ಬೆಂಗಳೂರು: ರಾಜ್ಯದ ಪ್ರಮುಖ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಎನ್ಡಿಎ ಒಕ್ಕೂಟಕ್ಕೆ ಸೇರಿದ ನಂತರ ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನೊಳಗೊಂಡ ಮೊದಲ ಅಧಿಕೃತ ಸಭೆ ಇಂದು ನಡೆಯಿತು. ಪರಿಷತ್ ಉಪ ಚುನಾವಣೆ ಎದುರಿಸುವ ಕುರಿತ ಸಭೆಯ ಮೂಲಕ ಮುಂದಿನ ಲೋಕಸಭಾ ಚುನಾವಣೆಗೆ ಒಟ್ಟಾಗಿ ಹೋಗುವ ನಿರ್ಧಾರಕ್ಕೆ ಮುನ್ನುಡಿ ಬರೆಯಲಾಯಿತು.
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಡಾಲರ್ಸ್ ಕಾಲೊನಿಯಲ್ಲಿರುವ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ದೋಸ್ತಿ ನಾಯಕರ ಸಭೆ ನಡೆಯಿತು. ಉಪ ಚುನಾವಣೆಗೆ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಮಾತುಕತೆಯಾಯಿತು. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಮುಖಂಡ ನಿಖಿಲ್ ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶಂಪೂರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಮಾಜಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಡಾ. ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.
ಒಗ್ಗಟ್ಟಿನ ಮಂತ್ರ: ಮೈತ್ರಿ ಪಕ್ಷಗಳ ಮೊದಲ ಅಧಿಕೃತ ಜಂಟಿ ಸಭೆ ಇದಾಗಿದ್ದು, ಉಭಯ ಪಕ್ಷಗಳ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದರು. ಉಪ ಚುನಾವಣೆ ಗೆಲ್ಲುವ ಮೂಲಕ ಆಡಳಿತ ಪಕ್ಷಕ್ಕೆ ಎಚ್ಚರಿಕೆ ನೀಡಬೇಕು. ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 28 ಕ್ಷೇತ್ರ ಮೈತ್ರಿಕೂಟದ ಪಾಲಾಗಬೇಕು ಎನ್ನುವ ಕುರಿತು ಚರ್ಚಿಸಲಾಯಿತು. ಈ ಸಭೆಯ ಚರ್ಚೆಯ ವಿಷಯವನ್ನು ಬಿಜೆಪಿ ಹೈಕಮಾಂಡ್ ಗಮನಕ್ಕೆ ತಂದು ಮುಂದಿನ ಹೆಜ್ಜೆ ಇಡುವ ನಿರ್ಧಾರಕ್ಕೆ ಬರಲಾಯಿತು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ''ವಿಧಾನ ಪರಿಷತ್ಗೆ ಸೀಮಿತವಾಗಿ ಎಲ್ಲರೂ ಚರ್ಚೆ ಮಾಡಿದ್ದೇವೆ. ಚರ್ಚೆಯ ವಿಚಾರ ದೆಹಲಿಗೆ ತಿಳಿಸುತ್ತೇವೆ. ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ'' ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ''ಎರಡೂ ಪಕ್ಷದವರು ಒಟ್ಟಿಗೆ ಕುಳಿತು ವಿಧಾನ ಪರಿಷತ್ ಉಪ ಚುನಾವಣೆ ಎದುರಿಸಬೇಕಿದೆ. ಮುಂದೆ ಲೋಕಸಭಾ ಚುನಾವಣೆ ಕೂಡ ಬರ್ತಿದ್ದು, ಈ ಬಗ್ಗೆ ಚರ್ಚೆಯಾಗಿದೆ. ಅಭ್ಯರ್ಥಿ ಘೋಷಣೆ ಮಾಡಲು ಹೈಕಮಾಂಡ್‌ಗೆ ಸೂಚಿಸುತ್ತೇವೆ. ತಳಮಟ್ಟದಲ್ಲೂ ಎರಡೂ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಹೋಗಬೇಕು. ಎರಡೂ ಕಡೆ ಅಭ್ಯರ್ಥಿ ಇದ್ದಾರೆ. ಇದರಲ್ಲಿ ಗೊಂದಲ ಇಲ್ಲ. ಆದರೆ, ಒಟ್ಟಾಗಿ ಹೋಗುವ ನಿರ್ಧಾರ ಮಾಡಿದ್ದೇವೆ'' ಎಂದು ಹೇಳಿದರು.
ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ''ಇಂದಿನ ಸಭೆಯಲ್ಲಿ ಯಡಿಯೂರಪ್ಪ ಅವರ ಮನೆಯಲ್ಲಿ ಎರಡೂ ಪಕ್ಷದ ಪ್ರಮುಖ ನಾಯಕರು ಮಾಡಿದ್ದೇವೆ. ಪ್ರಥಮ ಹಂತದಲ್ಲಿ ಮೊದಲ ಸಭೆ ಮಾಡಿದ್ದೇವೆ. ಮುಂದೆ ವಿಧಾನಪರಿಷತ್ ಬೈ ಎಲೆಕ್ಷನ್ ಇದೆ. ಅಭ್ಯರ್ಥಿ ಆಯ್ಕೆ ಚರ್ಚೆ ಮಾಡಿದ್ದೇವೆ. ಬಿಜೆಪಿ ಹೈಕಮಾಂಡ್‌ಗೆ ಮಾಹಿತಿ ನೀಡುತ್ತೇವೆ. ಮುಂದಿನ ಚುನಾವಣೆಗೆ ಇಲ್ಲಿಂದಲೇ ಸಂದೇಶ ಕೊಡಲಿದ್ದೇವೆ. ಮೋದಿ ಅವರ ಕೈ ಬಲಪಡಿಲಸಲು ಒಟ್ಟಾಗಿ ಹೋಗ್ತೀವಿ. ರಾಜ್ಯದಲ್ಲಿ ಕೆಟ್ಟ ಸರ್ಕಾರ ಇದೆ, ಅದು ತೊಲಗಬೇಕು'' ಎಂದು ಕಿಡಿಕಾರಿದರು.
ಇದನ್ನೂ ಓದಿ: ಒಳ ಮೀಸಲಾತಿಗೆ ಕೇಂದ್ರ ಉನ್ನತ ಮಟ್ಟದ ಸಮಿತಿ ರಚಿಸಿರುವುದು ದಾರಿ ತಪ್ಪಿಸುವ ಕುತಂತ್ರ: ಸಿಎಂ