ದಾವಣಗೆರೆ: ರಾಜ್ಯಾಧ್ಯಕ್ಷರ ತಪ್ಪಿನಿಂದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಾಗಿದೆ. ಲಗಾನ್ ಟೀಮ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದರೆ ಸೋಲುತ್ತಿರಲಿಲ್ಲ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರು ಬಿ.ವೈ.ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆ್ಯಂಡ್ ಟೀಮ್ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಅದನ್ನು ರಾಜ್ಯಾಧ್ಯಕ್ಷರು ತಡೆದಿದ್ದರೆ ಕ್ಷೇತ್ರ ಕಾಂಗ್ರೆಸ್ ಬದಲು ಬಿಜೆಪಿ ಪಾಲಾಗುತ್ತಿತ್ತು. ನಾಲ್ಕು ಗೋಡೆಗಳ ಮಧ್ಯೆ ಮಾತಾಡಬೇಕು ಎಂಬುದು ನಿಮಗೆ ಈಗ ಗೊತ್ತಾಯಿತೇ? ಎಂದು ವಾಗ್ದಾಳಿ ನಡೆಸಿದರು.
ಈ ಲಗಾನ್ ಟೀಮ್ ನಿರ್ಮಾಣ ಮಾಡಿದ್ದೇ ಇದೇ ರಾಜ್ಯಾಧ್ಯಕ್ಷರು. ಗಾಯಿತ್ರಿ ಸಿದ್ದೇಶ್ವರ್ಗೆ ಟಿಕೆಟ್ ಕೊಟ್ಟಾಗಲೂ ಲಗಾನ್ ಟೀಮ್ ಮಾತನಾಡಿದ್ರೂ ಕೂಡ ಒಂದು ದಿನವೂ ಯಾವ ನಾಯಕರೂ ಇವರ ವಿರುದ್ಧ ಮಾತಾಡಲಿಲ್ಲ. ಆಗ ಏಕೆ ಮಾತನಾಡಬೇಡಿ ಅಂತ ಹೇಳಿಲ್ಲ ಎಂದು ಪ್ರಶ್ನಿಸಿದರು.
ನನಗೆ ಯಾರೂ ಕೂಡ ಕರೆ ಮಾಡಿ ಮಾತಾಡಿಲ್ಲ. ಕರೆ ಮಾಡಿದರೆ ಮಾತನಾಡಿ ಉತ್ತರ ಕೊಡುವೆ. ಆದರೆ, ಬಿ.ಪಿ.ಹರೀಶ್ ಸತ್ಯ ಮಾತನಾಡಿದ ತಕ್ಷಣ ನಾಲ್ಕು ಗೋಡೆಗಳ ಮಧ್ಯೆ ಮಾತಾಡಿ ಎಂಬುದು ನೆನಪಾಯ್ತಾ?. ಅವರಿಗೆ ಬೇಕಾದವರು ಏನು ಬೇಕಾದರೂ ಮಾತನಾಡಬಹುದಾ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ದಾವಣಗೆರೆ: ದೂಡಾ ಸಭೆಯಲ್ಲಿ ಬಿಜೆಪಿ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವರ ಜಟಾಪಟಿ