ಹುಬ್ಬಳ್ಳಿ: "ಯಾವುದೇ ಸರ್ಕಾರವನ್ನು ಕೆಡುವುವ ದುಸ್ಸಾಹಸಕ್ಕೆ ನಾವಾಗಲೀ, ಹೈಕಮಾಂಡ್ ಆಗಲೀ ಕೈ ಹಾಕಲ್ಲ. ಸರ್ಕಾರ ತಾನಾಗಿಯೇ ಬಿದ್ದರೆ, ನಾವು ಸನ್ಯಾಸಿಗಳಲ್ಲ" ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ಕೆಲಸ ಮಾಡಲ್ಲ. ಕಾಂಗ್ರೆಸ್ಗೆ ಜನರು ಜನಾಭಿಪ್ರಾಯ ಕೊಟ್ಟು ಒಳ್ಳೆಯ ಅಧಿಕಾರ ಕೊಟ್ಟಿದ್ದಾರೆ. ಆದರೆ ಭ್ರಷ್ಟಾಚಾರ ಮಾಡಲಿ ಹಾಗೂ ಪೊಲೀಸ್ ಹತ್ಯೆ ಮಾಡಲಿ ಎಂದು ಹೇಳಿಲ್ಲ" ಎಂದರು.
ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಲು ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, "ನಾನೊಬ್ಬ ಜನಪ್ರತಿನಿಧಿ. ಪಕ್ಷದ ಹಿರಿಯರು ಗಮನಿಸುತ್ತಾರೆ. ಪಕ್ಷದ ಪ್ರಮುಖರು ಕರೆದು ಮಾತನಾಡಲಿದ್ದು, ಯಾವುದೇ ಭಿನ್ನಾಭಿಪ್ರಾಯ ಇಲ್ಲ" ಎಂದು ಸ್ಪಷ್ಟಪಡಿಸಿದರು.
"ಸಿಎಂ, ಡಿಸಿಎಂ ನಿಮ್ಮ ಕಾಲದಲ್ಲಿ ಹಗರಣವಾಗಿತ್ತು ಎನ್ನುತ್ತಿದ್ದಾರೆ. ನಾವು ಹಗರಣ ಮಾಡಿದ್ದೇವೋ, ಬಿಟ್ಟಿದ್ದೇವೋ ಗೊತ್ತಿಲ್ಲ. ಈಗ ನಿಮ್ಮದೇ ಸರ್ಕಾರ ಇದೆ. ನಿಮಗೆ ಮಾಹಿತಿಯಿದ್ದರೆ ತನಿಖೆ ನಡೆಸಿ, ಇಲ್ಲವೇ ಸಿಬಿಐ ತನಿಖೆಗೆ ವಹಿಸಲಿ. ರಾಜ್ಯದ ಜನತೆಗೆ ಸತ್ಯಾಸತ್ಯತೆ ಗೊತ್ತಾಗಲಿ" ಎಂದು ಸವಾಲು ಹಾಕಿದರು.
"ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯ ದಿವಾಳಿ ಹಂತಕ್ಕೆ ಬಂದು ನಿಂತಿದೆ. ಕೂಡಲೇ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು" ಎಂದು ಮಹೇಶ್ ಟೆಂಗಿನಕಾಯಿ ಒತ್ತಾಯಿಸಿದರು.
"ಮುಡಾ, ವಾಲ್ಮೀಕಿ ಹಗರಣಗಳ ಆರೋಪವನ್ನು ಕಾಂಗ್ರೆಸ್ ಸರ್ಕಾರ ಹೊತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಜೊತೆಗೂಡಿ ಪಾದಯಾತ್ರೆ ಮಾಡುತ್ತಿದೆ. ಈಗಾಗಲೇ ಜನರಿಂದ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಜನರು ಸ್ವಯಂಚಾಲಿತವಾಗಿ ಭ್ರಷ್ಟಾಚಾರಿ ಸರ್ಕಾರವನ್ನು ತೆಗೆದುಹಾಕಬೇಕೆಂದು ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ" ಎಂದರು.
