ಬೆಂಗಳೂರು: ವಿಪಕ್ಷ ನಾಯಕ ಆರ್ ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರ, ಶಾಸಕರಾದ ಸುರೇಶ್ ಕುಮಾರ್, ಚನ್ನನಬಸಪ್ಪ, ಮುನಿರತ್ನ, ಅರವಿಂದ್ ಬೆಲ್ಲದ್, ಬಸವರಾಜು ಮುತ್ತಿಮೋಡ್, ಎಂಎಲ್ಸಿ ಕೋಟ ಶ್ರೀನಿವಾಸ ಪೂಜಾರಿ, ರವಿಕುಮಾರ್ ಸೇರಿದಂತೆ ಬಿಜೆಪಿ ಹಲವು ನಾಯಕರು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿದರು. ಬರ ಪರಿಹಾರವನ್ನು ಸರಿಯಾಗಿ ನಿರ್ವಹಿಸದ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಕಮಲ ನಾಯಕರು, ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು.
ರಾಜ್ಯದಲ್ಲಿ ಬರ,ಕಾಂಗ್ರೆಸ್ಸಿಗರು ದೆಹಲಿಯಲ್ಲಿ ಮಜಾ - ಅಶೋಕ್ ವಾಗ್ದಾಳಿ: ಪ್ರತಿಭಟನೆ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್, ರೈತರು ಸಂಕಷ್ಟದಲ್ಲಿದ್ದರೆ ಮಜಾ ಮಾಡಲು ಇವರೆಲ್ಲಾ ದೆಹಲಿಗೆ ಹೋಗಿದ್ದಾರೆ. ಇವರ ದೆಹಲಿ ಪ್ರವಾಸದಿಂದ ವಿಧಾನಸೌಧ ಖಾಲಿ ಖಾಲಿಯಾಗಿದೆ. ಸಚಿವರಿಲ್ಲದೇ ಅಧಿಕಾರಿಗಳಿಗೆ ಕೆಲಸ ಇಲ್ಲದಂತಾಗಿದೆ. ಮತ್ತೊಂದೆಡೆ ಬರಗಾಲ ಎದುರಾಗಿದ್ದು, ಮಲೆನಾಡಿನಲ್ಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಬೆಂಗಳೂರಿಗೆ ಕಾವೇರಿ ನೀರಿನ ಪೂರೈಕೆಯಲ್ಲಿ ಶೇ.30 ರಷ್ಟು ಕಡಿತ ಮಾಡಲಾಗಿದ್ದು, ಅಧಿಕಾರಿಗಳನ್ನು ವಿಚಾರಿಸಿದರೆ ಡಿಸಿಎಂ ಡಿಕೆಶಿ ತಮಿಳುನಾಡಿನ ಬ್ರದರ್ಸ್ಗೆ ಬಿಟ್ಟಿದ್ದಾರೆ. ಹಾಗಾಗಿ ನಮಗೆ ನೀರಿನ ಕೊರತೆಯಾಗಿದೆ ಎನ್ನುತ್ತಿದ್ದಾರೆ.
