ಬೆಂಗಳೂರು: "ಸಿಆರ್ಪಿಸಿ 125ರ ಪ್ರಕಾರ ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ಪಡೆಯುವ ಹಕ್ಕನ್ನು ಭಾರತದ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದನ್ನು ಕರ್ನಾಟಕ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ತುಂಬು ಹೃದಯದಿಂದ ಸ್ವಾಗತಿಸುತ್ತದೆ" ಎಂದು ರಾಜ್ಯ ಅಧ್ಯಕ್ಷೆ ಮಂಜುಳಾ ತಿಳಿಸಿದರು.
ಬೆಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "1985ರಲ್ಲಿ ಸುಪ್ರೀಂ ಕೋರ್ಟ್ ಇದೇ ಸಿಆರ್ಪಿಸಿ 125ರ ಪ್ರಕಾರ ಮುಸ್ಲಿಂ ಮಹಿಳೆಯರಿಗೆ ವಿಚ್ಛೇದನ ನೀಡುವ ಪತಿ ಜೀವನಾಂಶ ಕೊಡಬೇಕೆಂದು ತೀರ್ಪು ನೀಡಿತ್ತು. ಅದನ್ನು ರಾಜೀವ್ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸರಕಾರ ಸಂಸತ್ತಿನಲ್ಲಿ ತಡೆ ಒಡ್ಡಿ, ಮುಸ್ಲಿಂ ವೈಯಕ್ತಿಕ ಕಾನೂನಿಗೆ ಬೆಂಬಲ ಕೊಟ್ಟು, ಸುಪ್ರೀಂ ಕೋರ್ಟ್ನ ತೀರ್ಪನ್ನು ನಿರಾಕರಿಸಿತ್ತು" ಎಂದು ನೆನಪಿಸಿದರು.
"ಈ ಮೂಲಕ ಅವರು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ್ದರು. ಅಲ್ಲದೇ, ಮಹಿಳಾ ಪರವಾದ ನಿಲುವಿನ ವಿರುದ್ಧ ಇಡೀ ಕಾಂಗ್ರೆಸ್ ಪಕ್ಷ ನಿಂತಿತ್ತು. ಪುನಃ ಇದೀಗ ಅದೇ ಜೀವನಾಂಶದ ವಿಚಾರ ಬಂದಿದ್ದು, ಭಾರತದ ಸುಪ್ರೀಂ ಕೋರ್ಟ್ ಮುಸ್ಲಿಂ ಮಹಿಳೆಯರಿಗೆ ಕೂಡ ಜೀವನಾಂಶ ಕೊಡುವುದನ್ನು ಎತ್ತಿ ಹಿಡಿದಿದೆ" ಎಂದು ತೀರ್ಪನ್ನು ಸ್ವಾಗತಿಸಿದರು.
"ಭಾರತದ ಸಂವಿಧಾನದ ಕುರಿತು ಪದೇ ಪದೇ ಮಾತನಾಡುವ, ಡೋಂಗಿ ಪ್ರಚಾರ ಮಾಡುವ ಕಾಂಗ್ರೆಸ್ ಪಕ್ಷದವರು ಇವತ್ತು ಮಹಿಳಾ ಪರವಾಗಿ ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ನಿರೀಕ್ಷಿಸುತ್ತೇವೆ. ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಹೇಗೆ ನಡೆದುಕೊಳ್ಳಲಿದ್ದಾರೆ? ಅವರ ತಂದೆ ಮಾಡಿದ್ದನ್ನು ಬೆಂಬಲಿಸುವರೇ ಅಥವಾ ಭಾರತದ ಸುಪ್ರೀಂ ಕೋರ್ಟ್ ನಿಲುವನ್ನು ಗೌರವಿಸುವರೇ?" ಎಂದು ಪ್ರಶ್ನಿಸಿದರು.
"1985ರಲ್ಲಿ ಕಾಂಗ್ರೆಸ್ಸಿಗೆ ಬಹುಮತ ಇದ್ದಾಗ ಮುಸ್ಲಿಂ ಮಹಿಳೆಯರ ನ್ಯಾಯವನ್ನು, ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಘನತೆಯನ್ನು ಗಾಳಿಗೆ ತೂರಿದ್ದ ಕಾಂಗ್ರೆಸ್ ಇವತ್ತು ಅಧಿಕಾರದಲ್ಲಿ ಇಲ್ಲ. ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಇವತ್ತು ಆಡಳಿತ ನಡೆಸುತ್ತಿದೆ. ತ್ರಿವಳಿ ತಲಾಖ್ ಅನ್ನು ರದ್ದು ಮಾಡಿದ ಮೋದಿ ಸರ್ಕಾರವೇ ಈಗ ಮಹಿಳೆಯರ ಪರವಾಗಿ ಕೂಡ ನಿಲ್ಲಲಿದೆ. ಭಾರತದ ಮಹಿಳೆಯರು ಮೋದಿ ಅವರ ಸರ್ಕಾರದಲ್ಲಿ ಸುರಕ್ಷಿತರಾಗಿದ್ದಾರೆ" ಎಂದು ವಿಶ್ಲೇಷಿಸಿದರು.