"ಪಾದಯಾತ್ರೆ ಆರಂಭದ ಬಳಿಕ ರಾಜ್ಯಕ್ಕೆ ಕಾಂಗ್ರೆಸ್ ನಾಯಕರಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೇವಾಲ ಬಂದಿದ್ದಾರೆ. ಇವರು ರಾಜ್ಯ ಕಾಂಗ್ರೆಸ್ಗೆ ಶಿಕ್ಷೆ ನೀಡುತ್ತಾರೆ ಎಂಬ ಭಾವನೆ ನಮ್ಮಲ್ಲಿತ್ತು. ಆದರೆ ಈ ನಾಯಕರು ಭ್ರಷ್ಟಾಚಾರಿಗಳನ್ನು ಬೆಂಬಲಿಸಿದ್ದಾರೆ. ಇದನ್ನು ನೋಡಿದರೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಾಂಗ್ರೆಸ್ ಹೈಕಮಾಂಡ್ ಎಟಿಎಂ ಆಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂಬುದು ಸ್ಪಷ್ಟ" ಎಂದು ಹೇಳಿದರು.
"ಮುಡಾ ಹಗರಣ, ವಾಲ್ಮೀಕಿ ಹಗರಣದ ಸಮಸ್ಯೆಗಳು ದಿನ ದಿನಕ್ಕೆ ಜಟಿಲವಾಗುತ್ತಿವೆ. ನಾವು ಸಮಾಜವಾದಿ ಹಿನ್ನೆಲೆಯಲ್ಲಿ ಬಂದವರು ಎಂದು ಹೇಳಿಕೊಳ್ಳುವ ಸಿಎಂ ಸತ್ಯ ಹರಿಶ್ಚಂದ್ರರಾಗಿದ್ದರೆ, ಯಾಕೆ ಸದನ ನಡೆದಾಗಲೇ ಭಯಭೀತರಾಗಿದ್ದರು? ಸರಿಯಾದ ಉತ್ತರ ಕೊಡದೇ ಒಂದು ದಿನದ ಮೊದಲೇ ಸದನವನ್ನು ಮೊಟಕುಗೊಳಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ರಾಜೀನಾಮೆ ಪಡೆಯಲು ಮುಂದಾಗಬೇಕಿದೆ" ಎಂದು ಒತ್ತಾಯಿಸಿದರು.
"ರಾಜ್ಯದಲ್ಲಿ ವರ್ಗಾವಣೆ ದಂಧೆ ಹೆಚ್ಚಾಗಿದೆ. ಎಲ್ಲ ಹಂತದಲ್ಲಿ ವರ್ಗಾವಣೆ ಪಿಡುಗು ನಡೆಯುತ್ತಿದೆ. ಇದು ಅನೇಕ ಸಮಸ್ಯೆಗಳನ್ನು ತಂದೊಡ್ಡಿದೆ. ಅಷ್ಟೇ ಅಲ್ಲದೇ ಅನೇಕರು ಜೀವ ಕೊಟ್ಟಿದ್ದಾರೆ. ಇಂದೂ ಸಹ ತಿಮ್ಮೇಗೌಡ ಎಂಬ ಅಧಿಕಾರಿ ವರ್ಗಾವಣೆ ದಂಧೆಗೆ ಬಲಿಯಾಗಿದ್ದಾರೆ. ಇದು ಅವರ ಕುಟುಂಬದ ಹೇಳಿಕೆ ಮೂಲಕ ಗೊತ್ತಾಗಿದೆ. ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಗೆ ಬೆಂಬಲ ಸೂಚಿಸಲು ಧಾರವಾಡ ಜಿಲ್ಲೆಯಿಂದ ನಾಲ್ಕನೇ ದಿನದಲ್ಲಿ 2 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆ ಅಂತ್ಯಗೊಳ್ಳುವ ಮೊದಲೇ ರಾಜ್ಯದಲ್ಲಿ ಸಿಎಂ ರಾಜೀನಾಮೆ ಖಚಿತವಾಗಲಿದೆ" ಎಂದು ಭವಿಷ್ಯ ನುಡಿದರು.
ಬಿಜೆಪಿ ಮುಖಂಡರಾದ ವೀರಣ್ಣ ಸವಡಿ, ತಿಪ್ಪಣ್ಣ ಮಜ್ಜಗಿ, ರಾಮಣ್ಣ ಬಡಿಗೇರ್, ರವಿ ನಾಯಕ, ಹಾಗೂ ದುರ್ಗಮ್ಮ ಬಿಜವಾಡ ಸುದ್ದಿಗೋಷ್ಠಿಯಲ್ಲಿ ಇದ್ದರು.