ಗ್ಯಾರಂಟಿಗೆ ಷರತ್ತು: ಇನ್ನು ಐದು ಗ್ಯಾರಂಟಿ ಭರವಸೆ ನೀಡಿ ಅಧಿಕಾರಕ್ಕೆ ಬಂದು ಆಗೊಂದು ಈಗೊಂದು ಗ್ಯಾರಂಟಿ ಷರತ್ತುಗಳ ಹಾಕಿ ಜಾರಿಗೆ ತಂದಿದ್ದಾರೆ. ಈ ಮೂಲಕ ರಾಜ್ಯದ ಜನರಿಗೆ ನಾಮ ಹಾಕುತ್ತಿದ್ದಾರೆ. 2600 ಜನರಿಗೆ ಗ್ಯಾರಂಟಿ ಜಾರಿ ತರಲು ಅಧಿಕಾರ ನೀಡಿದ್ದಾರೆ. 80 ಜನರಿಗೆ ಸಂಪುಟ ದರ್ಜೆ ನೀಡಿ ನಿಯಮ ಉಲ್ಲಂಘಿಸಿದ್ದಾರೆ. ಮುಲ್ಲಾಗಳಿಗೆ 10 ಸಾವಿರ ಕೋಟಿ ಇದೆ, ರೈತರಿಗೆ ಮಾತ್ರ ಇಲ್ಲ. ಭಾಗ್ಯಗಳ ಸರ್ಕಾರದಿಂದ ರೈತರಿಗೆ ಆತ್ಮಹತ್ಯೆ ಭಾಗ್ಯ ಸಿಕ್ಕಿದೆ. ಕಿಸಾನ್ ಸಮ್ಮಾನ್ಗೆ ರಾಜ್ಯದಿಂದ ಹಣ ಸೇರಿಸಿ ಕೊಡಲಾಗುತ್ತಿತ್ತು. ಅದನ್ನೂ ಕಿತ್ತುಕೊಂಡಿದ್ದಾರೆ. ರೈತ ವಿದ್ಯಾನಿಧಿಯನ್ನೂ ಹಾಳು ಮಾಡಿದರು. ನಿಮಗೆ ರೈತರ ಬಗ್ಗೆ ಯಾವ ಕಾಳಜಿ ಇದೆ? ವಿದ್ಯುತ್ ಕಣ್ಣಾಮುಚ್ಚಾಲೆ ಇದೆ. ವಿಧಾನಸೌಧ ವಿಕಾಸಸೌಧ ಜನರೇಟರ್ನಿಂದ ನಡೆಯುತ್ತಿರಬೇಕು ಅನ್ನಿಸುತ್ತಿದೆ. ಕೈಗಾರಿಕೆಗಳಿಗೂ ವಿದ್ಯುತ್ ಇಲ್ಲ. ಚಾತಕ ಪಕ್ಷಿಯಂತೆ ಅನುದಾನಕ್ಕಾಗಿ ಶಾಸಕರು ಕಾದು ಕುಳಿತಿದ್ದಾರೆ. ಸಿದ್ದರಾಮಯ್ಯ ನಾಳೆ ಬಾ ಎನ್ನುವ ಬೋರ್ಡ್ ಹಾಕಿಕೊಂಡು ಕುಳಿತಿದ್ದಾರೆ ಎಂದು ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರಂತ ಸಂಭಾವಿತ ಮತ್ತೊಬ್ಬರಿಲ್ಲ. ಯಾರ ಬಗ್ಗೆಯೂ ಏಕವಚನ ಪ್ರಯೋಗಿಸಲ್ಲ. ರಾಷ್ಟ್ರಪತಿ ಬಗ್ಗೆ ಮಾತ್ರ ಏಕವಚನ ಬರುತ್ತೆ. ಪ್ರಶ್ನಿಸಿದರೆ ಫ್ಲೋ ಅಲ್ಲಿ ಬಂತು ಅನ್ನುತ್ತಾರೆ. ರಾಹುಲ್, ಸೋನಿಯಾ ಬಗ್ಗೆಯೂ ಫ್ಲೋ ಬರುತ್ತಾ? ಒಮ್ಮೆ ಕರೆಯಿರಿ ನೋಡೋಣಾ? ಎಂದ ಆರ್ ಅಶೋಕ್, ರಾಮಮಂದಿರ ಉದ್ಘಾಟನೆ ನಂತರ ಇವರಿಗೆಲ್ಲಾ ತಲೆ ಕೆಟ್ಟಿದೆ. ರಾಮನ ಹುಟ್ಟಿದ ದಾಖಲೆ ಕೇಳುವ ಇವರ ತಾತನ ಹುಟ್ಟಿನ ದಾಖಲೆ ಇದೆಯಾ? ಎಂದು ಪ್ರಶ್ನಿಸಿದರು.
