ಮೈಸೂರು: ಮುಡಾ ಹಗರಣದ ವಿಚಾರದಲ್ಲಿ ಬಿಜೆಪಿ ಬ್ಲ್ಯಾಕ್ಮೇಲ್ ತಂತ್ರ ಮಾಡುತ್ತಿದೆ. ಇಲ್ಲದ ಹಗರಣವನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಇಂದು ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯವರು ಮುಡಾ ವಿಚಾರದಲ್ಲಿ ಬ್ಲ್ಯಾಕ್ಮೇಲ್ ತಂತ್ರ ಮಾಡುತ್ತಿದ್ದಾರೆ. ಇಲ್ಲದ ಹಗರಣವನ್ನು ಸೃಷ್ಟಿಸುತ್ತಿದ್ದಾರೆ. ಬಿಜೆಪಿಯವರಿಗೆ ಯಾವ ಐಡಿಯಾಲಜಿಗಳೂ ಇಲ್ಲ. ಅವರು ಯಾವತ್ತು ನ್ಯಾಯದ ಪರವಾಗಿಲ್ಲ. ಈಗಾಗಲೇ ಮುಡಾ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇವೆ. ಇದಕ್ಕಿಂತ ಇನ್ನೇನು ಬೇಕು ಎಂದರು.
ನ್ಯಾಯಾಂಗ ತನಿಖೆಯನ್ನು ಕೇಂದ್ರ ಸಚಿವರು ಅನುಮಾನದಿಂದ ನೋಡಿದರೆ ಅದರಲ್ಲಿ ಅರ್ಥ ಇದೆಯಾ?. ಬಿಜೆಪಿ ಕಾಲದಲ್ಲಿ ಎಷ್ಟು ಭ್ರಷ್ಟಾಚಾರಗಳು ನಡೆದಿವೆ. ಯಾವುದಾದರೂ ನ್ಯಾಯಾಂಗ ತನಿಖೆಗೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ನಮ್ಮ ಅವಧಿಯಲ್ಲಿ 7-8 ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೇವೆ ಎಂದು ಹೇಳಿದರು.
ಮುಡಾ ಹಗರಣ ವಿಚಾರದಲ್ಲಿ ನನಗೆ ಯಾವ ಬೇಸರವಿಲ್ಲ. ತಪ್ಪೇ ಮಾಡಿಲ್ಲ ಅಂದ್ರೆ ಬೇಸರ ಯಾಕೆ?. 40 ವರ್ಷ ರಾಜಕಾರಣದಲ್ಲಿ ನನ್ನ ಮೇಲೆ ಬಹಳ ಆರೋಪಗಳು ಬಂದಿವೆ. ಇದನ್ನು ರಾಜಕೀಯವಾಗಿ ಎದುರಿಸುತ್ತೇನೆ. ಬಿಜೆಪಿಯವರು ಪಾದಯಾತ್ರೆ ಮಾಡುವುದಾದರೆ ಮಾಡಲಿ. ಅದನ್ನು ರಾಜಕೀಯವಾಗಿ ಎದುರಿಸಲು ನಾವೂ ಸಹ ಪಾದಯಾತ್ರೆ ಮಾಡುತ್ತೇವೆ ಎಂದು ತಿಳಿಸಿದರು.
ಕುಮಾರಸ್ವಾಮಿ ಮುಡಾದಲ್ಲಿ ಸೈಟ್ ಪಡೆದಿದ್ದಾರೆ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಎಷ್ಟು ಸೈಟ್ ಹೋಗಿದೆ ಗೊತ್ತಿದೆಯಾ?, ಪುಟ್ಟಯ್ಯ ಸಿಐಟಿಬಿ ಅಧ್ಯಕ್ಷರಾಗಿದ್ದಾಗ ದೇವೇಗೌಡರ ಕುಟುಂಬ ಎಷ್ಟು ಸೈಟ್ ಬರೆಸಿಕೊಂಡಿದ್ದಾರೆ ಎಂಬುದನ್ನು ಪಟ್ಟಿ ಕೊಡದೆ ಕುಮಾರಸ್ವಾಮಿ 40 ವರ್ಷದ ಹಿಂದೆ ಮುಡಾದಲ್ಲಿ ಸೈಟ್ ಪಡೆದಿದ್ದಾರೆ. ಅದರ ಸ್ವಾಧೀನ ಪತ್ರವನ್ನು ಪಡೆದಿದ್ದಾರೆ. ಈಗ ನಾನು ಸೈಟ್ ಪಡೆದಿಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಟೀಕಿಸಿದರು.
'ನನ್ನ ಅವಧಿಯಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆ': ನನ್ನ ಅವಧಿಯಲ್ಲಿ ಭ್ರಷ್ಟಾಚಾರ ಸಂಪೂರ್ಣ ಹೋಗಿದೆ ಎಂದು ಹೇಳಲು ಹೋಗುವುದಿಲ್ಲ. ಆದರೆ ಕಡಿಮೆಯಾಗಿದೆ ಎಂದು ಹೇಳಬಲ್ಲೆ. ಈ ಹಿಂದೆ ಬಿಜೆಪಿ ಕಾಲದಲ್ಲಿ ಭ್ರಷ್ಟಾಚಾರ ಎಷ್ಟಿತ್ತು ಎಂದು ಎಂಬುದನ್ನು ದೇಶವೇ ನೋಡಿದೆ. ಈಗ ಬಿಜೆಪಿಯವರು ಕರ್ನಾಟಕವನ್ನು ಭ್ರಷ್ಟಾಚಾರ ರಾಜ್ಯವೆಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಸಂಸತ್ತನಲ್ಲೂ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಹೇಳಿದರು.
