ಆನೇಕಲ್ (ಬೆಂಗಳೂರು): ಕೇಂದ್ರ ಬಜೆಟ್ದಿಂದ ಆಗಿರುವ ಅನ್ಯಾಯ ಕುರಿತು ನೀಡಿದ್ದ ನನ್ನ ಹೇಳಿಕೆಯನ್ನು ಬಿಜೆಪಿ ನಾಯಕರು ತಿರುಚಿ ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಎಂದು ಸಂಸದ ಡಿ ಕೆ ಸುರೇಶ್ ವಾಗ್ದಾಳಿ ನಡೆಸಿದರು.
ಬನ್ನೇರುಘಟ್ಟದ ಕಾವೇರಿ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಮೂರು ದಿನಗಳಿಂದ ಮಾಧ್ಯಮಗಳಲ್ಲಿ ಸುದ್ದಿ ನೋಡುತ್ತಿರುವೆ, ನನ್ನ ಮಾತನ್ನು ತಿರುಚಲಾಗಿದೆ. ನಾನು ನನ್ನ ರಾಜ್ಯದ ಜನರ ಹಿತ, ಕನ್ನಡಿಗರ ಗೌರವಕ್ಕಾಗಿ ಎಂದಿಗೂ ಹಿಂದೆ ಸರಿದಿಲ್ಲ. ಆದರೆ ನನ್ನ ಹೇಳಿಕೆಯನ್ನು ತಿರುಚಿ ನಾನು ದೇಶದ ವಿಭಜನೆಯ ಹೇಳಿಕೆ ನೀಡಿದ್ದೇನೆಂದು ಬಿಜೆಪಿ ನಾಯಕರು ಬೊಬ್ಬೆ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಅವರೆಲ್ಲರಿಗೂ ಒಳ್ಳೆಯದಾಗಲಿ, ನನ್ನನ್ನು ನಾಯಕನನ್ನಾಗಿ ಬಿಂಬಿಸುತ್ತಿದ್ದಾರೆ. ನಾನು ಕನ್ನಡಕ್ಕಾಗಿ ಕರ್ನಾಟಕದ ಹಿತಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧನಿದ್ದೇನೆ. ರಾಜ್ಯದ ಯಾವ ಪೊಲೀಸ್ ಠಾಣೆಗಾದರೂ ದೂರು ಕೊಡಲಿ, ಯಾವ ಕೋರ್ಟಿನಲ್ಲಾದರೂ ದೂರು ನೀಡಲಿ, ಆ ಕೇಸ್ಅನ್ನು ಎದುರಿಸಲಿಕ್ಕೆ ಜನರ ಆಶೀರ್ವಾದದಿಂದ ಸಿದ್ಧನಿದ್ದೇನೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿದ್ರು.
ತೆರಿಗೆಯ ಲೆಕ್ಕ ಕೊಡಿ ಅಂಥ ಕೇಳಿದ್ರೆ ದೇಶದ್ರೋಹಿ ಆಗ್ತೀನಾ; ಉಳಿದ ವಿಚಾರಗಳನ್ನು ನಾನು ಚರ್ಚಿಸಲು ಹೋಗಲ್ಲ, ಕನ್ನಡಿಗರಿಗಾದ ಅನ್ಯಾಯವನ್ನು ಪ್ರಶ್ನಿಸಿದರೆ ದೇಶ ದ್ರೋಹದ ಹಣೆಪಟ್ಟಿಯನ್ನು ಬಿಜೆಪಿಯವರು ಕಟ್ಟುತ್ತಿದ್ದಾರೆ. ಈ ರಾಜ್ಯದಿಂದ 25 ಸ್ಥಾನಗಳನ್ನು ನೀಡಿದ್ದೇವೆ. ಅಖಂಡ ಕರ್ನಾಟಕದ ನಾಲ್ಕು ಲಕ್ಷ ಕೋಟಿ ತೆರಿಗೆಯ ಲೆಕ್ಕ ಕೊಡಿ ಎಂದು ಕೇಳಿದ್ರೆ ದೇಶದ್ರೋಹಿ ಆಗ್ತೀನಾ? ರಾಜ್ಯದ ಪಾಲು ನೂರು ರೂ. ಕೊಡಬೇಕಾದರೆ ಅದರಲ್ಲಿ ಕೇವಲ 75 ಪೈಸೆ ಕೊಟ್ಟಿದ್ದೀರಿ, ಅದೇ ಉತ್ತರ ಪ್ರದೇಶಕ್ಕೆ 100 ರೂ. ಬದಲು 333 ರೂ. ಗಳನ್ನು ನೀಡಿ ತಾರತಮ್ಯ ಮಾಡಿದ್ದೀರಿ. ನಿಮಗೆ ಕನ್ನಡಿಗರ ದುಡ್ಡು ಕಾಣುತ್ತಿಲ್ಲಾ? ಬಿಜೆಪಿ ನಾಯಕರೇ ನಾನು ಕೇಳಿದ್ದು ತಪ್ಪಾ ಎಂದು ಸಂಸದ ಸುರೇಶ್ ಪ್ರಶ್ನಿಸಿದರು.