ಖರ್ಗೆ 400 ಸ್ಥಾನ ಎನ್ಡಿಎ ಗೆಲ್ಲಲಿದೆ ಎಂದಿದ್ದನ್ನು ಕೇಳಲು ದೆಹಲಿಗೆ ಹೋಗಿರಬಹುದು. ದೇಶ ವಿಭಜನೆ ಕುರಿತು ಸಂಸದ ಡಿಕೆ ಸುರೇಶ್ ಹೇಳಿಕೆ ಬೆಂಬಲಿಸಿ ಎಲ್ಲರೂ ದೆಹಲಿಗೆ ಹೋಗಿರಬಹುದು. ಮನಮೋಹನ್ ಸಿಂಗ್ ಸರ್ಕಾರ ಕೊಟ್ಟಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಮೋದಿ ಸರ್ಕಾರ ಕೊಟ್ಟಿದೆ. ಈ ಅಂಕಿ - ಅಂಶವನ್ನು ಕೂಡ ಮಾಜಿ ಸಿಎಂ ಬೊಮ್ಮಾಯಿ ಬಿಡುಗಡೆ ಮಾಡಿದ್ದಾರೆ. ನಮ್ಮ ಸರ್ಕಾರ ಇದ್ದಾಗಲೂ ಬರ ನೆರೆ ಇತ್ತು. ಆಗ ವಿಪತ್ತು ನಿಧಿ ಕಾಯ್ದೆಯ ಮಿತಿ ಬದೊಗೊತ್ತಿ ನಾವು ಹೆಚ್ಚಿನ ಪರಿಹಾರ ನೀಡಿದ್ದೆವು. ಕೇಂದ್ರ ಬಿಡುಗಡೆ ಮಾಡುವುದನ್ನು ಕಾಯದೇ ನಾವೇ ರಿಲೀಸ್ ಮಾಡಿ ಪರಿಹಾರ ನೀಡಿದ್ದೆವು. ನಮ್ಮ ಕಡತಗಳಲ್ಲಿ ಎಲ್ಲವೂ ಇದೆ. ಬರೀ ಒಂದೇ ತಿಂಗಳಿನಲ್ಲಿ ನಾವು ಹಣ ಬಿಡುಗಡೆ ಮಾಡಿದ್ದೆವು. ಇವರು 2 ಸಾವಿರ ಪರಿಹಾರ ನೀಡಲು ತೆಗೆದುಕೊಂಡ ಸಮಯ ಎಷ್ಟು ಅಂತ ರಾಜ್ಯದ ಜನ ನೋಡಿದ್ದಾರೆ ಎಂದು ಆರ್ ಅಶೋಕ್ ಕಿಡಿ ಕಾರಿದರು.
ಬೊಮ್ಮಾಯಿ ಹೇಳಿಕೆ: ರಾಜ್ಯದ ಇತಿಹಾಸದಲ್ಲಿ ಇಷ್ಟು ದೊಡ್ಡ ನಾಟಕ ಮಾಡುವ ಸರ್ಕಾರ ಮತ್ತೊಂದಿಲ್ಲ. ಎರಡನೇ ಬಾರಿ ಸಿದ್ದರಾಮಯ್ಯ ಸಿಎಂ ಆದ ನಂತರ ತಮ್ಮ ತತ್ವ ಆದರ್ಶಗಳನ್ನು ಗಾಳಿಗೆ ತೂರಿದ್ದಾರೆ. ಸ್ವಾರ್ಥ ಮತ್ತು ತಮ್ಮ ಕುರ್ಚಿ ಉಳಿಸಿಕೊಳ್ಳಲು ಈ ಹೋರಾಟ ಮಾಡುತ್ತಿದ್ದಾರೆ. ಕಾವೇರಿ, ಮಹದಾಯಿ ವಿಚಾರದಲ್ಲಿ ಎಡವಟ್ಟು ಮಾಡಿದರೆ, ರೈತರಿಗೆ ಬರ ಪರಿಹಾರ ನೀಡಿಲ್ಲ. ಯಾವ ನೈತಿಕತೆ, ಯಾವ ಮುಖ ಇಟ್ಟುಕೊಂಡು ಧರಣಿ ಮಾಡುತ್ತಿದ್ದೀರಿ ಎಂದು ಮಾಜಿ ಸಿಎಂ ಬೊಮ್ಮಾಯಿ ಕೂಡ ಪ್ರಶ್ನಿಸಿದರು.
ಮನಮೋಹನ್ ಸಿಂಗ್ ಸರ್ಕಾರ ಮತ್ತು ಮೋದಿ ಸರ್ಕಾರದ ಅವಧಿಯ ಅನುದಾನ ಬಿಡುಗಡೆ ವಿಚಾರವನ್ನು ಬಹಿರಂಗಪಡಿಸಿ, ಆಗ ಎಲ್ಲವೂ ಗೊತ್ತಾಗಲಿದೆ. 2014-2024ರ ವರೆಗೆ 2 ಲಕ್ಷ ಕೋಟಿ ಹೆಚ್ಚು ಅನುದಾನ ಮೋದಿ ಸರ್ಕಾರದಲ್ಲಿ ಬಂದಿದೆ. 30 ಪರ್ಸೆಂಟ್ ಇದ್ದ ತೆರಿಗೆ ವಾಪಸಾತಿಯನ್ನು ಶೇ.40ಕ್ಕೆ ಮೋದಿ ಹೆಚ್ಚಿಸಿದ್ದಾರೆ. ಅನುದಾನ ಕೇಂದ್ರ ನಿರ್ಧಾರ ಮಾಡಲ್ಲ, ಹಣಕಾಸು ಆಯೋಗ ನಿರ್ಧಾರ ಮಾಡಲಿದೆ. ಅನುದಾನ ಕಡಿತಕ್ಕೆ ಸಿದ್ದರಾಮಯ್ಯ ಕಾರಣವೇ ಹೊರತು ಮೋದಿ ಸರ್ಕಾರ ಅಲ್ಲ ಎಂದರು.