'ಮೇಕೆದಾಟು ಅಣೆಕಟ್ಟು ಕಟ್ಟಲು ಸಿದ್ಧ': ಮೇಕೆದಾಟು ಅಣೆಕಟ್ಟು ಕಟ್ಟಲು ನಾವು ಸಿದ್ದರಿದ್ದೇವೆ. ತಮಿಳುನಾಡಿನವರು ರಾಜಕೀಯ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಮಧ್ಯಸ್ಥಿಕೆ ವಹಿಸಿದರೆ ನಾವು ಅಣೆಕಟ್ಟು ಕಟ್ಟಲು ಸಿದ್ದ ಎಂದರು.
'ನೀತಿ ಆಯೋಗದ ಸಭೆಗೆ ಉದ್ದೇಶಪೂರ್ವಕ ಗೈರು': ಉದ್ದೇಶಪೂರ್ವಕವಾಗಿಯೇ ನೀತಿ ಆಯೋಗದ ಸಭೆಗೆ ಗೈರು ಆಗಿದ್ದೇವೆ. ನಾನಲ್ಲದೇ ಬಿಜೆಪಿಯೇತರ ಸರ್ಕಾರದ ರಾಜ್ಯಗಳು ಕೂಡಾ ಬಹಿಷ್ಕಾರ ಮಾಡಿವೆ. ರಾಜ್ಯಕ್ಕೆ ನ್ಯಾಯ ಸಿಗದ ಮೇಲೆ ಸಭೆಗೆ ಹೋಗಿ ಏನು ಪ್ರಯೋಜನ?. ಈಗಾಗಲೇ ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಸಂಪೂರ್ಣ ಅನ್ಯಾಯವಾಗಿದೆ. ರಾಜ್ಯಕ್ಕೆ ನ್ಯಾಯ ಒದಗಿಸುವಲ್ಲಿ ನಿರ್ಮಾಲಾ ಸೀತಾರಾಮನ್ ಹಾಗೂ ಸಂಸದ ಹೆಚ್.ಡಿ.ಕುಮಾರಸ್ವಾಮಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ರಾಜ್ಯದಿಂದ ಕೈಗಾರಿಕೆಗಳು ವಾಪಸ್ ಹೋಗುತ್ತಿವೆ ಎಂಬ ನಿರ್ಮಲಾ ಸೀತಾರಾಮ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ರಾಜ್ಯದಿಂದ ಅಲ್ಲ, ದೇಶದಿಂದಲೇ ಕೈಗಾರಿಕೆಗಳು ಹೊರ ದೇಶಕ್ಕೆ ವಾಪಸ್ ಹೋಗುತ್ತಿವೆ. ಕರ್ನಾಟಕದಲ್ಲಿ ಎಷ್ಟು ಕೈಗಾರಿಕೆಗಳ ಬೆಳವಣಿಗೆ ಆಗಿವೆ ಎಂಬುದನ್ನು ಸಚಿವ ಎಂ.ಬಿ.ಪಾಟೀಲ್ ಹಾಗೂ ಪ್ರಿಯಾಂಕ್ ಖರ್ಗೆಯಿಂದ ಪಟ್ಟಿ ಕೊಡುವಂತೆ ಕೇಳುತ್ತೇನೆ. ನಾನು ಹಾಗೂ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿ ಪಕ್ಷ ಹಾಗೂ ಸರ್ಕಾರದ ವಿಚಾರವಾಗಿ ಹೈಕಮಾಂಡ್ ಜೊತೆ ಚರ್ಚಿಸುತ್ತೇವೆ ಎಂದರು.
'ಸಿದ್ದರಾಮಯ್ಯ ಕಾಲ್ಗುಣ ಸರಿ ಇಲ್ಲ ಎನ್ನುತ್ತಿದ್ದರು': ಸಿದ್ದರಾಮಯ್ಯ ಕಾಲ್ಗುಣ ಸರಿಯಿಲ್ಲ, ಮಳೆ ಬರುವುದಿಲ್ಲ ಎನ್ನುತ್ತಿದ್ದರು. ಈಗ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚಿನ ನೀರು ಹರಿದು ಹೋಗಿದೆ. ಕರ್ನಾಟಕ ತಮಿಳುನಾಡಿನ ಜನ ಸಂತೋಷವಾಗಿದ್ದಾರೆ. ಎರಡು ರಾಜ್ಯಗಳ ಕೆರೆಕಟ್ಟೆಗಳು ತುಂಬಿವೆ. ಹಾಗಾಗಿ ಬಾಗಿನ ಅರ್ಪಿಸಲು ಬಂದಿದ್ದೇವೆ. ಈ ಶುಭ ಸಂದರ್ಬದಲ್ಲಿ ಯಾವುದೇ ರಾಜಕೀಯವಾಗಿ ಮಾತನಾಡುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಸರ್ಕಾರ ಅನುಮತಿ ಕೊಡಲ್ಲ: ಸಚಿವ ಜಿ.ಪರಮೇಶ್ವರ್ - BJP JDS March