220 ತಾಲೂಕುಗಳು ಬರಪೀಡಿತ: ನಮ್ಮ ಕರ್ನಾಟಕದಲ್ಲಿ 220 ತಾಲೂಕುಗಳು ಬರಪೀಡಿತ ಅಂತ ಘೋಷಣೆಯಾಗಿವೆ. 10 ಪೈಸೆಯನ್ನೂ ಬಿಡುಗಡೆಗೊಳಿಸಲು ಸಿದ್ಧರಿಲ್ಲದ ನೀವು ನಿಮಗೆ ಬೇಕಾದಾಗ ಕ್ಷಣಮಾತ್ರದಲ್ಲಿ ಮುಖ್ಯಮಂತ್ರಿಗಳನ್ನೇ ಬದಲಿಸ್ತೀರಿ. ಕನ್ನಡಿಗರ ಹಾಗೂ ಇಲ್ಲಿನ ರೈತರ ನೋವು, ಬವಣೆ ನಿಮಗೆ ಅರ್ಥವಾಗಲ್ಲವಾ? ಸಹಾಯ ಮಾಡಲು ನಿಮಗೆ ಏನೂ ಅನ್ನಿಸಲ್ವಾ? ಮೇಕೆದಾಟು ಅನುಷ್ಠಾನಗೊಳಿಸಿ ಅಂದರೆ ಕ್ಯಾತೆ ತೆಗಿತೀರಿ. ನೀವು ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಗೊತ್ತಿದೆ ಎಂದು ಸಂಸದ ಡಿ ಕೆ ಸುರೇಶ್ ಆರೋಪಿಸಿದರು.
ನಾನೊಬ್ಬ ಭಾರತದ ಕನ್ನಡಿಗ, ದಕ್ಷಿಣ ಭಾರತದ ಭಾವನೆಯನ್ನು ಹೇಳಿದರೆ ನಿಮಗೆ ದೇಶದ್ರೋಹ ಅಂತನ್ನಿಸ್ತಿದೆಯಾ?
ಬಜೆಟ್ನಲ್ಲಿ ಆಗಿರುವ ಅನ್ಯಾಯವನ್ನು ಮರೆಮಾಚಲು ನನ್ನ ಹೇಳಿಕೆಯನ್ನ ತಿರುಚಿ ನೀವು ಡೋಂಗಿ ಹಿಂದುತ್ವ ಹಿಡಿದುಕೊಂಡು ಹೊರಟಿದ್ದೀರಿ ಎಂದು ಸಂಸದ ಡಿಕೆ ಸುರೇಶ್ ಬಿಜೆಪಿ ವಿರುದ್ಧ ಕಟುವಾಗಿ ಟೀಕಿಸಿದರು.
ಇದನ್ನೂ ಓದಿ:ನಗಾರಿ ಬಾರಿಸುವ ಮೂಲಕ ಹಂಪಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