ಪೊಲೀಸ್ ವಶಕ್ಕೆ: ಗಾಂಧಿ ಪ್ರತಿಮೆ ಎದುರು ಧರಣಿ ನಂತರ ಸಿಎಂ ಕಚೇರಿಯತ್ತ ಹೊರಟ ಬಿಜೆಪಿ ನಾಯಕರು, ಬರ ಪರಿಹಾರ ಮಾಡದ ಸರ್ಕಾರದ ಧೋರಣೆ ಖಂಡಿಸಿ ಸಿಎಂ ಕಚೇರಿಗೆ ಬೀಗ ಹಾಕಲು ಮುಂದಾದರು. ಈ ವೇಳೆ ಬಿಜೆಪಿ ನಾಯಕರನ್ನು ತಡೆಯಲು, ವಿಧಾನಸೌಧದ ದ್ವಾರಕ್ಕೆ ಪೊಲೀಸರೇ ಬೀಗ ಹಾಕಿದ ಪ್ರಸಂಗ ನಡೆಯತು. ನಂತರ ಬಿಜೆಪಿ ನಾಯಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲಾಯಿತು.
ವಿಜಯೇಂದ್ರ ವಾಗ್ದಾಳಿ: ಬಳಿಕ ವೇಳೆ ಪೊಲೀಸ್ ಠಾಣೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ''ವಿಧಾನಸೌಧದ ಮಹಾದ್ವಾರಕ್ಕೆ ಬೀಗ ಹಾಕುತ್ತಾರೆ, ಶಾಸಕರಿಗೆ ಪ್ರವೇಶ ನೀಡಲಿಲ್ಲ ಎಂದರೆ ನಮಗೆ ಅಧಿಕಾರ ಇಲ್ಲವೇ? ನಮ್ಮ ಕಾರ್ಯಕರ್ತರು ಹೋರಾಟ ಮಾಡಿದರೆ ಅವರ ಮೇಲೆ ಲಾಠಿ ಪ್ರಹಾರ ಮಾಡುತ್ತಾರೆ. ಅಧಿಕಾರದ ಅಮಲಿನಲ್ಲಿರುವ ರಾಜ್ಯ ಸರ್ಕಾರ ಈ ರೀತಿ ದರ್ಪದಿಂದ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದರು.
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದಕ್ಕೆ ಇವರಿಗೆಲ್ಲ ಗಾಬರಿಯಾಗುತ್ತಿದೆ. ಮೋದಿ ಹೆಸರು ಕೇಳಿದರೆ ಇವರು ಗಾಬರಿಯಾಗುತ್ತಿದ್ದಾರೆ, ಜೈ ಶ್ರೀರಾಮ್ ಎನ್ನುವುದನ್ನು ಕೇಳಿದರೆ ಪ್ರಜ್ಞೆ ತಪ್ಪಿ ಬೀಳುತ್ತಿದ್ದಾರೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಖಂಡನೀಯ. ಸರ್ಕಾರವು ಜನರು ಹಾಗೂ ರೈತರ ಪಾಲಿಗೆ ಇದ್ದೂ ಸತ್ತಂತಾಗಿದೆ. ಬರಗಾಲ ನಿರ್ವಹಣೆಗೆ ಪೂರ್ವ ತಯಾರಿ ಇಲ್ಲ. ಭಿಕ್ಷೆ ಕೊಟ್ಟಂತೆ 2 ಸಾವಿರ ಕೊಡಲು ಮುಂದಾದರು, ಅದು ಕೂಡ ರೈತರನ್ನು ತಲುಪಿಲ್ಲ. ಆದರೆ, ದೆಹಲಿಯಲ್ಲಿ ಶೋಕಿ ಮಾಡಲು, ಪ್ರಚಾರ ಮಾಡಲು ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: 'ಇದು ರಾಜಕೀಯ ಚಳವಳಿ ಅಲ್ಲ, ಕರ್ನಾಟಕದ ಹಾಗೂ ಕನ್ನಡಿಗರ ಹಿತ ಕಾಯುವ ಚಳವಳಿ' : ಸಿಎಂ ಸಿದ್ದರಾಮಯ್ಯ