಸಿರಲಿಲ್ಲ. ಲೋಕಸಭಾ ಚುನಾವಣೆ ಮುಗಿದ ನಂತರ ನನ್ನ ಮೇಲೆ ಸಂಚು ರೂಪಿಸಿದ್ದಾರೆ. ದೂರು ಕೊಟ್ಟ ವ್ಯಕ್ತಿ 7-8 ವರ್ಷಗಳಿಂದ ನಮ್ಮಲ್ಲಿ ಕೆಲಸ ಮಾಡುತ್ತಿದ್ದ. ಎಂದಿಗೂ ದೂರು ಕೊಡದವನು ನಿನ್ನೆ ನನ್ನ ಮೇಲೆ ದೂರು ಕೊಟ್ಟಿದ್ದಾರೆ. ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಅಕ್ರಮಕ್ಕೆ ಸಂಬಂಧಿಸಿದಂತೆ ನಾನು ಪತ್ರ ಬರೆದಿದ್ದೆ. ಪ್ರತಿ ತಿಂಗಳು 15 ಲಕ್ಷ ರೂ. ಅವ್ಯವಹಾರ ಆಗುತ್ತಿರುವುದು ಕಂಡು ಬಂದು, ತನಿಖೆ ಮಾಡಿ ಎಂದು ಪತ್ರ ಬರೆದ ಹಿನ್ನೆಲೆಯಲ್ಲಿ ನನ್ನ ಮೇಲೆ ಷಡ್ಯಂತ್ರ ರೂಪಿಸಿದ್ದಾರೆ'' ಎಂದು ಸಮರ್ಥಿಸಿಕೊಂಡಿದ್ದರು.
ಗುತ್ತಿಗೆದಾರನ ದೂರಿನಲ್ಲಿ ಏನಿದೆ?: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗುತ್ತಿಗೆದಾರ ಚಲುವರಾಜು ಎಂಬವರಿಂದ 30 ಲಕ್ಷಕ್ಕೆ ಬೇಡಿಕೆ ಇಟ್ಟು, ಜೀವ ಬೆದರಿಕೆ ಹಾಕಿರುವ ಆರೋಪದಡಿ ಶಾಸಕ ಮುನಿರತ್ನ ವಿರುದ್ಧ ಬೆಂಗಳೂರಿನಲ್ಲಿ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಚೆಲುವರಾಜು ನೀಡಿರುವ ದೂರಿನನ್ವಯ ಶಾಸಕ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿತ್ತು. ಅಲ್ಲದೇ, ಪಾಲಿಕೆ ಸದಸ್ಯ ವೇಲುನಾಯಕ್ ನೀಡಿರುವ ದೂರಿನಂತೆ ಶಾಸಕರ ವಿರುದ್ಧ ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿದೆ.