ಶಿವಮೊಗ್ಗ: ಅಹಂಕಾರಕ್ಕೆ ಮದ್ದರೆಯಲು ಕಮಲದ ಗುರುತಿಗೆ ಮತ ನೀಡಿ ಎಂದು ಬಿಜೆಪಿ ಮಾಜಿ ಶಾಸಕ ಕುಮಾರ ಬಂಗಾರಪ್ಪ ಕರೆ ಕೊಟ್ಟಿದ್ದಾರೆ. "ಚುನಾವಣೆ ಬಂದಾಗ ನಾನು ಅಭ್ಯರ್ಥಿ ಅಂತ ಕೆಲವರು ಬರುತ್ತಿದ್ದಾರೆ. ಡಾ.ರಾಜ್ಕುಮಾರ್ ಅವರಿಗೆ ರಾಜಕೀಯದ ಮೇಲೆ ಆಸೆ ಇತ್ತು. ಹಾಗಾಗಿ ಅವರ ಸೊಸೆಯನ್ನು ನಾವು ರಾಜಕೀಯಕ್ಕೆ ತಂದಿದ್ದೇವೆಂದು ಸುಳ್ಳು ಹೇಳುತ್ತಿದ್ದಾರೆ. ಡಾ.ರಾಜ್ ಅವರಿಗೆ ಆ ರೀತಿಯ ಆಸೆ ಇರಲಿಲ್ಲ" ಎಂದು ಅವರು ಹೇಳಿದರು.
"ಯಡಿಯೂರಪ್ಪನವರು ಸಿಎಂ ಆಗಿದ್ದಾಗ ನಮ್ಮ ಕ್ಷೇತ್ರ ಅನ್ನುತ್ತಿದ್ದಂತೆಯೇ ಯೋಜನೆಗೆ ಸಹಿ ಹಾಕಿ ಕಳುಹಿಸುತ್ತಿದ್ದರು. ಇವರು ಅಧಿಕಾರಕ್ಕೆ ಬಂದು ಒಂದು ವರ್ಷವಾಯಿತು, ಒಂದು ಪೈಸೆ ಕೂಡಾ ತಂದಿಲ್ಲ. ಅವರು ತಂದಿದ್ದು ಬರಗಾಲ" ಎಂದು ಟಾಂಗ್ ನೀಡಿದರು.
"ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಏರುಪೇರುಗಳಿಂದ ಮತ್ತು ಅವರ ಗ್ಯಾರಂಟಿಯ ಭರವಸೆಯಿಂದ ನಾವು ಸೋಲಬೇಕಾಯಿತು. ಪ್ರಧಾನಿ ಮೋದಿಯವರು ದೇಶದ ಜನತೆಗೆ ವಿಶ್ವಾಸ ನೀಡಿದ್ದಾರೆ. ಹಾಗಾಗಿ, ಇದರಿಂದ ಎಲ್ಲರೂ ಕಮಲದ ಚಿಹ್ನೆಗೆ ಮತ ನೀಡುವ ಮೂಲಕ ಬಿ.ವೈ.ರಾಘವೇಂದ್ರರನ್ನು ಆಯ್ಕೆ ಮಾಡಬೇಕು" ಎಂದು ಮನವಿ ಮಾಡಿದರು.
ಗೀತಾ ಅವರು ಗ್ರಾ.ಪಂಚಾಯತಿ ಚುನಾವಣೆಯಿಂದ ಬರಬೇಕಿದೆ: "ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಕನ್ನಡ ಚಿತ್ರರಂಗ ಬೆಂಬಲಿಸಿದೆ ಎಂದಾದರೆ, ನಾನೂ ಒಬ್ಬ ನಿರ್ಮಾಪಕ. ನನ್ನಂತೆಯೇ ಮುನಿರತ್ನ, ರಾಕ್ಲೈನ್ ವೆಂಕಟೇಶ್ ಸೇರಿ ಹಲವರಿದ್ದಾರೆ. ನಾವು ಯಾರೂ ಬೆಂಬಲ ನೀಡಿಲ್ಲ. ಗೀತಾ ಅವರು ಇಂತಹ ಇನ್ನೂ ಐದು ಚುನಾವಣೆ ನಡೆಸಿದರೂ ಸಹ ಗೆಲ್ಲುವುದಿಲ್ಲ. ಅವರು ಗ್ರಾಮ ಪಂಚಾಯತಿ ಚುನಾವಣೆಯಿಂದ ಬರಬೇಕಿದೆ" ಎಂದು ಹೇಳಿದರು.
"ಈಗ ಯಾರೋ ಮೈಕ್ ಹಿಡಿದುಕೊಂಡು ಬಂದಿದ್ದಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ" ಎಂದು ಈಶ್ವರಪ್ಪನವರ ಕುರಿತೂ ಸಹ ಪರೋಕ್ಷ ಟೀಕೆ ಮಾಡಿದರು.
"ಕಾಂಗ್ರೆಸ್ ಈಗ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ. ಅದೊಂದು ರೀತಿ ಪ್ರಾದೇಶಿಕ ಪಕ್ಷವಾಗಿದೆ. ಲೋಕಸಭಾ ಚುನಾವಣೆಯ ನಂತರ ರಾಜಕೀಯ ಅಲ್ಲೋಲ ಕಲ್ಲೋಲ ಆಗುವುದರಲ್ಲಿ ಅನುಮಾನವಿಲ್ಲ. ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ಶಿವಮೊಗ್ಗವೂ ಇರುತ್ತದೆ" ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ: ನಮಗೆ ವಿಷನ್ ಚಿಂತೆ, ಕಾಂಗ್ರೆಸ್ಗೆ ಕಮಿಷನ್ ಚಿಂತೆ: ಜಗತ್ ಪ್ರಕಾಶ್ ನಡ್ಡಾ - Nadda Slams State Govt